ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ
ಪದ್ಯ:
ನಿಸ್ಕಾರ ನಮಸ್ಕಾರಗಳ ಹಲವಾವರ್ತಿಗಳ ಮಾಡಿ
ಸುಜೂದುಗಳ ಹಲವು ರಕ್ಕಾಯ್ತುಗಳನೋದಿ
ಅರಿಯಬೇಕಿದ್ದುದನರಿಯಲಿಲ್ಲ
ಅರಿಯಬೇಕಿದ್ದ ಬಗೆ ಅರಿಯಲಿಲ್ಲ ಎನ್ನುವನು ಸೂಫಿ
ಅರ್ಥಗಳು:
ನಿಸ್ಕಾರ = ಸಲಾತ್ ಸಲ್ಲಿಕೆ, ಆವರ್ತಿ = ಆವರ್ತನ, ಸುಜೂದು = ತಲೆಬಾಗುವಿಕೆ (ಮಂತ್ರ ಪಠಣದೊಂದಿಗೆ), ರಕ್ಕಾಯ್ತು = ಆವರ್ತನ
ವಿವರಣೆ:
ಅದೆಷ್ಟೋ ಸಲ ನಿಸ್ಕಾರ ಮಾಡಲಾಗುತ್ತದೆ; ಇನ್ನೆಷ್ಟೋ ಸಲ ನಮಸ್ಕಾರ ಮಾಡಲಾಗುತ್ತದೆ. ಆದರೆ ಅರಿಯಬೇಕಿದ್ದುದನ್ನು ಅರಿಯಲೇ ಇಲ್ಲ; ಅರಿಯಬೇಕಿದ್ದ ಬಗೆಯನ್ನೂ ಅರಿಯಲಿಲ್ಲ.
ಇಲ್ಲಿನ ಸಾಲುಗಳು ಯಾವುದೇ ಒಂದು ಸಮುದಾಯದ ವಿರೋಧವಲ್ಲ ಅಥವಾ ಕೇವಲ ಆಚರಣೆಯ ಟೀಕೆಯಲ್ಲ. ಬದಲಾಗಿ, "ಮೂಲ ತತ್ತ್ವಗಳನ್ನು ಮರೆಯುವ ಎಲ್ಲರಿಗೂ" ಅನ್ವಯಿಸುವ ಒಂದು ಸಾರ್ವತ್ರಿಕ ಎಚ್ಚರಿಕೆ. 'ನಿಸ್ಕಾರ' ಅಥವಾ 'ರಕ್ಕಾಯ್ತು'ಗಳನ್ನು ಓದುವುದು ಒಂದು ಸಾಧನವಷ್ಟೇ; ಆದರೆ ಆ ಸಾಧನದ ಮೂಲಕ ತಲುಪಬೇಕಾದ 'ಅರಿವು' (ಜ್ಞಾನ) ಎಂಬುದು ಇಲ್ಲಿನ ಮುಖ್ಯ ಆಶಯ.
ಸಮಾಜದ ಅರೆಕೊರೆಗಳನ್ನು ಪ್ರಶ್ನಿಸುವವನು ಸೂಫಿ. ಇದು ಸೂಫಿಯೊಬ್ಬನ ಚಿಂತನೆಯಲ್ಲಿ ರೂಪುಗೊಂಡ ಸಾಲುಗಳ ಪುನರಾವರ್ತನೆಯಾಗಿದೆ. ಸೂಫಿ ಪರಂಪರೆ ಬಾಹ್ಯ ಪ್ರದರ್ಶನಕ್ಕಿಂತ ಆಂತರಿಕ ಶುದ್ಧತೆಯನ್ನು ಬಯಸುತ್ತದೆ. ಅಂತಹ ಮುಕ್ತ ಚಿಂತನೆಯೆಡೆಗಿನ ಒಂದು ವಿನಮ್ರ ಪ್ರಯತ್ನ ಇಲ್ಲಿರುವಾತನದು.ಈ ಕವಿತೆಗೆ ಮಲೆಯಾಳ ಆವೃತ್ತಿಯೂ ಇದೆಯೆಂಬುದನ್ನು ದಯವಿಟ್ಟು ಗಮನಿಸಿ. ಅದು ಕೂಡ ನೀವು ಇದನ್ನು ನೋಡಿದ ಸ್ಥಳದಲ್ಲಿಯೇ ವೀಕ್ಷಿಸಲು ಮತ್ತು ಓದಲು ಲಭ್ಯವಿದೆ. ವಾಸ್ತವವಾಗಿ ಕನ್ನಡ ಆವೃತ್ತಿಯೇ ಮೂಲಕೃತಿ.
ಆಚರಣೆಗಳು ದೇಹವನ್ನು ಬಾಗಿಸಬಹುದು, ಆದರೆ 'ಅರಿವು' ಮಾತ್ರ ಆತ್ಮವನ್ನು ಜಾಗೃತಗೊಳಿಸಬಲ್ಲದು. ಆವರ್ತನೆಗಳಲ್ಲಿ ಕಳೆದುಹೋಗದೆ ತತ್ತ್ವವನ್ನು ಹುಡುಕುವ ಈ ಹಾದಿಯಲ್ಲಿ ನಾವೆಲ್ಲರೂ ಪಯಣಿಗರು.

No comments:
Post a Comment