ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಪೀಠಿಕೆ:
ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳು ಸವೆದುಹೋದಾಗ ಮತ್ತು ಹೊಸ ಮೌಲ್ಯಗಳು ಇನ್ನೂ ರೂಪಗೊಳ್ಳದಿದ್ದಾಗ ಸಮಾಜವು ಒಂದು ರೀತಿಯ ಅಸ್ಥಿರತೆಗೆ ಒಳಗಾಗುತ್ತದೆ. ಡಿ.ವಿ.ಜಿ ಅವರು ಈ ಸ್ಥಿತಿಯನ್ನು 'ಪ್ರೇತ'ದ ರೂಪಕದ ಮೂಲಕ ಈ ಪದ್ಯದಲ್ಲಿ ಚಿತ್ರಿಸಿದ್ದಾರೆ.
ಕಗ್ಗ:
ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ|ವಲೆವಂತೆ ಲೋಕ ತಲ್ಲಣಿಸುತಿಹುದಿಂದು||ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|ತಳಮಳಕೆ ಕಡೆಯೆಂದೊ?-ಮಂಕುತಿಮ್ಮ||
ವ್ಯಾಖ್ಯಾನ:
ಪ್ರೇತಾವಸ್ಥೆಯೆಂದರೆ ಮರಣದ ನಂತರ ಪ್ರಯಾಣದಲ್ಲಿರುವ ಆತ್ಮದ ಸ್ಥಿತಿ. ಈ ಭೂಮಿಯನ್ನು ಬಿಟ್ಟು ಎಲ್ಲಿಗೂ ಹೋಗದ ಪ್ರೇತದಂತೆ ಲೋಕ ತಲ್ಲಣಿಸುತ್ತಲಿದೆ. ಹಳೆಯ ಧರ್ಮ ಸತ್ತುಹೋಗಿದೆ; ಹೊಸದಾದ ಧರ್ಮವಿನ್ನೂ ಹುಟ್ಟಲಿಲ್ಲ. ಈ ತಳಮಳಕ್ಕೆ ಕೊನೆಯೆಂದು ಎಂಬುದು ತಿಳಿಯದಾಗಿದೆ ಎಂದಿದ್ದಾರೆ.
ದೇಹವನ್ನು ಬಿಟ್ಟ ಆತ್ಮಕ್ಕೆ ಪರಲೋಕದ ದಾರಿ ಸಿಗದಿದ್ದಾಗ ಅದು ಹೇಗೆ ಭೂಮಿಯ ಮೇಲೆಯೇ ಅಲೆಯುತ್ತದೆಯೋ, ಹಾಗೆಯೇ ಇಂದಿನ ಲೋಕವು ದಿಕ್ಕು ಕಾಣದೆ ತಲ್ಲಣಿಸುತ್ತಿದೆ. ನಾವು ಹಳೆಯ ಸಂಪ್ರದಾಯಗಳನ್ನು 'ಮೌಢ್ಯ'ವೆಂದು ಬಿಡುತ್ತಿದ್ದೇವೆ, ಆದರೆ ಆಧುನಿಕತೆಯ ಹೆಸರಿನಲ್ಲಿ ನಮಗೆ ಸಿಗುತ್ತಿರುವ ಭೌತಿಕ ಸುಖಗಳು ಅಂತರಂಗದ ಶಾಂತಿಯನ್ನು ನೀಡುತ್ತಿಲ್ಲ.
"ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ" ಎಂಬ ಸಾಲು ಅತ್ಯಂತ ಪ್ರಸ್ತುತ. ವಿಜ್ಞಾನವು ಹಳೆಯ ನಂಬಿಕೆಗಳನ್ನು ಪ್ರಶ್ನಿಸಿ ಸಾಯಿಸಿದೆ. ಆದರೆ ವಿಜ್ಞಾನ ಅಥವಾ ತರ್ಕವು ಮನುಷ್ಯನಿಗೆ ಬದುಕಿನ ಉದ್ದೇಶವನ್ನಾಗಲೀ ಅಥವಾ ನೈತಿಕ ಸ್ಥೈರ್ಯವನ್ನಾಗಲೀ ಇನ್ನೂ ನೀಡಲು ಸಾಧ್ಯವಾಗಿಲ್ಲ. ಈ ಎರಡರ ನಡುವಿನ 'ಶೂನ್ಯ'ವೇ ಇಂದಿನ ಲೋಕದ ತಳಮಳಕ್ಕೆ ಕಾರಣ.
ಇದು ಕೇವಲ ಧಾರ್ಮಿಕ ಬದುಕಿನ ಕುರಿತ ಮೌಖಿಕ ಉಪದೇಶವಲ್ಲ; ಬದುಕುವುದನ್ನು ಕ್ರಮಗೊಳಿಸಬೇಕಾದ ವಿಧಾನವೂ ಇಲ್ಲಿ ಪರಾಮರ್ಶಿಸಲ್ಪಟ್ಟಿದೆ. ಹಳೆಯ ತಲೆಮಾರಿನ ಸಂಯಮ ಮತ್ತು ಹೊಸ ತಲೆಮಾರಿನ ಆವೇಗಗಳೆರಡರ ನಡುವಣ ಸೆಣಸಾಟದಲ್ಲಿ ಸಿಲುಕಿದ ಸಮಾಜದ 'ಪ್ರೇತಾವಸ್ಥೆ'ಯನ್ನು ಡಿ.ವಿ.ಜಿ ಇಲ್ಲಿ ಪ್ರಶ್ನಿಸುತ್ತಿದ್ದಾರೆ.
ತಾತ್ಪರ್ಯ:
ಈ ಅತಂತ್ರ ಸ್ಥಿತಿ ಅಥವಾ ತಳಮಳಕ್ಕೆ ಕೊನೆಯೆಂದು? ಎಂಬ ಕವಿಯ ಪ್ರಶ್ನೆಯು ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ. ನಾವು ಯಾವುದನ್ನು 'ಧರ್ಮ'ವೆಂದು ಸ್ವೀಕರಿಸಬೇಕು ಮತ್ತು ಈ ಗೊಂದಲದಿಂದ ಹೊರಬರುವುದು ಹೇಗೆ ಎಂಬುದು ಈ ಪದ್ಯದ ಅಂತರಾರ್ಥ.
ಉಪಸಂಹಾರ:
ಸಗ್ಗ ಸುಖಕ್ಕಾಗಿ ಹಾತೊರೆಯುವುದು ಜೀವನ ಎಂಬ ಭ್ರಮೆ ಲೋಕದಲ್ಲಿದೆ. ಆದರೆ ಇಲ್ಲಿರುವುದು ಕಗ್ಗ ಸುಖದ ರಸಾಸ್ವಾದನೆಗೊಂದು ಅಪರೂಪದ ಅವಕಾಶ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.
#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻
No comments:
Post a Comment