Showing posts with label ಅನುವಾದ. Show all posts
Showing posts with label ಅನುವಾದ. Show all posts

Thursday, July 16, 2026

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್ಲಿ ದೃಶ್ಯನಿರೂಪಣೆಯೊಂದಿಗೆ ಪ್ರಸ್ತುತಿಗೊಳ್ಳುತ್ತಿದೆ.


ಕನ್ನಡ


                       ಹಿಂದಿ



 ಮಲೆಯಾಳ


ತಮಿಳು


ದಾಂಪತ್ಯ ಪ್ರಣಯವೇ ಈ ಕವಿತೆಯ ವಿಷಯವಸ್ತು. ನಿತ್ಯದ ಬಡಿದಾಟಗಳ ಮತ್ತು ಅದರೊಂದಿಗಿನ ಸಿಡಿಮಿಡಿಗಳನ್ನು ಮತ್ತು ಎದೆಯಾಳದಲ್ಲಿ ಸೆಲೆಯಾದ ಪ್ರಣಯದ ಇರವನ್ನು ಸೂಚಿಸುವ ಕವಿತೆಯಿದು. ಪ್ರತಿ ದಿನದ ಅಗಲಿಕೆಯಲ್ಲೂ ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ ಪ್ರಣಯವೊಂದಿರುತ್ತದೆ; ಅದು ಮೌನದೊಳಗೆ ಮಾತಾಗಿರುತ್ತದೆ — ಎದೆಯಾಳದಲ್ಲಿ ಬತ್ತದ ಸೆಲೆಯಾಗಿರುತ್ತದೆ. ದಿನನಿತ್ಯದ ಸಣ್ಣಪುಟ್ಟ ಜಗಳಗಳು, ಬಡಿದಾಟಗಳ ನಡುವೆಯೂ ದಿನವೂ ಅರಳುವ ಹೂವಿನಂತೆ ಪರಸ್ಪರ ಪ್ರೀತಿ ದಿನದಿಂದ ದಿನಕ್ಕೆ ಇಮ್ಮಡಿಸುತ್ತಲಿದ್ದು ಹೃದಯದ ಗೂಡಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.


ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಇದರ ಯಥಾಪ್ರತಿಯನ್ನು ಸಂಪದ ಕನ್ನಡ ತಾಣದಲ್ಲಿ ಓದಬಹುದು.  


ಪ್ರತಿ ದಿನದ ಅಗಲಿಕೆಯಲ್ಲೂ

ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ

ಪ್ರಣಯವೊಂದು ಇದ್ದೇ ಇರದೇ

ಎದೆಯೊಳೊಂದು ಸೆಲೆಯಾಗಿ


ಪ್ರತಿ ಮೃದುಲ ಸ್ಪರ್ಶದಲ್ಲೂ

ಹರಿವ ಕಂಬನಿಯಲ್ಲೂ

ಅರಿಯದೊಂದು ಹೆದರಿಕೆಯಲ್ಲೂ

ಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದೆ


ಅನುದಿನದ ಬಡಿದಾಟದಲೂ

ಅರಳುತ್ತಿರುವ ಹೂವಿನಂತೆ

ಇಮ್ಮಡಿಸುತಿದ್ದೇ ಇರದೇ

ಪ್ರೀತಿ ಎದೆಯ ಗೂಡಿನೊಳು


ಹೊಸ ರೂಪದ 'ದಾಂಪತ್ಯ ಪ್ರಣಯ' ಕವಿತೆ

ಪ್ರತಿ ದಿನದ ಅಗಲಿಕೆಯಲ್ಲೂ

ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ

ಪ್ರಣಯವೊಂದು ಇದ್ದೇ ಇರದೇ

ಎದೆಯೊಳೊಂದು ಸೆಲೆಯಾಗಿ

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ 


ಪ್ರತಿ ಮೃದುಲ ಸ್ಪರ್ಶದಲ್ಲೂ

ಹರಿಯುತಿಹ ಕಂಬನಿಯಲ್ಲೂ

ಪ್ರೀತಿಯೊಂದು ಇದ್ದೇ ಇರದೇ

ಮರ್ಮಗಳನು ತಿಳಿಯದೆ 

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ


ಅನುದಿನದ ಬಡಿದಾಟದಲೂ

ನಿತ್ಯ ಅರಳುವ ಹೂವಿನಂತೆ

ಇಮ್ಮಡಿಸುತ ಇದ್ದೇ ಇರದೇ

ಪ್ರೀತಿ ಎದೆಯ ಗೂಡಿನೊಳು

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ


"ಹೇಳಿರದ ಗುಟ್ಟುಗಳಿರದೇ" ಮತ್ತು "ಮೌನದೊಳಗೆ ಮಾತಾಗಿ" ಎರಡು ಸಾಲುಗಳನ್ನು ಇಲ್ಲಿ ಹೊಸದಾಗಿ ಸೇರಿಸಲಾಗಿದೆ.


ಹಾಡುವಿಕೆ ಮತ್ತು ದೃಶ್ಯನಿರೂಪಣೆ

ಕವಿತೆಯ ದೃಶ್ಯನಿರೂಪಣೆ ಮತ್ತು ಹಾಡುವಿಕೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮೂಡಿಬಂದಿದೆ. ಕೃತಕ ಬುದ್ಧಿಮತ್ತೆಗೆ ರಾಗ ಸಂಯೋಜನೆಗೆ ಆದೇಶಿಸುವಾಗ "ಬಯಕೆಗಳನ್ನು ಸೂಕ್ಷ್ಮವಾಗಿ ಉದ್ದೀಪಿಸಬೇಕು; ಉದ್ರೇಕಿಸಿ ಪ್ರಚೋದಿಸಬಾರದು" ಎಂದು ಕಟ್ಟುಪಾಡು ವಿಧಿಸಿದ್ದೆ. ನಾನೊಬ್ಬ ಬರಹಗಾರನಾಗಿ ಇದು ರಾಗ ಸಂಯೋಜನೆಗೆ ಪೂರಕವಾಗಿ ಮೂಡಿದೆಯೆಂಬ ನಂಬಿಕೆಯಲ್ಲಿದ್ದೇನೆ.   


ಹಾಡುವಿಕೆ

ಹಾಡುವಿಕೆಯನ್ನು ಸುನೋ ಎಐಯ ಉಚಿತ ಸ್ತರದಲ್ಲಿ ಮೂಡಿಸಲಾಯಿತು. ಸುನೋ ಎಐಗಾಗಿ ವಿಶೇಷ ಪ್ರೋಂಪ್ತ್ ಬರೆಯಲಿಕ್ಕೆ ಜೆಮಿನಿ, ಕ್ಲೌಡ್ ಮತ್ತು ಚಾಟ್‍ಜಿಪಿಟಿಗಳ ಬಳಕೆಯಾಗಿದೆ. ಕೆಲವು ಹಾಡುಗಳು ನಿರೀಕ್ಷೆಗೆ ತಕ್ಕನಾಗಿ ಇರಲಿಲ್ಲ. ಅಂಥವುಗಳನ್ನು ನಿರ್ದಾಕ್ಷಿಣ್ಯವಾಗಿ ತಳ್ಳಬೇಕಾಯಿತು. ಇನ್ನು ಕೆಲವು ಹಾಡುಗಳಲ್ಲಿ ಉಚ್ಚಾರದೋಷಗಳಿದ್ದುವು.  ಉಚ್ಚಾರದೋಷಗಳನ್ನು ಪೂರ್ಣವಾಗಿ ಇಲ್ಲದಾಗಿಸಲು ಸಾಧ್ಯವಿಲ್ಲದಿದ್ದರೂ ಹೆಚ್ಚುವರಿಯಾಗಿ ಮೂಡಿದ ಉಚ್ಚಾರಣೆಗಳನ್ನು ಆಡಿಯೋ ಎಡಿಟರ್ ಸಹಾಯದಿಂದ ಎಡಿಟ್ ಮಾಡಬೇಕಾಯಿತು. 


ದೃಶ್ಯನಿರೂಪಣೆ

ಹಾಡುಗಳ ಹತ್ತು ಸೆಕೆಂಡ್ ಕಾಲಾವಧಿಯ ಅಣಿಮೇಷನ್ ಚಿತ್ರಗಳನ್ನು ಜೆಮಿನಿ ಎಐಯ ಸಹಾಯದಿಂದ ಮೂಡಿಸಲಾಯಿತು. ಜೆಮಿನಿ ಎಐಯಿಂದ ಮೂಡುವ ವಿಡಿಯೋಗಳಲ್ಲಿ ಜೆಮಿನಿ ಲೋಗೋ ಇರುತ್ತದೆ. ಇದರಲ್ಲಿ ಲೋಗೋ ಕಾಣಿಸದಂತೆ ಮಾಡಲು ಪುನಃ ಎಡಿಟರ್ ಸಹಾಯ ಮಾಡಿದ್ದಾನೆ.


ಒಂದು ವಾಕ್ಯದ ಪ್ರೋಂಪ್ತ್ ಬರೆದು ಇಡಿಯ ವಿಡಿಯೋ ಮತ್ತು ಹಾಡುಗಳನ್ನು ತಯಾರಿಸುವುದು ಪೂರ್ಣವಾಗಿ ಕಲ್ಪಿತ. ಹಾಗಾಗಿ ಇದನ್ನು ನೋಡಿ ಯಾರಾದರೂ "ಎಂಚಿನ! ಕನ್ನಡ ಮೀಡಿಯಂ ಕಾಸರಗೋಡಾ! ಅವು ಮಾಂತ ಎಐಡ್ ಮಲ್ಪುನಿಯೇ; ಅವ್ವೆನ್ ಏರ್ಲಾ ಮಲ್ಪೋಲಿ" ಅಥವಾ "ಯಾವದು!  ಕನ್ನಡ ಮೀಡಿಯಂ ಕಾಸರಗೋಡಾ! ಅದೆಲ್ಲ ಎಐಲಿ ಮಾಡುವದೂಳಿ; ಅದರ ಆರೂ ಮಾಡುಗು" ಎಂದು ತಿಳಿದುಕೊಳ್ಳುವುದಿದ್ದರೆ ದಯವಿಟ್ಟು ಇದನ್ನು ಓದಬೇಕೆಂದು ಕೇಳಿಕೊಳ್ಳುತ್ತೇನೆ.


ಇದು ಕಾಸರಗೋಡಿನ ಕನ್ನಡ

ಚಾನೆಲಿನ ಹೆಸರು ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲ್ . ಕಾಸರಗೋಡು ಕನ್ನಡಿಗರ ಕನ್ನಡ ಭಾಷೆಯ ಅಭಿವ್ಯಕ್ತಿಗೆಂದೇ ಮಾಡಿರುವ ಚಾನೆಲ್ ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲ್. ಇಲ್ಲಿ ಇಂಡಿಕ್ ಪರಂಪರೆಯ ಜೀವನ ವಿಧಾನಗಳನ್ನು ಹೇಳಲಾಗುತ್ತದೆ, ಕನ್ನಡ ಭಾಷೆಯ ಅಭಿವ್ಯಕ್ತಿ ಕಾಸರಗೋಡಿನಲ್ಲಿ ಯಾವ ಬಗೆಯಲ್ಲಿ ಆಗುತ್ತಿದೆ ಎಂಬುದರ ಉದಾಹರಣೆಯಾಗಿಯೂ ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲಿನಲ್ಲಿ ನೋಡಬಹುದು.


ಇದು ಇಂಡಿಕ್ ಜೀವನವಿಧಾನದ ಒಳಗುಟ್ಟು. ಇದು ಕಾಸರಗೋಡಿನ ಕನ್ನಡ. ಇದು ಕಾಸರಗೋಡಿನ ಕನ್ನಡ. 🎶@Kannada Medium Kasaragod





Saturday, November 16, 2013

ವೈಷ್ಣವ ಬಂಧು

ವೈಷ್ಣವ ಬಂಧುವೆಂದವನನ್ನೇ ಕರೆವರು
ಪರರ ದುಃಖಗಳನ್ನರಿತವನ
ದುರ್ಬಲರಿಂಗುಪಕರಿಪವನವನು
ಮನದೊಳಭಿಮಾನವ ತಾಳದೆಯೆ

ಎಲ್ಲವರೊಡ ಸಹನೆಯಿಂದೇಗುತ್ತ
ಯಾರನ್ನೂ ತೆಗಳದೆ ಜೀವಿಸುವ
ನಡೆನುಡಿಯಿಂದ ಸಮಚಿತ್ತನವನು
ಆ ವೈಷ್ಣವನವ್ವೆಯೋ ಧನ್ಯೆಯಲ

ಸಮತೆಯ ಕಾಣುತ ದಾಹವ ತೊರೆಯುತ
ಪರಸ್ತ್ರೀಯರ ತಾಯೆಂದೆಣಿಸುವನು 
ನಾಲಗೆಯಿಂದಲಸತ್ಯವ ನುಡಿಯನು
ಪರಸ್ವತ್ತುಗಳನ್ನುಣದಿರುವವನು

ಮೋಹಮಾಯೆಯೊಳು ಮುಳುಗಿರದವನು
ದೃಢವೈರಾಗ್ಯವ ತಾಳ್ದವನು
ರಾಮನಾಮವೇ ಅಮೃತವವಂಗೆ
ಧಾಮಂಗಳೆಲ್ಲವ ಜಾನಿಸಿರೆ*

ದುರಾಶೆಯ ತಾಳನು ಕಪಟರಹಿತನು
ಕಾಮಕ್ರೋಧಂಗಳ ಗೆಲಿದವನು
ಕುಲವ ಉದ್ಧರಿಪವನವನನ್ನೇ ಕಾದಿಹೆ
ದೀನ ನರಸಯ್ಯ ನಾನು ದರುಶನಕೆ

ಮೂಲಸಾಹಿತ್ಯ - ನರಸಿಂಹ ಮೆಹತಾ, ವೈಷ್ಣವ ಜನತೋ ತೇನೇ ಕಹಿಯೇ.

*ಜಾನಿಸು = ಧ್ಯಾನಿಸು

ಇದರ ಹಳೆಯ ಆವೃತ್ತಿಯೊಂದನ್ನು ಕೆಳಗಣ ತಾಣದಲ್ಲಿ ಕೇಳಬಹುದು:

Tuesday, August 13, 2013

ಕೊಡು ಗುರುವೇ ಹೊಸ ಕನಸುಗಳನ್ನು





'ಪಿಟಿ ದ ನೇಷನ್' ಎಂಬ ಖಲೀಲ್ ಗಿಬ್ರಾನ್ ಕವಿತೆಯ ಛಾಯಾನುವಾದವನ್ನು ಇಲ್ಲಿ ಓದಬಹುದು. ಮೂಲ ಕವಿತೆಯನ್ನೂ ಓದಿರಿ. ~ ಕೆ.ಪಿ. ಬೊಳುಂಬು

khalil-gibran-beauty-eternity


ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು

ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆಳ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏಳ್ಗೆಗಾಗೆಚ್ಚರಿಸು


ಕೊಡು ಗುರುವೇ ಹೊಸ ಗುರುವರ್ಯಕ್ಕಳ

ನಾಡಿನೊಳ್ಳಿತಿಗಾಗಿ ಹಾರಯಿಸುವವರನ್ನು

ಕೊಡು ಗುರುವೇ ಹೊಸ ಕನಸುಗಳನ್ನು

ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ



ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...