Thursday, April 16, 2026

ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ

ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ


ಪದ್ಯ:

ನಿಸ್ಕಾರ ನಮಸ್ಕಾರಗಳ ಹಲವಾವರ್ತಿಗಳ ಮಾಡಿ

ಸುಜೂದುಗಳ ಹಲವು ರಕ್ಕಾಯ್ತುಗಳನೋದಿ

ಅರಿಯಬೇಕಿದ್ದುದನರಿಯಲಿಲ್ಲ

ಅರಿಯಬೇಕಿದ್ದ ಬಗೆ ಅರಿಯಲಿಲ್ಲ ಎನ್ನುವನು ಸೂಫಿ


ಅರ್ಥಗಳು:

ನಿಸ್ಕಾರ = ಸಲಾತ್ ಸಲ್ಲಿಕೆ, ಆವರ್ತಿ = ಆವರ್ತನ, ಸುಜೂದು = ತಲೆಬಾಗುವಿಕೆ (ಮಂತ್ರ ಪಠಣದೊಂದಿಗೆ), ರಕ್ಕಾಯ್ತು = ಆವರ್ತನ


ವಿವರಣೆ:

"ರಕ್ಕಾಯ್ತುಗಳನ್ನು ಓದುವುದು" ಎಂಬ ಪ್ರಯೋಗ ಚಾಲ್ತಿಯಲ್ಲಿದೆ ಮತ್ತು ಅದನ್ನು ಯಥಾವತ್ತಾಗಿ ಇಲ್ಲಿ ಅನುಸರಿಸಲಾಗಿದೆ. ಮಂತ್ರಗಳನ್ನು ಉಚ್ಚರಿಸುತ್ತ ಕ್ರಮದಂತೆ ತಲೆಬಾಗಿ ಪ್ರಾರ್ಥಿಸುವುದನ್ನು "ಸುಜೂದುಗಳನ್ನು ಓದುವುದು" ಎನ್ನಲಾಗುತ್ತದೆ. ದಿನಕ್ಕೆ ಐದು ಬಾರಿ ಮಾಡುವ ಪ್ರಾರ್ಥನೆಯನ್ನು ನಿಸ್ಕಾರ (ಸಲಾತ್) ಎನ್ನಲಾಗುತ್ತದೆ. ನಿಸ್ಕಾರ ಎಂಬ ಪದ ಕೇರಳದಲ್ಲಿ ಮತ್ತು ಕರ್ನಾಟಕದ ಕರಾವಳಿಯಲ್ಲಿ ನಮಸ್ಕಾರ ಎಂಬ ಅರ್ಥದಲ್ಲಿಯೇ ಪ್ರಯೋಗಿಸಲ್ಪಡುತ್ತದೆ.


ಅದೆಷ್ಟೋ ಸಲ ನಿಸ್ಕಾರ ಮಾಡಲಾಗುತ್ತದೆ; ಇನ್ನೆಷ್ಟೋ ಸಲ ನಮಸ್ಕಾರ ಮಾಡಲಾಗುತ್ತದೆ. ಆದರೆ ಅರಿಯಬೇಕಿದ್ದುದನ್ನು ಅರಿಯಲೇ ಇಲ್ಲ; ಅರಿಯಬೇಕಿದ್ದ ಬಗೆಯನ್ನೂ ಅರಿಯಲಿಲ್ಲ. ಸಮಾಜದ ಅರೆಕೊರೆಗಳನ್ನು ಪ್ರಶ್ನಿಸುವವನು ಸೂಫಿ. ಇದು ಸೂಫಿಯೊಬ್ಬನ ಚಿಂತನೆಯಲ್ಲಿ ರೂಪುಗೊಂಡ ಸಾಲುಗಳ ಪುನರಾವರ್ತನೆಯಾಗಿದೆ.

ಕೃಷ್ಣಪ್ರಕಾಶ ಬೊಳುಂಬು

ಕಗ್ಗಮಾಲಿಕೆ – ೩: ಅವ್ಯಕ್ತ

 

ಕಗ್ಗಮಾಲಿಕೆ – ೩: ಅವ್ಯಕ್ತ 



ಕಗ್ಗ:

ಜೀವ ಜಡರೂಪ ಪ್ರಪಂಚವನದಾವುದೋ| 

ಆವರಿಸಿಕೊಂಡುಮೊಳನೆರೆದುಮಿಹುದಂತೆ|| 

ಭಾವಕೊಳಪಡದಂತೆ ಅಳತೆಗಳವಡದಂತೆ| 

ಆ ವಿಶೇಷಕೆ ಮಣಿಯೊ-ಮಂಕುತಿಮ್ಮ||


ಪದವಿಂಗಡಣೆ:

ಪ್ರಪಂಚವಂ ಅದಾವುದೋ

ಆವರಿಸಿಕೊಂಡುಂ ಒಳನೆರೆದುಂ ಇದೆಯಂತೆ =  ಆವರಿಸಿಕೊಂಡು ಅದರೊಳಗೆ ತಾನು ತುಂಬಿಕೊಂಡೂ ಇದೆಯಂತೆ


ವ್ಯಾಖ್ಯಾನ:

ಚೇತನವೂ ಅಚೇತನವೂ ಆಗಿರುವ ಪ್ರಪಂಚವನ್ನು ಅವ್ಯಕ್ತದೊಂದು ವಿಶೇಷವು ಆವರಿಸಿಕೊಂಡು ಅದರೊಳಗೆ ತಾನು ತುಂಬಿಕೊಂಡೂ ಇದೆಯಂತೆ. ಅದು ಭಾವಕ್ಕೂ ಒಳಪಡದಂತೆ ಮತ್ತು ಅಳತೆಗೂ ನಿಲುಕದಂತೆ. ಆ ಚೈತನ್ಯವಿಶೇಷಕ್ಕೆ ತಲೆಬಾಗು ಎಂದಿದ್ದಾರೆ.


ತಾತ್ಪರ್ಯ:

ಅವ್ಯಕ್ತವಾದುದನ್ನು ಅರಿತು ತಲೆಬಾಗಬೇಕೆಂಬುದು ಈ ಕಗ್ಗದ ತಾತ್ಪರ್ಯ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.


ಕೃಷ್ಣಪ್ರಕಾಶ ಬೊಳುಂಬು

Wednesday, April 15, 2026

ಧ್ಯಾನಹಂಸ

ಧ್ಯಾನಹಂಸ

ಅತ್ಯಂತ ಕಡಿಮೆ ಸಂಖ್ಯೆಯ ಗೆರೆಗಳಲ್ಲಿ ಹೆಚ್ಚಿನ ಭಾವನೆಗಳನ್ನು ಮೂಡಿಸುವ ಕಲಾಕೃತಿ ಇದಾಗಿದ್ದು ಇಲ್ಲಿ ಆರು ವಕ್ರ ರೇಖೆಗಳನ್ನು ಉಪಯೋಗಿಸಲಾಗಿದೆ. 

 

ಧ್ಯಾನಹಂಸ

ಇದು ಭಾಗವತದಲ್ಲಿ ಪರಮಾತ್ಮ ಹಂಸ ರೂಪವನ್ನು ತಾಳುವುದರ ಸೂಚಕವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಂಸವನ್ನು ನೀರ-ಕ್ಷೀರ ನ್ಯಾಯದಂತೆ ಹಾಲು ಮತ್ತು ನೀರನ್ನು ಬೇರ್ಪಡಿಸುವ 'ವಿವೇಕ'ದ ಸಂಕೇತವನ್ನಾಗಿ ನೋಡಲಾಗುತ್ತದೆ. ಇಲ್ಲಿ ಹಂಸವು ಧ್ಯಾನದಲ್ಲಿ ಮಗ್ನವಾಗಿರುವಂತೆ ಚಿತ್ರಿಸಿರುವುದು ಮನಸ್ಸು ಹೊಂದಬೇಕಾದ ಶುದ್ಧತೆಯ ಸೂಚಕ. ಧ್ಯಾನಮಗ್ನತೆಯೆಂಬುದು ಆತ್ಮಾನುಭವದ ಸ್ಥಿತಿಯೆನಿಸಿಕೊಂಡಿದೆ. ಇದು ಸ್ಥಿರತೆ, ಮೌನ ಮತ್ತು ಅಂತರಂಗದ ಅನ್ವೇಷಣೆಯ ಪ್ರತೀಕವಾಗಿದೆ.


ಕೃಷ್ಣಪ್ರಕಾಶ ಬೊಳುಂಬು

Friday, April 10, 2026

ಕಗ್ಗಮಾಲಿಕೆ - ೨: ನಂಬುಗೆ

 ಕಗ್ಗಮಾಲಿಕೆ - ೨: ನಂಬುಗೆ


ಕಗ್ಗ:

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ |

ದೇವ ಸರ್ವೇಶ ಪರಬೊಮ್ಮನೆಂದು ಜನಂ ||

ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |

ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ||


ವ್ಯಾಖ್ಯಾನ:

ಲೋಕದ ಹುಟ್ಟಿಗೆ ಕಾರಣಕರ್ತನೆಂದೂ, ಲೋಕದ ಮಾಯೆಯನ್ನು ಆಗಗೊಡುವವನೆಂದೂ, ದೇವರ ದೇವ ಪರಬ್ರಹ್ಮನೆಂದೂ, ಲಕ್ಷ್ಮೀ ಸಮೇತನಾದ ಮಹಾವಿಷ್ಣುವೆಂದೂ ಯಾವುದನ್ನು ತಾವು ಕಾಣದಿದ್ದರೂ ಜನರು ಶ್ರದ್ಧೆಯಿಂದ ನಂಬಿದ್ದಾರೋ ಆ ಪರಮಾದ್ಭುತ ಚೈತನ್ಯಕ್ಕೆ ಮೊದಲು ತಲೆಬಾಗು.


ತಾತ್ಪರ್ಯ:

ಲೋಕವನ್ನು ಸೃಷ್ಟಿಸಿದ ಚೈತನ್ಯವನ್ನು ಮೊದಲಿಗೆ ನಂಬಬೇಕು, ನಂಬಿ ತಲೆಬಾಗಬೇಕು ಎಂದು ಗುಂಡಪ್ಪನವರು ಈ ಕಗ್ಗದ ಮೂಲಕ ಸಾರಿದ್ದಾರೆ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ನಿಧಾನಗತಿಯ ಅನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.


ಕೃಷ್ಣಪ್ರಕಾಶ ಬೊಳುಂಬು

ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ

ಆವರ್ತನೆಗಳಲ್ಲಿ ತತ್ತ್ವವನ್ನರಿಯದವರಲ್ಲಿ: ಹೀಗೊಂದು ಸೂಫಿ ಧ್ವನಿ ಪದ್ಯ: ನಿಸ್ಕಾರ ನಮಸ್ಕಾರಗಳ ಹಲವಾವರ್ತಿಗಳ ಮಾಡಿ ಸುಜೂದುಗಳ ಹಲವು ರಕ್ಕಾಯ್ತುಗಳನೋದಿ ಅರಿಯಬೇಕಿದ್ದುದನ...