Saturday, May 9, 2026

ಕಗ್ಗಮಾಲಿಕೆ - ೬: ಧರ್ಮಜಿಜ್ಞಾಸೆ

 

ಕಗ್ಗಮಾಲಿಕೆ - ೬: ಧರ್ಮಜಿಜ್ಞಾಸೆ

ಪೀಠಿಕೆ:

ಕಾಣದ ವಸ್ತುಗಳೆಡೆಗಿನ ಭಯವೇ ಮನುಷ್ಯನಲ್ಲಿ ಭಕ್ತಿಯನ್ನುಂಟುಮಾಡುತ್ತದೆಯೇ ಎಂಬುದು ಮೂಲ ಜಿಜ್ಞಾಸೆ. ಅದು ಬರಿಯ ಭಯವಾಗಿದ್ದರೆ ಆ ದೇವತೆಗಳ ಪರಾಕ್ರಮಕ್ಕೆ ಸದಾ ಕಾಲ ಹೆದರುತ್ತಿರಬೇಕು. ಇದು ಜ್ಞಾನದ ದಾರಿಯಲ್ಲ. ಅದು ಬರಿಯ ಭಯವಾಗಿದ್ದರೆ ಅಲ್ಲಿ ಮನುಷ್ಯರ ಮತ್ತು ದೇವತೆಗಳ ನಡುವೆ ಪರಸ್ಪರ ಸ್ಪರ್ಧೆ ಏರ್ಪಟ್ಟು ಅಶಾಂತಿ ನೆಲೆಸೀತು. ಅಲ್ಲಿ ಧರ್ಮಕ್ಕೆ ಸ್ಥಾನವಿಲ್ಲ. ಇದು ಅಪೇಕ್ಷಣೀಯವಲ್ಲದ ಕಾರಣ ಧರ್ಮದ ನೆಲೆಯನ್ನು ಚಿಂತಿಸಿ ಕಂಡುಕೊಳ್ಳಬೇಕಾಗುತ್ತದೆ.

ಕಗ್ಗ:

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ?|
ಸುರರಟ್ಟಹಾಸದಿನೆ ನರಭಕ್ತಿಯೊರಲೋ?||
ಪರಕಿಸುವರೇನವರ್ಗಳನ್ಯೋನ್ಯ ಶಕ್ತಿಗಳ|
ಧರುಮವೆಲ್ಲಿದರಲ್ಲಿ? ಮಂಕುತಿಮ್ಮ||



ವ್ಯಾಖ್ಯಾನ:

ದೇವತೆಗಳು ಮನುಷ್ಯರ ಕಲ್ಪನೆಯೋ  ಅಥವಾ ಆ ದೇವತೆಗಳ ಬಲವೇ ನಮ್ಮ ಭಕ್ತಿಗೆ ಮೂಲವಾಯಿತೋ ಎಂಬ ಗೊಂದಲ ಸಾಮಾನ್ಯ ಮನುಷ್ಯನದ್ದು. ಮನುಷ್ಯರು ಮತ್ತು ದೇವತೆಗಳ ಪರಸ್ಪರ ಪರೀಕ್ಷಿಸುತ್ತಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡರೆ ಧರ್ಮದ ನೆಲೆ ಎಲ್ಲಿದೆಯೆಂದು ತಿಳಿಯುವುದು ಸಾಧ್ಯವಾಗದು.


ತಾತ್ಪರ್ಯ:

ಇದು ನಾಸ್ತಿಕತೆಯಲ್ಲ;  ಕಣ್ಣುಮುಚ್ಚಿ ಬೇಡಿಕೊಳ್ಳುವ ಭಕ್ತಿಯ ಪರಾಕಾಷ್ಠೆಯೂ ಇದಲ್ಲ. ಜಿಜ್ಞಾಸೆಯಿಂದ ತೊಡಗಿ ಅಂತಿಮ ಸತ್ಯದ ಆರಯ್ವಿಕೆಯತ್ತ ಒಯ್ಯುವ ಚಿಂತನೆಯ ಸೆಲೆಯಿದು. 

ಉಪಸಂಹಾರ:

ಸಗ್ಗ ಸುಖಕ್ಕೆ ದಾರಿ ತಿಳಿದವರಿಲ್ಲ. ಆದರೆ ಇದು ಕಗ್ಗ ಸುಖದ ಸೆಲೆ; ಇಲ್ಲಿ ಕಗ್ಗದ ಸಾರ ಸೋರದಂತಹ ರಾಗಬದ್ಧವಾದ ಅನುರಣನಗಳಿವೆ — ಇದನ್ನು ಯಥೇಚ್ಛವಾಗಿ ಆಸ್ವಾದಿಸಬಹುದು. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻

No comments:

Post a Comment

ಬೋಟ್ಸಪ್ ಪ್ರೊಫೆಸರ್

ಬೋಟ್ಸಪ್ ಪ್ರೊಫೆಸರ್   ಶಾಸ್ತ್ರ ಪುರಾಣವ ಕಲಿಯಲು ಹೊರಟೆ ಪದಪಾಠಕು ಮುನ್ನವೆ ಬೇಸತ್ತು ಹೋದೆ   ಅರಿವುದ ಮುನ್ನವೆ ಮರೆಯಿತು ಬೇಗ ಕಲಿವುದ ನಿಲ್ಲಿಸಿ ದು...