Showing posts with label ತತ್ತ್ವವಿಚಾರ. Show all posts
Showing posts with label ತತ್ತ್ವವಿಚಾರ. Show all posts

Tuesday, April 28, 2026

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ


ಪೀಠಿಕೆ:

ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳು ಸವೆದುಹೋದಾಗ ಮತ್ತು ಹೊಸ ಮೌಲ್ಯಗಳು ಇನ್ನೂ ರೂಪಗೊಳ್ಳದಿದ್ದಾಗ ಸಮಾಜವು ಒಂದು ರೀತಿಯ ಅಸ್ಥಿರತೆಗೆ ಒಳಗಾಗುತ್ತದೆ. ಡಿ.ವಿ.ಜಿ ಅವರು ಈ ಸ್ಥಿತಿಯನ್ನು 'ಪ್ರೇತ'ದ ರೂಪಕದ ಮೂಲಕ ಈ ಪದ್ಯದಲ್ಲಿ ಚಿತ್ರಿಸಿದ್ದಾರೆ.


ಕಗ್ಗ:

ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ|
ವಲೆವಂತೆ ಲೋಕ ತಲ್ಲಣಿಸುತಿಹುದಿಂದು||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|
ತಳಮಳಕೆ ಕಡೆಯೆಂದೊ?-ಮಂಕುತಿಮ್ಮ||



ವ್ಯಾಖ್ಯಾನ:

ಪ್ರೇತಾವಸ್ಥೆಯೆಂದರೆ ಮರಣದ ನಂತರ ಪ್ರಯಾಣದಲ್ಲಿರುವ ಆತ್ಮದ ಸ್ಥಿತಿ. ಈ ಭೂಮಿಯನ್ನು ಬಿಟ್ಟು ಎಲ್ಲಿಗೂ ಹೋಗದ ಪ್ರೇತದಂತೆ ಲೋಕ ತಲ್ಲಣಿಸುತ್ತಲಿದೆ. ಹಳೆಯ ಧರ್ಮ ಸತ್ತುಹೋಗಿದೆ; ಹೊಸದಾದ ಧರ್ಮವಿನ್ನೂ ಹುಟ್ಟಲಿಲ್ಲ. ಈ ತಳಮಳಕ್ಕೆ ಕೊನೆಯೆಂದು ಎಂಬುದು ತಿಳಿಯದಾಗಿದೆ ಎಂದಿದ್ದಾರೆ.


ದೇಹವನ್ನು ಬಿಟ್ಟ ಆತ್ಮಕ್ಕೆ ಪರಲೋಕದ ದಾರಿ ಸಿಗದಿದ್ದಾಗ ಅದು ಹೇಗೆ ಭೂಮಿಯ ಮೇಲೆಯೇ ಅಲೆಯುತ್ತದೆಯೋ, ಹಾಗೆಯೇ ಇಂದಿನ ಲೋಕವು ದಿಕ್ಕು ಕಾಣದೆ ತಲ್ಲಣಿಸುತ್ತಿದೆ. ನಾವು ಹಳೆಯ ಸಂಪ್ರದಾಯಗಳನ್ನು 'ಮೌಢ್ಯ'ವೆಂದು ಬಿಡುತ್ತಿದ್ದೇವೆ, ಆದರೆ ಆಧುನಿಕತೆಯ ಹೆಸರಿನಲ್ಲಿ ನಮಗೆ ಸಿಗುತ್ತಿರುವ ಭೌತಿಕ ಸುಖಗಳು ಅಂತರಂಗದ ಶಾಂತಿಯನ್ನು ನೀಡುತ್ತಿಲ್ಲ.


"ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ" ಎಂಬ ಸಾಲು ಅತ್ಯಂತ ಪ್ರಸ್ತುತ. ವಿಜ್ಞಾನವು ಹಳೆಯ ನಂಬಿಕೆಗಳನ್ನು ಪ್ರಶ್ನಿಸಿ ಸಾಯಿಸಿದೆ. ಆದರೆ ವಿಜ್ಞಾನ ಅಥವಾ ತರ್ಕವು ಮನುಷ್ಯನಿಗೆ ಬದುಕಿನ ಉದ್ದೇಶವನ್ನಾಗಲೀ ಅಥವಾ ನೈತಿಕ ಸ್ಥೈರ್ಯವನ್ನಾಗಲೀ ಇನ್ನೂ ನೀಡಲು ಸಾಧ್ಯವಾಗಿಲ್ಲ. ಈ ಎರಡರ ನಡುವಿನ 'ಶೂನ್ಯ'ವೇ ಇಂದಿನ ಲೋಕದ ತಳಮಳಕ್ಕೆ ಕಾರಣ.


ಇದು ಕೇವಲ ಧಾರ್ಮಿಕ ಬದುಕಿನ ಕುರಿತ ಮೌಖಿಕ ಉಪದೇಶವಲ್ಲ; ಬದುಕುವುದನ್ನು ಕ್ರಮಗೊಳಿಸಬೇಕಾದ ವಿಧಾನವೂ ಇಲ್ಲಿ ಪರಾಮರ್ಶಿಸಲ್ಪಟ್ಟಿದೆ. ಹಳೆಯ ತಲೆಮಾರಿನ ಸಂಯಮ ಮತ್ತು ಹೊಸ ತಲೆಮಾರಿನ ಆವೇಗಗಳೆರಡರ ನಡುವಣ ಸೆಣಸಾಟದಲ್ಲಿ ಸಿಲುಕಿದ ಸಮಾಜದ 'ಪ್ರೇತಾವಸ್ಥೆ'ಯನ್ನು ಡಿ.ವಿ.ಜಿ ಇಲ್ಲಿ ಪ್ರಶ್ನಿಸುತ್ತಿದ್ದಾರೆ.


ತಾತ್ಪರ್ಯ:

ಈ ಅತಂತ್ರ ಸ್ಥಿತಿ ಅಥವಾ ತಳಮಳಕ್ಕೆ ಕೊನೆಯೆಂದು? ಎಂಬ ಕವಿಯ ಪ್ರಶ್ನೆಯು ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ. ನಾವು ಯಾವುದನ್ನು 'ಧರ್ಮ'ವೆಂದು ಸ್ವೀಕರಿಸಬೇಕು ಮತ್ತು ಈ ಗೊಂದಲದಿಂದ ಹೊರಬರುವುದು ಹೇಗೆ ಎಂಬುದು ಈ ಪದ್ಯದ ಅಂತರಾರ್ಥ.


ಉಪಸಂಹಾರ:

ಸಗ್ಗ ಸುಖಕ್ಕಾಗಿ ಹಾತೊರೆಯುವುದು ಜೀವನ ಎಂಬ ಭ್ರಮೆ ಲೋಕದಲ್ಲಿದೆ. ಆದರೆ ಇಲ್ಲಿರುವುದು ಕಗ್ಗ ಸುಖದ ರಸಾಸ್ವಾದನೆಗೊಂದು ಅಪರೂಪದ ಅವಕಾಶ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.



#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻




ಕೃಷ್ಣಪ್ರಕಾಶ ಬೊಳುಂಬು

Saturday, April 25, 2026

ಕಗ್ಗಮಾಲಿಕೆ – ೪: ನಿರ್ವಚನಾತೀತ

 ಕಗ್ಗಮಾಲಿಕೆ – ೪: ನಿರ್ವಚನಾತೀತ


ಕಗ್ಗ:


ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|

ಮಹಿಮೆಯಿಂ ಜಗವಾಗಿ ಜೀವವೇಷದಲಿ||

ವಿಹಿಪುದದೊಳ್ಳಿತೆಂಬುದು ನಿಸದವಾದೊಡಾ|

ಗಹನ ತತ್ತ್ವಕ್ಕೆ ಶರಣೊ-ಮಂಕುತಿಮ್ಮ|| 


ವ್ಯಾಖ್ಯಾನ:

ಇದೆಯೋ ಇಲ್ಲವೋ ಎಂದು ತಿಳಿಯಲಾಗದ ವಸ್ತುವೊಂದು ಲೋಕದಲ್ಲಿ ಒಳ್ಳೆಯದನ್ನು ಮಾಡುತ್ತದೆಂದು ನಿನಗೆ ನಿಶ್ಚಯವಾದರೆ ಆ ಗಹನ ತತ್ತ್ವಕ್ಕೆ ಶರಣಾಗು.


ತಾತ್ಪರ್ಯ:

ಎಲ್ಲವನ್ನೂ ಒಳಗೊಂಡ ಎಲ್ಲದರ ಹಿಡಿವಡೆದ ಎಲ್ಲದಕ್ಕೂ ಮಿಗಿಲಾದ ಚೈತನ್ಯವೊಂದಿದೆ. ಅದು ಗಹನವಾದ ತತ್ತ್ವ; ಅದು ವಿವರಣೆಗೆ ನಿಲುಕದಂತಹುದು. ಅದು ನಿನಗೆ ಒಳಿತನ್ನು ಮಾಡುವುದೆಂದು ನಿಶ್ಚಯವಾದರೆ ಚಿಂತನೆಗೆ ನಿಲುಕದ ಆ ಪರಮತ್ತ್ವಕ್ಕೆ ಶರಣಾಗು. ಇದು ಈ ಕಗ್ಗದ ತಾತ್ಪರ್ಯ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಅನುರಣನಗಳಲ್ಲಿ ಕಗ್ಗದ ಕಂಪು ಮೈದೋರುವಂತಾಗಲಿ.


#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻




ಕೃಷ್ಣಪ್ರಕಾಶ ಬೊಳುಂಬು

Thursday, April 16, 2026

ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ

ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ



ಪದ್ಯ:

ನಿಸ್ಕಾರ ನಮಸ್ಕಾರಗಳ ಹಲವಾವರ್ತಿಗಳ ಮಾಡಿ

ಸುಜೂದುಗಳ ಹಲವು ರಕ್ಕಾಯ್ತುಗಳನೋದಿ

ಅರಿಯಬೇಕಿದ್ದುದನರಿಯಲಿಲ್ಲ

ಅರಿಯಬೇಕಿದ್ದ ಬಗೆ ಅರಿಯಲಿಲ್ಲ ಎನ್ನುವನು ಸೂಫಿ


ಅರ್ಥಗಳು:

ನಿಸ್ಕಾರ = ಸಲಾತ್ ಸಲ್ಲಿಕೆ, ಆವರ್ತಿ = ಆವರ್ತನ, ಸುಜೂದು = ತಲೆಬಾಗುವಿಕೆ (ಮಂತ್ರ ಪಠಣದೊಂದಿಗೆ), ರಕ್ಕಾಯ್ತು = ಆವರ್ತನ


ವಿವರಣೆ:

"ರಕ್ಕಾಯ್ತುಗಳನ್ನು ಓದುವುದು" ಎಂಬ ಪ್ರಯೋಗ ಚಾಲ್ತಿಯಲ್ಲಿದೆ ಮತ್ತು ಅದನ್ನು ಯಥಾವತ್ತಾಗಿ ಇಲ್ಲಿ ಅನುಸರಿಸಲಾಗಿದೆ. ಮಂತ್ರಗಳನ್ನು ಉಚ್ಚರಿಸುತ್ತ ಕ್ರಮದಂತೆ ತಲೆಬಾಗಿ ಪ್ರಾರ್ಥಿಸುವುದನ್ನು "ಸುಜೂದುಗಳನ್ನು ಓದುವುದು" ಎನ್ನಲಾಗುತ್ತದೆ. ದಿನಕ್ಕೆ ಐದು ಬಾರಿ ಮಾಡುವ ಪ್ರಾರ್ಥನೆಯನ್ನು ನಿಸ್ಕಾರ (ಸಲಾತ್) ಎನ್ನಲಾಗುತ್ತದೆ. ನಿಸ್ಕಾರ ಎಂಬ ಪದ ಕೇರಳದಲ್ಲಿ ಮತ್ತು ಕರ್ನಾಟಕದ ಕರಾವಳಿಯಲ್ಲಿ ನಮಸ್ಕಾರ ಎಂಬ ಅರ್ಥದಲ್ಲಿಯೇ ಪ್ರಯೋಗಿಸಲ್ಪಡುತ್ತದೆ.


ಅದೆಷ್ಟೋ ಸಲ ನಿಸ್ಕಾರ ಮಾಡಲಾಗುತ್ತದೆ; ಇನ್ನೆಷ್ಟೋ ಸಲ ನಮಸ್ಕಾರ ಮಾಡಲಾಗುತ್ತದೆ. ಆದರೆ ಅರಿಯಬೇಕಿದ್ದುದನ್ನು ಅರಿಯಲೇ ಇಲ್ಲ; ಅರಿಯಬೇಕಿದ್ದ ಬಗೆಯನ್ನೂ ಅರಿಯಲಿಲ್ಲ. 


ಇಲ್ಲಿನ ಸಾಲುಗಳು ಯಾವುದೇ ಒಂದು ಸಮುದಾಯದ ವಿರೋಧವಲ್ಲ ಅಥವಾ ಕೇವಲ ಆಚರಣೆಯ ಟೀಕೆಯಲ್ಲ. ಬದಲಾಗಿ, "ಮೂಲ ತತ್ತ್ವಗಳನ್ನು ಮರೆಯುವ ಎಲ್ಲರಿಗೂ" ಅನ್ವಯಿಸುವ ಒಂದು ಸಾರ್ವತ್ರಿಕ ಎಚ್ಚರಿಕೆ. 'ನಿಸ್ಕಾರ' ಅಥವಾ 'ರಕ್ಕಾಯ್ತು'ಗಳನ್ನು ಓದುವುದು ಒಂದು ಸಾಧನವಷ್ಟೇ; ಆದರೆ ಆ ಸಾಧನದ ಮೂಲಕ ತಲುಪಬೇಕಾದ 'ಅರಿವು' (ಜ್ಞಾನ) ಎಂಬುದು ಇಲ್ಲಿನ ಮುಖ್ಯ ಆಶಯ. 


ಸಮಾಜದ ಅರೆಕೊರೆಗಳನ್ನು ಪ್ರಶ್ನಿಸುವವನು ಸೂಫಿ. ಇದು ಸೂಫಿಯೊಬ್ಬನ ಚಿಂತನೆಯಲ್ಲಿ ರೂಪುಗೊಂಡ ಸಾಲುಗಳ ಪುನರಾವರ್ತನೆಯಾಗಿದೆ. ಸೂಫಿ ಪರಂಪರೆ ಬಾಹ್ಯ ಪ್ರದರ್ಶನಕ್ಕಿಂತ ಆಂತರಿಕ ಶುದ್ಧತೆಯನ್ನು ಬಯಸುತ್ತದೆ. ಅಂತಹ ಮುಕ್ತ ಚಿಂತನೆಯೆಡೆಗಿನ ಒಂದು ವಿನಮ್ರ ಪ್ರಯತ್ನ ಇಲ್ಲಿರುವಾತನದು.ಈ ಕವಿತೆಗೆ ಮಲೆಯಾಳ ಆವೃತ್ತಿಯೂ ಇದೆಯೆಂಬುದನ್ನು ದಯವಿಟ್ಟು ಗಮನಿಸಿ. ಅದು ಕೂಡ ನೀವು ಇದನ್ನು ನೋಡಿದ ಸ್ಥಳದಲ್ಲಿಯೇ ವೀಕ್ಷಿಸಲು ಮತ್ತು ಓದಲು ಲಭ್ಯವಿದೆ. ವಾಸ್ತವವಾಗಿ ಕನ್ನಡ ಆವೃತ್ತಿಯೇ ಮೂಲಕೃತಿ. 


ಆಚರಣೆಗಳು ದೇಹವನ್ನು ಬಾಗಿಸಬಹುದು, ಆದರೆ 'ಅರಿವು' ಮಾತ್ರ ಆತ್ಮವನ್ನು ಜಾಗೃತಗೊಳಿಸಬಲ್ಲದು. ಆವರ್ತನೆಗಳಲ್ಲಿ ಕಳೆದುಹೋಗದೆ ತತ್ತ್ವವನ್ನು ಹುಡುಕುವ ಈ ಹಾದಿಯಲ್ಲಿ ನಾವೆಲ್ಲರೂ ಪಯಣಿಗರು.


ಕೃಷ್ಣಪ್ರಕಾಶ ಬೊಳುಂಬು

ಕಗ್ಗಮಾಲಿಕೆ – ೩: ಅವ್ಯಕ್ತ

 

ಕಗ್ಗಮಾಲಿಕೆ – ೩: ಅವ್ಯಕ್ತ 



ಕಗ್ಗ:

ಜೀವ ಜಡರೂಪ ಪ್ರಪಂಚವನದಾವುದೋ| 

ಆವರಿಸಿಕೊಂಡುಮೊಳನೆರೆದುಮಿಹುದಂತೆ|| 

ಭಾವಕೊಳಪಡದಂತೆ ಅಳತೆಗಳವಡದಂತೆ| 

ಆ ವಿಶೇಷಕೆ ಮಣಿಯೊ-ಮಂಕುತಿಮ್ಮ||


ಪದವಿಂಗಡಣೆ:

ಪ್ರಪಂಚವಂ ಅದಾವುದೋ

ಆವರಿಸಿಕೊಂಡುಂ ಒಳನೆರೆದುಂ ಇದೆಯಂತೆ =  ಆವರಿಸಿಕೊಂಡು ಅದರೊಳಗೆ ತಾನು ತುಂಬಿಕೊಂಡೂ ಇದೆಯಂತೆ


ವ್ಯಾಖ್ಯಾನ:

ಚೇತನವೂ ಅಚೇತನವೂ ಆಗಿರುವ ಪ್ರಪಂಚವನ್ನು ಅವ್ಯಕ್ತದೊಂದು ವಿಶೇಷವು ಆವರಿಸಿಕೊಂಡು ಅದರೊಳಗೆ ತಾನು ತುಂಬಿಕೊಂಡೂ ಇದೆಯಂತೆ. ಅದು ಭಾವಕ್ಕೂ ಒಳಪಡದಂತೆ ಮತ್ತು ಅಳತೆಗೂ ನಿಲುಕದಂತೆ. ಆ ಚೈತನ್ಯವಿಶೇಷಕ್ಕೆ ತಲೆಬಾಗು ಎಂದಿದ್ದಾರೆ.


ತಾತ್ಪರ್ಯ:

ಅವ್ಯಕ್ತವಾದುದನ್ನು ಅರಿತು ತಲೆಬಾಗಬೇಕೆಂಬುದು ಈ ಕಗ್ಗದ ತಾತ್ಪರ್ಯ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻


ಕೃಷ್ಣಪ್ರಕಾಶ ಬೊಳುಂಬು

Wednesday, April 15, 2026

ಧ್ಯಾನಹಂಸ

ಧ್ಯಾನಹಂಸ

ಅತ್ಯಂತ ಕಡಿಮೆ ಸಂಖ್ಯೆಯ ಗೆರೆಗಳಲ್ಲಿ ಹೆಚ್ಚಿನ ಭಾವನೆಗಳನ್ನು ಮೂಡಿಸುವ ಕಲಾಕೃತಿ ಇದಾಗಿದ್ದು ಇಲ್ಲಿ ಆರು ವಕ್ರ ರೇಖೆಗಳನ್ನು ಉಪಯೋಗಿಸಲಾಗಿದೆ. 

 

ಧ್ಯಾನಹಂಸ

ಇದು ಭಾಗವತದಲ್ಲಿ ಪರಮಾತ್ಮ ಹಂಸ ರೂಪವನ್ನು ತಾಳುವುದರ ಸೂಚಕವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಂಸವನ್ನು ನೀರ-ಕ್ಷೀರ ನ್ಯಾಯದಂತೆ ಹಾಲು ಮತ್ತು ನೀರನ್ನು ಬೇರ್ಪಡಿಸುವ 'ವಿವೇಕ'ದ ಸಂಕೇತವನ್ನಾಗಿ ನೋಡಲಾಗುತ್ತದೆ. ಇಲ್ಲಿ ಹಂಸವು ಧ್ಯಾನದಲ್ಲಿ ಮಗ್ನವಾಗಿರುವಂತೆ ಚಿತ್ರಿಸಿರುವುದು ಮನಸ್ಸು ಹೊಂದಬೇಕಾದ ಶುದ್ಧತೆಯ ಸೂಚಕ. ಧ್ಯಾನಮಗ್ನತೆಯೆಂಬುದು ಆತ್ಮಾನುಭವದ ಸ್ಥಿತಿಯೆನಿಸಿಕೊಂಡಿದೆ. ಇದು ಸ್ಥಿರತೆ, ಮೌನ ಮತ್ತು ಅಂತರಂಗದ ಅನ್ವೇಷಣೆಯ ಪ್ರತೀಕವಾಗಿದೆ.


ಕೃಷ್ಣಪ್ರಕಾಶ ಬೊಳುಂಬು

Friday, April 10, 2026

ಕಗ್ಗಮಾಲಿಕೆ - ೨: ನಂಬುಗೆ

 ಕಗ್ಗಮಾಲಿಕೆ - ೨: ನಂಬುಗೆ


ಕಗ್ಗ:

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ||


ವ್ಯಾಖ್ಯಾನ:

ಲೋಕದ ಹುಟ್ಟಿಗೆ ಕಾರಣಕರ್ತನೆಂದೂ, ಲೋಕದ ಮಾಯೆಯನ್ನು ಆಗಗೊಡುವವನೆಂದೂ, ದೇವರ ದೇವ ಪರಬ್ರಹ್ಮನೆಂದೂ, ಲಕ್ಷ್ಮೀ ಸಮೇತನಾದ ಮಹಾವಿಷ್ಣುವೆಂದೂ ಯಾವುದನ್ನು ತಾವು ಕಾಣದಿದ್ದರೂ ಜನರು ಶ್ರದ್ಧೆಯಿಂದ ನಂಬಿದ್ದಾರೋ ಆ ಪರಮಾದ್ಭುತ ಚೈತನ್ಯಕ್ಕೆ ಮೊದಲು ತಲೆಬಾಗು.


ತಾತ್ಪರ್ಯ:

ಲೋಕವನ್ನು ಸೃಷ್ಟಿಸಿದ ಚೈತನ್ಯವನ್ನು ಮೊದಲಿಗೆ ನಂಬಬೇಕು, ನಂಬಿ ತಲೆಬಾಗಬೇಕು ಎಂದು ಗುಂಡಪ್ಪನವರು ಈ ಕಗ್ಗದ ಮೂಲಕ ಸಾರಿದ್ದಾರೆ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ನಿಧಾನಗತಿಯ ಅನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻


ಕೃಷ್ಣಪ್ರಕಾಶ ಬೊಳುಂಬು

Monday, March 30, 2026

ಕಗ್ಗಮಾಲಿಕೆ - ೧: ಬುದ್ಧಿಯ ಬೆಳಗು

 ಕಗ್ಗಮಾಲಿಕೆ - ೧: ಬುದ್ಧಿಯ ಬೆಳಗು


ಬುದ್ಧಿಯ ಪ್ರಚೋದನೆಯೇ ಪರಮ ಶ್ರೇಯಸ್ಸು


ಕಗ್ಗ:

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |

ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ||

ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |

ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ||


ವ್ಯಾಖ್ಯಾನ:

"ನಮ್ಮ ಪೂರ್ವಿಕರು ಐಶ್ವರ್ಯವೂ ಆಯುಸ್ಸೂ ಬಲವೂ ಜೊತೆಗೆ ಗೆಲುವೂ ಬೇಕೆಂದು ನಿತ್ಯವೂ ಪರಮಾತ್ಮನನ್ನು ಬೇಡಿಕೊಂಡಿದ್ದರೂ ವಿಶೇಷವಾಗಿ ಬುದ್ಧಿಯನ್ನು ಪ್ರಚೋದಿಸೆಂದು ಬೇಡುವ ಗಾಯತ್ರಿ ಮಂತ್ರವನ್ನು ಪರಮಮಂತ್ರವೆಂದು ಕರೆದರು. ಶ್ರೇಯಸ್ಸೆಂಬುದು ಬುದ್ಧಿಯ ಮಹಿಮೆ. ಅದು ಬುದ್ಧಿಯ ಪರಮ ಔನ್ನತ್ಯದಲ್ಲಿ ಸಿದ್ದಿಸುವಂತಹುದು."


ತಾತ್ಪರ್ಯ:

ಶ್ರೇಯಸ್ಸೆಂಬುದು ಬುದ್ಧಿಯ ಮಹಿಮೆ. ಅದು ಬುದ್ಧಿಯ ಪರಮ ಔನ್ನತ್ಯದಲ್ಲಿ ಸಿದ್ಧಿಸುವಂತಹುದು - ಇದು ಈ ಕಗ್ಗದ ವಿಷಯವಸ್ತು. ಕನ್ನಡದ ಭಗವದ್ಗೀತೆಯೆಂದು ಮನ್ನಣೆ ಗಳಿಸಿದ; ಡಿ. ವಿ. ಗುಂಡಪ್ಪನವರ ಕಗ್ಗದ ಸಾಲುಗಳು ಇಲ್ಲಿ ಗಾಯತ್ರಿ ಮಂತ್ರದ ಸಾರ ಮತ್ತು ಲೌಕಿಕ ಜೀವನದ ನಡುವಣ ಸಮನ್ವಯವನ್ನು ತೋರಿಸಿಕೊಟ್ಟಿದೆ. 


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.  ನಿಧಾನಗತಿಯ ಅನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.


#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻


ಕೃಷ್ಣಪ್ರಕಾಶ ಬೊಳುಂಬು



Sunday, November 16, 2025

ದಕ್ಷಿಣಾಮೂರ್ತಿಯ ಮೌನವ್ಯಾಖ್ಯಾನ ಏಕಾಣ್ಮ ಪಂಚಕದಲ್ಲಿ ಪ್ರಕಟಗೊಂಡ ಬಗೆ

ದಕ್ಷಿಣಾಮೂರ್ತಿಯ ಮೌನವ್ಯಾಖ್ಯಾನ ಏಕಾಣ್ಮ ಪಂಚಕದಲ್ಲಿ ಪ್ರಕಟಗೊಂಡ ಬಗೆ

ಏಕಾಣ್ಮ ಪಂಚಕದ ಅಂತಿಮ ಚರಣ ಮೌನವ್ಯಾಖ್ಯಾನವನ್ನು ವಿಸ್ತರಿಸುತ್ತದೆ. ಮೌನೋಪದೇಶದಿಂದಲೇ ಪರಬ್ರಹ್ಮತತ್ತ್ವವನ್ನು ಪ್ರಕಟಿಸುವಂತಹವನಾದ ಆ ದಕ್ಷಿಣಾಮೂರ್ತಿಯನ್ನು ನಾನು ಸ್ತುತಿಸುತ್ತೇನೆ - ಎನ್ನುವ ದಕ್ಷಿಣಾಮೂರ್ತಿ ಸ್ತೋತ್ರದ ಧ್ಯಾನ ಶ್ಲೋಕದಲ್ಲಿಯೂ ಪ್ರಕಟವಾದುದು ಇದೇ ಭಾವ. 


ದಕ್ಷಿಣಾಮೂರ್ತಿ ಸ್ತೋತ್ರದ ಧ್ಯಾನ ಶ್ಲೋಕ

(ಆದಿಶಂಕರ ಭಗವತ್ಪಾದರ ರಚನೆ)




ಮೂಲ:

मौनव्याख्या प्रकटित परब्रह्मतत्त्वं युवानं

वर्षिष्ठांते वसद् ऋषिगणैः आवृतं ब्रह्मनिष्ठैः ।

आचार्येन्द्रं करकलित चिन्मुद्रमानंदमूर्तिं

स्वात्मारामं मुदितवदनं दक्षिणामूर्तिमीडे ॥१॥


ಲಿಪ್ಯಂತರಣ:

ಮೌನವ್ಯಾಖ್ಯಾ ಪ್ರಕಟಿತ ಪರಬ್ರಹ್ಮತತ್ತ್ವಂ ಯುವಾನಂ

ವರ್ಷಿಷ್ಠಾಂತೇ ವಸದ್ ಋಷಿಗಣೈಃ ಆವೃತಂ ಬ್ರಹ್ಮನಿಷ್ಠೈಃ |

ಆಚಾರ್ಯೇನ್ದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ

ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ||೧||


ಲಿಪ್ಯಂತರಣ (IAST):

maunavyākhyā prakaṭita parabrahmatattvaṃ yuvānaṃ

varṣiṣṭhānte vasad ṛṣigaṇaiḥ āvṛtaṃ brahmaniṣṭhaiḥ |

ācāryendraṃ karakalita cinmudram-ānandamūrtiṃ

svātmārāmaṃ muditavadanaṃ dakṣiṇāmūrtim īḍe ||


ಮೌನವ್ಯಾಖ್ಯಾನದಿಂದ ಪ್ರಕಟಗೊಂಡ ಪರಬ್ರಹ್ಮತತ್ತ್ವವನ್ನು; ತರುಣನಾದ -

ಬ್ರಹ್ಮನಿಷ್ಠರಾದ, ವಯೋವೃದ್ಧರಾದ ಋಷಿಗಳಿಂದ ಸುತ್ತುವರಿಯಲ್ಪಟ್ಟವನಾದ;

ಕರತಲದಲ್ಲಿರುವ ಚಿನ್ಮುದ್ರೆಯ ಮೂಲಕ ಜ್ಞಾನೋಪದೇಶವನ್ನು ನೀಡುವ;

ತನ್ನ ಸ್ವರೂಪದಲ್ಲಿಯೇ ಆನಂದಿಸುವವನಾದ, ಪ್ರಸನ್ನವದನನಾದ ದಕ್ಷಿಣಾಮೂರ್ತಿಗೆ ತಲೆಬಾಗುವೆ. 


ವ್ಯಾಖ್ಯಾನ:

"ಅಂದು ಆ ಆದಿಗುರು ದಕ್ಷಿಣಾಮೂರ್ತಿ ಆ ಹೊತ್ತು ಇದ್ದುದನ್ನು ಮಾತಿನಿಂದ ಹೇಳಿರಲಿಲ್ಲ." (ಏಕಾಣ್ಮ ಪಂಚಕಂ)  ಆದರೆ ಆ ಋಷಿವರ್ಯರು ಹೇಳದುದನ್ನು ಹೇಳದೆಯೇ ಗ್ರಹಿಸಬಲ್ಲವರಾಗಿದ್ದರು. ಇದು ಆದಿಗುರುವಿನ ಮೌನ ವ್ಯಾಖ್ಯಾನ. 


ಮಹಾದೇವನಾದ ಆದಿಗುರು ದಕ್ಷಿಣಾಮೂರ್ತಿ ತನ್ನ ಮಾತಿಲ್ಲದ ಮೌನವ್ಯಾಖ್ಯಾನದ ಮೂಲಕ ಪರಬ್ರಹ್ಮ ತತ್ತ್ವವನ್ನು ಬೋಧಿಸಿದನು ಮೌನದಿಂದಲೇ ವಯೋವೃದ್ಧರಾದ ಋಷಿಗಳಿಗೆ ಬೋಧಿಸಿದನು. ಮೌನವೆಂಬುದು ಇಲ್ಲಿ ನಿಷ್ಕ್ರಿಯತೆಯಲ್ಲ, ಬದಲಾಗಿ ಅದು ಜ್ಞಾನದ ಪಾರಮ್ಯ. 


ರಮಣ ಮಹರ್ಷಿಗಳು ಪರಬ್ರಹ್ಮ ತತ್ತ್ವವನ್ನು ಮಾತಿನಿಂದ ವಿವರಿಸಲು ಸಾಧ್ಯವಿಲ್ಲ ಎಂಬುದನ್ನು ಅತ್ಯಂತ ಅರ್ಥಗರ್ಭಿತವಾಗಿ ಸೂಚಿಸುತ್ತಾರೆ. ಶಬ್ದವು ದ್ವೈತದ ವಸ್ತು: ಶಬ್ದ–ಅರ್ಥ, ಗುರು–ಶಿಷ್ಯ, ಬೋಧಕ–ಬೋಧ್ಯ ಇವುಗಳೆಲ್ಲ ಭಿನ್ನತ್ವದ ಮೇಲೆ ನೆಲೆಗೊಂಡಿವೆ. ಆದರೆ ಪರಬ್ರಹ್ಮ ತತ್ತ್ವವೇ ಸಚ್ಚಿದಾನಂದ; ಅದು ಸ್ವಯಂ ಪ್ರಕಾಶಮಾನ, ನಿರ್ವಚನಾತೀತ. ಆದುದರಿಂದ ಆದಿಗುರು ದಕ್ಷಿಣಾಮೂರ್ತಿಯ ಬೋಧನೆ ಮಾತಿನಿಂದಲ್ಲ, ಸ್ವಾತ್ಮಾನುಭವದ ನಿಶ್ಶಬ್ದ ಪ್ರಕಾಶದಿಂದ ಎಂದು ತಿಳಿಯಬೇಕು. ಗುರುವಿನ ಪರಮ ಕರುಣಾಮಯವಾದ ಕಟಾಕ್ಷವೇ ಶಿಷ್ಯನ ಹೃದಯದಲ್ಲಿ ಬೋಧನೆಯಾಗಿ ನೆಲೆಗೊಳ್ಳುತ್ತದೆ.

ತಾತ್ಪರ್ಯ:

ಮೌನ ವ್ಯಾಖ್ಯಾನವು ಬೋಧನೆಯ ಉತ್ತುಂಗ ಮಾತ್ರವಲ್ಲದೆ ಅದು ಬೋಧದ ಸ್ವರೂಪವೇ ಆಗಿದೆ. ಇದು ರಹಸ್ಯ; ಇದು ಉಪನಿಷತ್ತುಗಳ ಬೋಧನೆಯ ಸಾರ.

ಕೃಷ್ಣಪ್ರಕಾಶ ಬೊಳುಂಬು


Sunday, November 9, 2025

ಮೌನ ವ್ಯಾಖ್ಯಾನದಿಂದ ಪ್ರಕಟಗೊಂಡ ಪ್ರರಬ್ರಹ್ಮ ತತ್ತ್ವ

  

 ಏಕಾಣ್ಮ ಪಂಚಕಂ - 5

ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಉಪಸಂಹಾರ

ಮೌನ ವ್ಯಾಖ್ಯಾನದಿಂದ ಪ್ರಕಟಗೊಂಡ ಪ್ರರಬ್ರಹ್ಮ ತತ್ತ್ವ

---------------------------------------------------------------------------




ಎಪ್ಪೋದುಂ ಉಳ್ಳದವ್ ಏಕಾಣ್ಮ ವಸ್ತುವೇ 

ಅಪ್ಪೋದು ಅವ್ವಸ್ತುವೈ ಆದಿಗುರು ಚೆಪ್ಪಾದು 

ಚೆಪ್ಪಿ ತೆರಿಯುಮಾ ಚೆಯ್ದನರೇಲ್ ಎವರ್ 

ಚೆಪ್ಪಿ ತೆರಿವಿಪ್ಪರ್ ಚೆಪ್ಪುಗ ಎನ ಇಪ್ಪೋದವ್


ಆವಗವುಮಿರ್ಪುದೆನೆ ಉಣ್ಮೆಯೆನಿಪ್ಪುದನು 

ಅಂದಿರ್ದುದನಾ ಆದಿಗುರುವರುಹಿರದೆ;

ಅರುಹಿಯುಮರಿವುದೆ ಅರುಹಲುಮಾರ್ಪುದೆ   

ಅರುಹಿ ಅರಿಯಗೊಡುವವರಾರು - ಇಂದೀಗ


ಪದವಿಂಗಡಣೆ:

[ಆವಗವುಂ+ಇರ್ಪ+ಉದು+ಎನೆ] [ಉಣ್ಮೆ+ಎನಿಪ್ಪ+ಉದನು] [ಅಂದು+ಇರ್ದುದಂ+ಆ] [ಆದಿಗುರು+ಅರುಹಿ+ಇರದೆ] [ಅರುಹಿಯುಂ+ಅರಿವುದೆ] [ಅರಿಯಗೊಡುವವರ್+ಆರು] [ಇಂದು+ಈಗ]


ಅರ್ಥಗಳು:

ಆವಗವುಂ = ಯಾವಾಗಲೂ, ಇರ್ಪ = ಇರುವ, ಎನೆ = ಎಂಬ, ಉಣ್ಮೆ = ಇರುವಿಕೆ, ಆದಿಗುರು = ದಕ್ಷಿಣಾಮೂರ್ತಿ, ಅರುಹು = ಅರಿಯಿಸು, ಇಂದು = ಈ ದಿನ, ಈಗ = ಈ ಹೊತ್ತು


ವ್ಯಾಖ್ಯಾನ:

ಯಾವಾಗಲೂ ಇರುವಂತಹುದಾದ ಉಣ್ಮೆಯೆನಿಸಿಕೊಂಡುದನ್ನು ಅರಿಯಬೇಕು. ಅಂದು ಆ ಆದಿಗುರು ದಕ್ಷಿಣಾಮೂರ್ತಿ ಆ ಹೊತ್ತು ಇದ್ದುದನ್ನು ಮಾತಿನಿಂದ ಹೇಳಿರಲಿಲ್ಲ. ಯಾಕೆಂದರೆ ಅದು ವಾಗಾಡಂಬರಗಳನ್ನು ಮೀರಿದುದು - ಅದು ಮಾತಿನಿಂದ ಹೇಳಿ ತಿಳಿಯಿಸುವ ವಿಷಯವಲ್ಲ. ಮಾತಿನಿಂದ ವಿವರಿಸಿದರೆ ಅದು ಅರಿವಿಗೆ ಅರಿವಿಗೆ ನಿಲುಕಬಲ್ಲುದೇ ಅಥವಾ ಅದನ್ನು ಮಾತಿನಿಂದ ವಿವರಿಸಲಿಕ್ಕೆ ಸಾಧ್ಯವಿದೆಯೇ? - ಈ ದಿನ, ಈ ಹೊತ್ತು ಅದನ್ನು ಅದನ್ನು ವಿವರಿಸಬಲ್ಲವರು ಯಾರಿದ್ದಾರೆ?! 


ತಾತ್ಪರ್ಯ:

ಇದು ರಮಣ ಮಹರ್ಷಿಗಳ ಉಪದೇಶದ “ನಾನು–ಯಾರು” ಚಿಂತನೆಯ ಉಪಸಂಹಾರ. ಆತ್ಮಸ್ವರೂಪವೇ ನಿತ್ಯ-ನಿರಂತರವಾದುದು. ಅದು ಹೊಸದಾಗಿ ಅನುಭವಕ್ಕೆ ಬರುವ ಯಾವುದೋ ವಸ್ತುವಲ್ಲ. ಅದನ್ನು ಹೇಳಲಾಗದು, ಉಪದೇಶಿಸಲಾಗದು - ಯಾಕೆಂದರೆ ಅದು ನಿನ್ನ “ಸಾಕ್ಷಿಭಾವ”ವೇ ಆಗಿದೆಯೆಂದು ಬೋಧಿಸುತ್ತಾರೆ. ಗುರುವಿನ ಮಾತಿನಂತೆ - “ಅದು ನೀನೇ” ಎಂಬುದು ಉಪದೇಶದ ಸಾರ. ಆದರೆ ನಿಜವಾದ ಅರಿವು ಮೌನವಾದ ಉಪದೇಶದಲ್ಲಿ ಒಡಮೂಡುತ್ತದೆ. ವಾಕ್ಯಗಳು ಅಲ್ಲಲ್ಲಿ ತೋರಿಬರುವಂತೆ ಆಂತರಿಕ ಪ್ರೇರಣೆಗಳಾಗಿ ಜಾಗೃತಗೊಳ್ಳುತ್ತದೆ. ರಮಣ ಮಹರ್ಷಿಗಳು “ಏಕಾಣ್ಮ ಪಂಚಕಂ” ಸ್ತೋತ್ರದ ಐದನೆಯ ಚರಣದಲ್ಲಿ ಅದ್ವೈತಾನುಭವದ ಚರಮ ಸ್ಥಿತಿಯಾದ ಆತ್ಮಸಾಕ್ಷಾತ್ಕಾರವನ್ನು ತೋರಗೊಟ್ಟಿದ್ದಾರೆ. 


ಕೃಷ್ಣಪ್ರಕಾಶ ಬೊಳುಂಬು


Saturday, November 8, 2025

ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಮುಂದುವರಿಕೆ

 

 ಏಕಾಣ್ಮ ಪಂಚಕಂ - 4


ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಮುಂದುವರಿಕೆ



ಪೊನ್ನುಕ್ಕು ವೇರಾಗ ಭೂಷಣಂ ಉಳ್ಳದೋ

ತನ್ನೈ ವಿಡು ತನುವೇದು - ತನ್ನೈ

ತನುವೆಂಬಾನ್ ಅಜ್ಞಾನಿ ತಾನಾಗ ಕೊಳ್ವಾನ್

ತನ್ನೈಯರಿಂದ ಜ್ಞಾನಿ ದರಿಪ್ಪೈ - ತಾನಾ ದೊಲಿಯಾಲ್


ಹೊನ್ನ ಹೊರತಾದ ಹಲ ಭೂಷಣಗಳಿರವು 

ತನ್ನನೇ ಬಿಟ್ಟು ತನುವೆತ್ತ - ತನ್ನನೇ 

ತನುವೆಂಬನಜ್ಞಾನಿ ತಾನಾಗಿದ್ದುಕೊಂಬನು 

ತನ್ನನರಿತನು ಜ್ಞಾನಿ ಚಿಂತಿಪನು ತನ್ನಲ್ಲಿ ತಾನೆನುತ.


ಪದವಿಂಗಡಣೆ:

[ಭೂಷಣಗಳು+ಇರವು] [ತನು+ಎತ್ತ] [ತನು+ಎಂಬಂ+ಅಜ್ಞಾನಿ] [ತಾನ್+ಆಗಿ+ಇದ್ದುಕೊಂಬನು][ತನ್ನಂ+ಅರಿತನು]


ಅರ್ಥಗಳು:

ಹೊನ್ನು = ಚಿನ್ನ, ಭೂಷಣ = ಅಲಂಕಾರ, ತನು = ಶರೀರ, ಅಜ್ಞಾನಿ = ಆತ್ಮಸ್ವರೂಪವನ್ನು ಅರಿಯದವನು, ಜ್ಞಾನಿ = ಆತ್ಮಸ್ವರೂಪವನ್ನು ಅರಿತವನು, ಚಿಂತಿಪನು = ಧ್ಯಾನಿಸುತ್ತಾನೆ


ವ್ಯಾಖ್ಯಾನ:

ಚಿನ್ನದಿಂದ ಆಭರಣವನ್ನು ಮಾಡಲಾಗುತ್ತದೆಯಾದರೂ ಆಭರಣಕ್ಕೆ ಚಿನ್ನದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲ ಮತ್ತು ತಾನೆಂಬ ಅವಬೋಧದಿಂದ ಹೊರತಾದ ಶರೀರಕ್ಕೂ ಅಸ್ತಿತ್ವವಿಲ್ಲ. ಆ ಅವಬೋಧವನ್ನು ಲೆಕ್ಕಿಸದೆ ಶರೀರವನ್ನೇ “ನಾನು” ಎಂದು ಬಗೆಯುವವನು ತಾನು ಅಜ್ಞಾನಿಯಾಗಿ ಇದ್ದುಕೊಳ್ಳುತ್ತಾನೆ. ಆದರೆ ತನ್ನ ಸ್ವರೂಪವನ್ನರಿತವನಾದ ಜ್ಞಾನಿ ತಾನೆಂಬ ಅವಬೋಧದಲ್ಲಿ ತಾನೆಂದು ಧ್ಯಾನಿಸಬಲ್ಲನು.


ತಾತ್ಪರ್ಯ:

ರಮಣ ಮಹರ್ಷಿಗಳ ತತ್ತ್ವಬೋಧೆಯಲ್ಲಿ ಪರಮವಸ್ತುವಿನೆಡೆಗಿನ ಚಿಂತನೆ ಅತಿ ಸರಳವೆನಿಸಿಕೊಂಡಿದ್ದರೂ ಅದು ಅತ್ಯಂತ ಸೂಕ್ಷ್ಮವಾದುದೆಂದು ತಿಳಿಯಬೇಕು. ಆಭರಣಕ್ಕೆ ಚಿನ್ನದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲದಂತೆ, ಶರೀರವೆಂಬ ರೂಪಕ್ಕೂ ಆತ್ಮಸ್ವರೂಪದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲ. ಅಜ್ಞಾನಿಯಾದವನು ಶರೀರವನ್ನು “ನಾನು” ಎಂದು ತಪ್ಪಾಗಿ ಬಗೆದುಕೊಳ್ಳುತ್ತಾನೆ; ಜ್ಞಾನಿಯಾದವನು “ನಾನು” ಎಂಬ ಅವಬೋಧದಲ್ಲಿದ್ದುಕೊಂಡು “ನಾನು ಯಾರು?” ಎಂದು ಧ್ಯಾನಿಸಿದಾಗ “ತನ್ನಲ್ಲಿ ತಾನು” ಅಥವಾ ಆತ್ಮ ಸಾಕ್ಷಾತ್ಕಾರದ ಮೂಲಕ ನಿತ್ಯ ಚೈತನ್ಯಸ್ವರೂಪ ಸಚ್ಚಿದಾನಂದವಾಗಿ ವಿಶ್ರಾಂತಿ ಪಡೆಯುತ್ತಾನೆ. “ನಾನು” ಎನ್ನುವ ಬೌದ್ಧಿಕ ಮಟ್ಟದ ಭಾವನೆಯನ್ನು ತೊರೆದು ಅದರ ಮೂಲಕ್ಕೆ ಸಾಗಿ ಆತ್ಮಸ್ವರೂಪದಲ್ಲಿ ನೆಲೆಗೊಳ್ಳುವುದು ರಮಣ ಮಹರ್ಷಿಗಳು ಬೋಧಿಸಿದ ಸ್ವರೂಪಧ್ಯಾನದ ಸಾರ.


ಕೃಷ್ಣಪ್ರಕಾಶ ಬೊಳುಂಬು


ರಮಣ ಮಹರ್ಷಿಗಳ "ನಾನು-ಯಾರು" ಚಿಂತನೆ

 ಏಕಾಣ್ಮ ಪಂಚಕಂ - 3


ರಮಣ ಮಹರ್ಷಿಗಳ "ನಾನು-ಯಾರು" ಚಿಂತನೆ



ತನ್ನುಳ್ ತನುವಿರುಕ್ಕ ತಾನಾ ಜವುಡಲನ್,

ತನ್ನುಳ್ ಇರುಪ್ಪದಾ ತಾನುಣ್ಣುಮ್ — ಅನ್ನವನ್,

ಚಿತ್ತಿರತ್ತಿನ್ ಉಳ್ಳುಳದ  ಚಿತ್ತಿರತ್ತುಕ್ಕಾಧಾರ

ವಸ್ತಿರಮೆನ್ಱೆಣ್ಣುವಾನ್ ಪೋಲ್ವಾನ್ — ವಸ್ತುವಾಂ.


ತನ್ನೊಳಗೆ ತನುವಿರುತ ತಾನೇ ಜಡದೊಡಲನು, 

ತನ್ನೊಳಗಡರ್ದ ತಾನುಣ್ಣುವನ್ನವನು 

ಪಟದೊಡಲಡಕ ಪಟಲವದಕ್ಕಾಧಾರ, 

ವಸ್ತುವೆನೆ ವಸ್ತ್ರಮನೆಣಿಪನಂ ಪೋಲ್ವನು


ಪದವಿಂಗಡಣೆ:

[ಜಡದ+ಒಡಲನು] [ತನ್ನೊಳಗೆ+ಅಡರ್ದ] [ತಾನು+ಉಣ್ಣುವ+ಅನ್ನವನು] [ಪಟದ+ಒಡಲು+ಅಡಕ] [ಪಟಲ+ಅದಕ್ಕೆ+ಆಧಾರ] [ವಸ್ತ್ರಂ+ಎಂದು+ಎಣಿಪನಂ]


ಅರ್ಥಗಳು:

ತನು = ಶರೀರ, ಜಡ = ನಿರ್ಜೀವ, ಜಡದೊಡಲು = ನಿರ್ಜೀವವಾದ ಶರೀರ, ಉಣ್ಣುವ ಅನ್ನ = ತನ್ನೊಳಗೆ ಪ್ರಕಟಗೊಳ್ಳುವ ಚೈತನ್ಯ, ಪಟ = (ತೆರೆಯ ಮೇಲೆ ಪ್ರಕಟಗೊಳ್ಳುವ) ಚಿತ್ರ, ಪಟಲ = ಪರದೆ, ವಸ್ತು = ಪರಮ ತತ್ತ್ವ, ವಸ್ತುವೆನೆ = ವಸ್ತುವೆಂಬಂತೆ, ವಸ್ತ್ರ = ಬಟ್ಟೆ, ಪೆರಮೆ = ಭ್ರಮೆ


ವ್ಯಾಖ್ಯಾನ:

ತನ್ನೊಳಗೆಯೇ ಶರೀರವು ನೆಲೆಸಿರುವಾಗಲೂ ನಿರ್ಜೀವವಾದ ಆ ಶರೀರವೇ ತಾನಲ್ಲ - ತನ್ನೊಳಗೆ ಪ್ರಕಟಗೊಳ್ಳುವ ಚೈತನ್ಯವು ತಾನೆಂಬುದನ್ನು ಅರಿಯದವನು ಪಟವು ನಮ್ಮ ಕಣ್ಣಿನ ಮುಂದೆ ಮೂಡಿಕೊಳ್ಳಲು ಆಧಾರವಾದ ಪಟಲವೆಂಬ ವಸ್ತ್ರವನ್ನೇ ಪರಮ ವಸ್ತುವೆಂದು ಪೆರಮೆಗೊಳ್ಳುವವನಂತೆ.


ತಾತ್ಪರ್ಯ:

ರಮಣ ಮಹರ್ಷಿಗಳು ಆತ್ಮವು ಶರೀರದ ಒಳಗೆ ಎಲ್ಲಿಯೋ ಇದೆಯೆಂಬುದು ಭ್ರಮೆ ಎನ್ನುತ್ತಾರೆ. ಆತ್ಮವು ಶರೀರದ ಒಳಗೆ ಎಲ್ಲಿಯೋ ಇಲ್ಲ, ಅದರ ಬದಲಾಗಿ ಆತ್ಮದೊಳಗೆ ಶರೀರವಿದೆಯೆಂದು ತಿಳಿಯಬೇಕೆಂಬುದು ಈ ಮಾತಿನ ಅರ್ಥ. ಹಾಗಾಗಿ ಆತ್ಮವು ಎದೆಯಲ್ಲಿದೆಯೋ ಮೆದುಳಿನಲ್ಲಿದೆಯೋ ಎಂಬ ಚಿಂತನೆಗೆ ಅವಕಾಶವಿಲ್ಲದಂತೆ ಆತ್ಮದೊಳಗೆಯೇ ಶರೀರವಿದೆ ಎನ್ನುತ್ತಾರೆ. ಸಚ್ಚಿದಾನಂದ ಸ್ಥಿತಿಯಾದ ಆ ಸಹಜ ಸ್ಥಿತಿಯ ಒಳಗೆಯೇ ಶರೀರವಿದೆಯೆನ್ನುತ್ತ ಧ್ಯಾನಿಸಬೇಕು ಎಂದು ಮೂರನೆಯ ಈ ಚರಣದಲ್ಲಿ ರಮಣ ಮಹರ್ಷಿಗಳು ಸ್ಪಷ್ಟಪಡಿಸುತ್ತಾರೆ. ಶರೀರದ ಯಾವುದೋ ಒಂದು ಭಾಗವನ್ನು ಕೇಂದ್ರೀಕರಿಸಿ ಮಾಡುವ ಧ್ಯಾನವು ಸ್ವರೂಪ ಧ್ಯಾನವೆಂದಿನಿಸಿಕೊಳ್ಳದು ಎಂದು ರಮಣ ಮಹರ್ಷಿಗಳು ಸಾರುತ್ತಾರೆ. ಆತ್ಮವು ಅಚೇತನವಾದ ಶರೀರದ ಒಳಗೆ ಇದೆಯೆಂದು ಭಾವಿಸುವವನು ಚಲಚ್ಚಿತ್ರವೊಂದಕ್ಕೆ ಆಧಾರವಾಗಿರುವ ಪರದೆ ಆ ಚಿತ್ರದೊಳಗಿದೆಯೆಂದು ಪೆರಮೆಗೊಳ್ಳುವವನಂತೆಯೇ ಹೆಡ್ಡನಾದವನು ಎಂಬುದು ಮಹರ್ಷಿಗಳ ಅಭಿಮತ. 


ಪಟಲವು ಪಟ ನಮ್ಮ ಕಣ್ಣಿನ ಮುಂದೆ ಮೂಡಿಕೊಳ್ಳಲು ಆಧಾರವಾಗಿದೆ. ಅದೇ ರೀತಿಯಲ್ಲಿ -  ಶರೀರವೂ ಮಿಕ್ಕುಳಿದುವೂ ಕಾಣಿಸಿಕೊಳ್ಳಲು ಆತ್ಮವೇ ಆಧಾರವಾಗಿದೆ. ಆದುದರಿಂದ ನಮ್ಮಲ್ಲಿ ಆಳವಾಗಿ ಬೇರೂರಿರುವ ಅಜ್ಞಾನದಿಂದಲಾಗಿ ನಾವು ಈ ಶರೀರದ ಮಿತಿಯೊಳಗೆ ಬಂದಿಗಳಾಗಿದ್ದೇವೆಂದೂ ಈ ಶರೀರವೇ 'ನಾನು' ಎಂದೂ ಕಂಡರಿಯುತ್ತೇವೆ.


ಆತ್ಮವಿಚಾರದ ಉದ್ದೇಶವು ನಮ್ಮನ್ನು ನಾವು ನಿಜವಾಗಿಯೂ ಹೇಗಿದ್ದೇವೆಂದು ತಿಳಿದುಕೊಳ್ಳಲು ಅನುವು ಮಾಡಿಕೊಡುವುದು ಮತ್ತು ಆ ಮೂಲಕ ಈ ಶರೀರದೊಳಗೆ ನಾವು ಬಂದಿಗಳಾಗಿದ್ದೇವೆಂದು ಕಂಡರಿಯುವಂತೆ ಮಾಡುವ ಅಜ್ಞಾನವನ್ನು ನಾಶನಗೊಳಿಸುವುದು. ಈ ಶರೀರದ ಮೇಲಣ ಯಾವುದೇ ಬಿಂದುವಿನ ಬಗೆಗೆ ಧ್ಯಾನಿಸುತ್ತ ಅದು ನಮ್ಮ ಆತ್ಮದ ನೆಲೆದಾಣವೆಂದು ಕಲ್ಪಿಸಿಕೊಳ್ಳುವುದು ಆತ್ಮವಿಚಾರದ ಅಭ್ಯಾಸವೆನಿಸಿಕೊಳ್ಳದು. ನಮ್ಮ ಶರೀರವು ಕಲ್ಪಿತವಂತೆ; ನಮ್ಮ ಮನಸ್ಸಿನಲ್ಲಿ ಮಾತ್ರ ಇರುವ ಒಂದು ಆಲೋಚನೆಯಂತೆ; ನಾವು ಕನಸಿನಲ್ಲಿ 'ನಾನು' ಎಂದು ಕಂಡರಿಯುವ ಶರೀರದಂತೆ - ಅದು ನಮ್ಮ ಕಲ್ಪನೆಯಲ್ಲಿ ಮಾತ್ರ ಇದ್ದುಕೊಂಡಿದೆ. ನಾವು ಅದನ್ನು ಗಮನಿಸುವುದರಿಂದ ಮಾತ್ರ ಆ ಬಗೆಯಲ್ಲಿ ಅದನ್ನು ನಾವು ಅರಿಯುತ್ತೇವೆ. ಆದುದರಿಂದ ನಾವು ಶರೀರದ ಬಗೆಗೆ ಯಾವುದೇ ರೀತಿಯಲ್ಲಿ ಧ್ಯಾನ ಮಾಡಿದರೆ - ಅದರೆಡೆಗಿನ ನಮ್ಮ ನೋಟ ವಾಸ್ತವಿಕ ನೆಲೆಯದ್ದಾಗಿರದು ಮತ್ತು ಆ ಮೂಲಕ ಆ ಬಗೆಯ ಅರಿವನ್ನುಂಟುಮಾಡುವ ಅಜ್ಞಾನವನ್ನೇ ಶಾಶ್ವತವೆಂದು ಪೆರಮೆಗೊಳ್ಳುತ್ತೇವೆ. ನಾವು ನಿಜವಾಗಿಯೂ ಯಾರೆಂದು ತಿಳಿದುಕೊಳ್ಳಲು ಈ ಶರೀರದ ಮೇಲಣ ಮತ್ತು ಹೊರಗಣ ಪ್ರತಿಯೊಂದು ಆಲೋಚನೆ ಮತ್ತು ವಸ್ತುವಿನಿಂದ ನಮ್ಮ ಗಮನವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡು ಅದನ್ನು ನಮ್ಮ ಇರುವಿಕೆಯ ಅವಬೋಧವೆನಿಸಿಕೊಂಡ 'ನಾನು' ಎಂಬುದರತ್ತ ಕೇಂದ್ರೀಕರಿಸಬೇಕು.


ಕೃಷ್ಣಪ್ರಕಾಶ ಬೊಳುಂಬು


Monday, November 3, 2025

ಏಕಾಣ್ಮ ಪಂಚಕಂ - 2

 ಏಕಾಣ್ಮ ಪಂಚಕಂ - 2

ತಾನು ತಾನಾಗಿರುತ್ತಲೂ ತನ್ನ ಸ್ಥಿತಿಯನ್ನು ಅರಿಯಲಾರದ ಕುಡುಕನಿಗೆ ಸಚ್ಚಿದಾನಂದ ಸ್ಥಿತಿಯನ್ನು ಬದಲಿಯಾಗಿ ಕೊಡು.

---------------------------------------------------------------------------------------------------------------------------

                                

ತಾನಿರುಂದುಂ ತಾನಾಗ ತನ್ನೈತ್ತಾ ನಾನೆವನ್

ಯಾನಿರುಕ್ಕುಂ ಸ್ಥಾನಂ ಎದುವೆನಕ್ಕೇಟ್ ಪಾನುಕ್ಕು

ಯಾನೆವನ್ ಎವ್ವಿಡಂ ಯಾನುಳನ್ ಎಂಡ್ರಮಡು

ಪಾನನೈ ಈಡು ಪಗರ್ ಸಚ್ಚಿದಾನಂದ


ತಾನು ತಾನಾಗಿರುತ ತನಗೆ ತಾನಾರೆಂದೊರಲಿ

ಆನಿರ್ಪ ತಾಣವೆದೆಂದೆಂಬನಿಗೆ

ಆನಾವನೆತ್ತಲಾನಿರ್ಪೆನೆಂಬುದನು

ಪಾನಿಗಮೀಡು ಕೊಡು - ಸಚ್ಚಿದಾನಂದ


ಪದವಿಂಗಡಣೆ:

[ತಾಣ+ಎದು+ಎಂದು+ಎಂಬನಿಗೆ] [ಆನು+ಆವನು+ಎತ್ತಲ್+ಆನ್+ಇರ್ಪೆನು+ಎಂಬುದನು] [ಪಾನಿಗಂ+ಈಡು] 


ಅರ್ಥಗಳು:

ಪಾನಿ = ಕುಡುಕ, ಈಡು = ಬದಲಿ, ಪಗರ್ = ಕೊಡು


ವ್ಯಾಖ್ಯಾನ:

ತಾನು ತಾನಾಗಿಯೇ ಇದ್ದಾಗಲೂ ತನ್ನ ನಿಜಸ್ವರೂಪವನ್ನು ಅರಿಯದೆ, “ನಾನು ಯಾರು?”, “ನಾನು ಎಲ್ಲಿರುವೆ?”, “ನಾನು ಹೇಗಿರುವೆ?” ಎಂಬ ಪ್ರಶ್ನೆಗಳನ್ನು ಕೇಳುವ ಅಜ್ಞಾನಿಯಾದ ಆ ಕುಡುಕನಿಗೆ ಆತನ “ನಾನು” ಎಂಬ ಭಾವಕ್ಕೆ ಬದಲಿಯಾಗಿ ಪರಮ ಸತ್ಯವಾದ ಸಚ್ಚಿದಾನಂದ ಸ್ಥಿತಿಯನ್ನು ನೀನು ಕೊಡು!


ತಾತ್ಪರ್ಯ:

ಆತ್ಮಾನುಭವದ ಆ ಸ್ಥಿತಿಯಲ್ಲಿ ಅಹಂಕಾರ ನಾಶಗೊಂಡು, ಪರಿಪೂರ್ಣ ಬೋಧೆಯ ಆನಂದವೊಂದೇ ಉಳಿಯುತ್ತದೆ - ಅದುವೇ ಸಚ್ಚಿದಾನಂದವೆಂಬ ಪರಮ ಸ್ಥಿತಿ.


ಕೃಷ್ಣಪ್ರಕಾಶ ಬೊಳುಂಬು




Saturday, November 1, 2025

ಏಕಾಣ್ಮ ಪಂಚಕಂ - 1

 ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ  ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ತಮಿಳಿನಲ್ಲಿ 'ಆತ್ಮ' ಪದಕ್ಕೆ 'ಆಣ್ಮ' ಎಂಬ ಪದ ಸಂವಾದಿಯಾಗಿದೆ. ಹೀಗೆ ಐದು ಚರಣಗಳಿಂದ ಕೂಡಿದ ಈ ಸ್ತೋತ್ರವನ್ನು ಕನ್ನಡಕ್ಕೆ ಅನುವಾದಿಸುವ ವಿನಮ್ರ ಪ್ರಯತ್ನ ಇಲ್ಲಿದೆ.

The way Ramana Maharshi represented the essence of Advaita Vedanta is unique. Ramana Maharshi's "Ekanma Panchakam" is a hymn consisting of five stanzas. The word 'Aanma' is the equivalent of the word 'Atma' in Tamil. Thus, here is a humble attempt to translate this hymn consisting of five stanzas into Kannada.

------------------------------------------------------------------------------------------------------------------------




ತನ್ನೈ ಮಱನ್ದ್ ತನುವೇ ತಾನಾ ಎಣ್ಣಿ

ಎಣ್ಣಿಲ್ ಪಿರವಿ ಎಡುತ್ತಿರದಿ - ತನ್ನೈ

ಉಣರ್ನ್ದ್ ತಾನಾದಲ್ ಉಲಕಸಂಚಾರ

ಕನವಿನ್ ವಿೞಿತ್ತಾಲೇ ಕಾಣ್ಗ ಅನವರತಂ


ತನ್ನನೇ ಮರೆತು ತನುವೇ ತಾನೆಂದೆಣಿಸಿ,

ತನ್ನದೇ ಹಲಹೆರಿಗೆಗಳ ದಾಟಿ ;

ಎಚ್ಚೆತ್ತು ತಾನೆಂದರಿತು ಲೋಕಸಂಚಾರವೆನೆ

ಕನವು ಕಳೆಯುತಲದನೆ ಕಾಣ್ಬುದನವರತ.


ಪದವಿಂಗಡಣೆ:

[ಕಳೆಯುತಲಿ+ಅದನೆ] [ಕಾಣ್ಬುದು+ಅನವರತ]


ಅರ್ಥಗಳು:

ತನು = ಶರೀರ, ಹಲಹೆರಿಗೆಗಳ = ಹಲವಾರು ಜನ್ಮಗಳನ್ನು, ಲೋಕಸಂಚಾರವೆನೆ = ಲೋಕಸಂಚಾರವೆಂಬ, ಲೋಕಸಂಚಾರ = ಸಂಸಾರ, ಜನನ ಮರಣ ಚಕ್ರಗಳು, ಕನ = ಕನಸು, ಅನವರತ = ನಿತ್ಯವೂ


ವ್ಯಾಖ್ಯಾನ:

ತನ್ನನ್ನು ತಾನು ಮರೆತು ತನ್ನ ಶರೀರವನ್ನು ತಾನೆಂದು ಬಗೆದು ಹಲವಾರು ಜನ್ಮಗಳನ್ನು ಜೀವನು ದಾಟಿದನು. ಲೋಕಸಂಚಾರವೆಂಬ ಕನಸು ಕಾಣುತ್ತಿದ್ದ ಆ ಜೀವನು ಎಚ್ಚೆತ್ತು ತನ್ನನ್ನು ಅರಿತುಕೊಂಡು ಆ ಸತ್ಯವನ್ನು ನಿತ್ಯವೂ ಕಾಣುವಂತಾಗಲಿ.


ತಾತ್ಪರ್ಯ:

ಜೀವನು ತನ್ನನ್ನು ತಾನು ಮರೆತು ಶರೀರವನ್ನು ‘ನಾನು’ ಎಂದು ಬಗೆದ ಕಾರಣ, ಅನೇಕ ಜನ್ಮಗಳ ಕಾಲ ಸಂಸಾರದ ಕನಸು ಕಾಣುತ್ತಾನೆ. ಆತ್ಮಜ್ಞಾನವನ್ನು ತಂದುಕೊಂಡು ಜಾಗೃತನಾದಾಗ, ಸಂಸಾರವೆಂಬ ಆ  ಕನಸು ಮಾಯವಾಗುತ್ತದೆ; ಆ ಜಾಗೃತ ಸ್ಥಿತಿಯಲ್ಲಿ ನಿತ್ಯವೂ ಪರಮಾತ್ಮನೆಂಬ ಸತ್ಯವೇ ಕಾಣುತ್ತದೆ.


 ಕೃಷ್ಣಪ್ರಕಾಶ ಬೊಳುಂಬು


Wednesday, February 19, 2014

ಅನುಭವ

ಅನುಭವ

ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ

ಜನಿಮರಣಂಗಳಲ್ಲೂ ಇಹಪರಂಗಳಲ್ಲೂ (೨)
ಬಿಡದಲೆ ಕಾಯುತ್ತ ದಾರಿಗಾಣಿಸಿದೆ
ಹೊಸತನು ಅರಿತಾಗ ಹಳತನು ತೊರೆದಾಗ
ಅಪರವೆಂಬುದು ಕಾಣೆ ನಿನ್ನ ಸೃಷ್ಟಿಯೊಳಗೆ
ನಿನ್ನನು ಅರಿತಾಗ ಮುಚ್ಚಿದ್ದು ತೆರೆದಾಗ
ನೀನೇ ನೀನಿದ್ದುದ ಕಂಡೆ ನಿನ್ನ ಸೃಷ್ಟುಯೊಳಾಗೆ

ಬರಿದೊಂದು ಸ್ಪರ್ಶದ ಮೋಹಕ ಮಾಯೆಯಲಿ
ಅರಿಯದ ತೀರದೊಳು ಎನ್ನ ತಂದು ಕೂರಿಸಿದೆ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ

Thursday, January 16, 2014

ಬಂದೇ ಬರುವುದು

ಬಂದೇ ಬರುವುದದೊಂದು ದಿನ ಭೂಮಿಯೊಳು
ಜೀವಮೌನದ ಭಾವ ಸಾಂದ್ರತೆಯನಡರ್ದು
ಕಣ್ಣ ಪಟಲದ ಮುಂದೆ ಬಿರಿದು ನಕ್ಷತ್ರಗಳು
ಉದಯದೊಳು ಮಗುದೊಮ್ಮೆ ದಿನಚರಿಯ ಬಿಡದೆ

ಕಡಲ ತೀರದೊಳು ಬಡಿ-ಬೀಸುತಲೆಗಳು
ನೋವಿನೊಳೂ ನಲಿವಿನೊಳೂ ಭೇದಗಳನ್ನೆಣಿಸದೆಯೆ
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ಅಪರೂಪದಾ ತಾಣ ಅಪರೂಪದಾ ಜೀವ
ಅಂತರಾತ್ಮದ ಭಾವ ನಿಜದಿ ಬಯಸಿದುದನ್ನುಳಿದು
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ತೇಲುದೋಣಿ

ತೇಲುದೋಣಿಯ ತೆರದೆ ತೇಲುತೇಲುತ ಸಾಗಿ
ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ
ಹಗರಣದ ರಗಳೆಯದಾವುದೊಂದನ್ನರಿಯದಿರೆ ||

ತೀರವಿಲ್ಲದ ಕಡಲ ನಡುನಡುವೆ ಮೌನದಲಿ
ಮಂದಹಾಸದ ಗಾನ ಗುನುಗುನುಗುತ್ತಿರುವಾಗ
ಕೇಳಬಯಸಿದೆ ಪದವ ಮೀರಿದ ಮಧು ಮಧುರತಮ ಗಾನ ||

ಕಾಲ ಬಾರದದೇಕೋ ಕಾರ್ಯ ತೀರದದಿನ್ನೇಕೋ
ಸಂಜೆಯಾಗಸ ಕೆಂಪು ಕೆಂಪನೆ ಮಸೆವಾಗ
ಮಸುಮಸುಕಿನಾ ಬೆಳಕು ಮೋಡದಲಿ ಮರೆಗೊಳಲು
ತೇಲ್ವ ದೋಣಿಯ ಹುಟ್ಟದಲುಗಾಡದಿರದೇ ||

Saturday, November 30, 2013

ಕಾಲವೇ ಚಲಿಸು ಹಿಂದಕ್ಕೆ

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||

ಮೂಡಬಾಂದಳದೆ ತೇರನ್ನೇರಿದ ಆದಿತ್ಯದೇವನ ಸಂಗದೆ |
ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು | ಬಿಡುವಿರದೆ ||

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಜವ್ವನವ ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮುಪ್ಪು ಬಾರದೊಲರಳಿಸು ||

ಕೞೆದುಹೋಗಿಹ ದಿನಗಳೆಲ್ಲದರ ಆನಂದವ ಕೊಡು ಹಿಂದಕ್ಕೆ |
ಕಾಣುತ್ತಿದ್ದರೂ ಕೈಗೆ ಎಟಕದ ಕನಸನ್ನೂ ಕೊಡು | ಬಿಡುವಿರದೆ ||

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |
ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||

ಪಡುವ ಬಾಂದಳದೆ ತೇಲುತ್ತಿಪ್ಪ ಆ ತುಂಬುತಿಂಗಳ ಚಂದದೆ |
ಸುರಿಯುತ್ತಿದ್ದರೂ ಮೆಯ್ಗೆ ಸೋಕದ ಬೆಳ್ವೊನಲನ್ನು ಕೊಡು | ಬಿಡುವಿರದೆ ||

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||
ಭೂತಕಾಲದ ಭವಿತನಿಧಿಗಳ ಕಳೆದುಹೋದ ಕೀಲಿಗೊಂಚಲನ್ನು |

ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ಒಮ್ಮೆ ತಂದುಕೊಡು ದಯೆಯಿರಲಿ ||

 

[soundcloud url="https://api.soundcloud.com/tracks/86460112" width="100%" height="166" iframe="true" /]

Monday, August 26, 2013

ಜೀವವಾಹ

ಜೀವವಾಹ

ಹಗಲಿರುಳು ಎಡೆಬಿಡದೆ
ನನ್ನೊಳಗೆ ನನ್ನಂತೆ
ಹರಿವ ಜೀವದ ವಾಹ ನೀನಲ್ಲವೇ

ಮಣ್ಣ ಕಣ-ಕಣದಿಂದ
ಸ್ಫುರಣಗೊಳೆ ಭವವಾಗಿ
ಅರಳ್ವ ಜೀವದ ವಾಹ ನೀನಲ್ಲವೇ

ಅಳವಿರದಾ ಕಾಶದಿಂದ
ಹರಿವ ಬಲ್ಝರಿಯಂತೆ
ಸುರಿವ ಜೀವದ ವಾಹ ನೀನಲ್ಲವೇ

ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟನೀಯುವ ವಾಹ ನೀನಲ್ಲವೇ

ಚಣಚಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನಲ್ಲವೇ

Tuesday, August 13, 2013

ಕೊಡು ಗುರುವೇ ಹೊಸ ಕನಸುಗಳನ್ನು





'ಪಿಟಿ ದ ನೇಷನ್' ಎಂಬ ಖಲೀಲ್ ಗಿಬ್ರಾನ್ ಕವಿತೆಯ ಛಾಯಾನುವಾದವನ್ನು ಇಲ್ಲಿ ಓದಬಹುದು. ಮೂಲ ಕವಿತೆಯನ್ನೂ ಓದಿರಿ. ~ ಕೆ.ಪಿ. ಬೊಳುಂಬು

khalil-gibran-beauty-eternity


ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು

ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆಳ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏಳ್ಗೆಗಾಗೆಚ್ಚರಿಸು


ಕೊಡು ಗುರುವೇ ಹೊಸ ಗುರುವರ್ಯಕ್ಕಳ

ನಾಡಿನೊಳ್ಳಿತಿಗಾಗಿ ಹಾರಯಿಸುವವರನ್ನು

ಕೊಡು ಗುರುವೇ ಹೊಸ ಕನಸುಗಳನ್ನು

ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ



ಹಳೆಯ ಕವಿತೆಗೆ ಹೊಸ ರೂಪ (ಅಂತರಾತ್ಮ - ೨)

ನೀನೊಮ್ಮೆ ಬಾರೆಯಾ

ನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾ
ಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾ

ಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿ
ಒಳಗಿರುವ ನನ್ನನ್ನು ಎಬ್ಬಿಸಿದೆ ನೀ

ಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆ
ಛಲವನ್ನು ಎನಗಿತ್ತು ನಡೆಯಿಸಿದೆ ನೀ
ಬಾಳ್ವೆಯಲಿ ನಲಿವನ್ನೂ ಹದವಾಗಿ ನೋವನ್ನೂ
ಬೆರೆಸುತ್ತ ಊಡಿಸುತ ಬದುಕಿಸಿದೆ ನೀ

ಕ್ಷಣದೊಂದು ಮಾಯೆಯಲಿ ಹಲವಾರು ಬಣ್ಣಗಳ
ತಡೆಯಿರದೆ ಎಲ್ಲೆಲ್ಲೂ ಪ್ರೋಕ್ಷಿಸಿದೆ ನೀ
ಹಲವಾರು ರೂಪಿನಲಿ ಮಾರೊಡಲನ್ನಾಂತು
ಎಲ್ಲವನ್ನು ಎನಗಿತ್ತು ಬದುಕಿಸಿದೆ ನೀ

[soundcloud url="https://api.soundcloud.com/tracks/87050448" width="100%" height="166" iframe="true" /]

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...