Monday, August 26, 2013
ಮಳೆ
ಎಡೆಬಿಡದೆ ಸುರಿಯುವ ಮಳೆಗೆ
ಕೊಚ್ಚಿಹೋದುವು ಹಲವೂ
ಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆ
ಕೊನೆಯಿರದ ಸುರಿತದ ನಡುವೆ
ಕೊನೆಗಂಡಿತಂದು ಮಳೆಯೂ
ಇನ್ನೊಮ್ಮೆ ಬಾರದೇ ಆಷಾಢ ಮಾಸ
ಸುಡುವ ಬೇಗೆಯ ಬಿಸಿಗೆ
ಒಣಗಿ ಮರ-ಗಂಟಿಗಳು
ಇನ್ನೊಮ್ಮೆ ಕೊನರುವುದೇ ಕನಲಿರುವ ಕೊಂಬೆ
ತನ್ನದಿರೆ ತನ್ನದೆಂದೂ
ಅನ್ಯವಿರೆ ಪರವೆಂದೂ
ಅನ್ಯವನ್ನೊ ಳಗೊಂಡೀತೇ ಮುರುಟಿರುವ ಮಾನಸ
ವ್ರಣ
ನಿನ್ನನರಿತೆನು ಎಂದು
ತಿಳಿದಿದ್ದೆ ನಾನಂದು
ನಮ್ಮ ದೇಹಗಳ ನಾವರಿತುಕೊಂಡ ಹಾಗೆ
ಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆ
ಇನ್ನೊಂದು ಸ್ಪರ್ಶದಲಿ ನೋವನೀವಂತೆ
ಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನು
ಭ್ರಮೆ ಕಳಚಿತೊಂದು ದಿನ
ತಿಳಿಯಲಾರದೆ ಹೋದೆ
ನನ್ನ ದೇಹವನೇ ನಾನರಿಯಲಿಲ್ಲ
ಮೇಲುಹರಿವಿನ ಮಂಜು
ನಿಜದಲ್ಲಿ ಹಿರಿದೆಂದು
ಮಂಜುಗುಡ್ಡೆಯ ಗಾತ್ರಾ ನಾನರಿಯಲಿಲ್ಲ
ಹೊರಗೆ ಕಾಣುವ ಪೊರೆಯ
ಒಳಗನರಿಯದೆ ಹೋದೆ
ಒಳಗೆ ಬೆಳೆದಿದ್ದ ವ್ರಣಾ ನಾನರಿಯಲಿಲ್ಲ
ಮಂಜುಗುಡ್ಡೆ = iceberg
ಜೀವವಾಹ
ಹಗಲಿರುಳು ಎಡೆಬಿಡದೆ
ನನ್ನೊಳಗೆ ನನ್ನಂತೆ
ಹರಿವ ಜೀವದ ವಾಹ ನೀನಲ್ಲವೇ
ಮಣ್ಣ ಕಣ-ಕಣದಿಂದ
ಸ್ಫುರಣಗೊಳೆ ಭವವಾಗಿ
ಅರಳ್ವ ಜೀವದ ವಾಹ ನೀನಲ್ಲವೇ
ಅಳವಿರದಾ ಕಾಶದಿಂದ
ಹರಿವ ಬಲ್ಝರಿಯಂತೆ
ಸುರಿವ ಜೀವದ ವಾಹ ನೀನಲ್ಲವೇ
ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟನೀಯುವ ವಾಹ ನೀನಲ್ಲವೇ
ಚಣಚಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನಲ್ಲವೇ
ಎಲ್ಲೆ
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ
ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು
ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು
ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು
Tuesday, August 13, 2013
ತಿರುಗಿನೋಡಿದ ಮೋರೆ
ತಿರುಗೆ ತಿರುತಿರುಗಿ ನೋಡದೇಕೆ
ಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು
ತನ್ನ ಮೆಯ್ಯ ಮಾಟವನ್ನು ತೋರದೇಕೆ
ಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳು
ತಂತಮ್ಮ ಗಮ್ಯಗಳ ಸೇರವೇಕೆ
ಕೊನೆಯ ಕೊಳ್ಳುವನ್ನಕ ಇಡಿದಿಡಿವ ಚಾಣಗಳು
ಅರೆಯಿಂದ ರೂಪೊಂದ ಕಡೆಯವೇಕೆ
ಮತ್ತೆ ಒರೆಯುವ ಮುನ್ನ ತಡವರಿಸಿ ಮಾತುಗಳು
ಪಿಸಿಯುತ್ತ ತಾವ್ತಾವೇ ಉಲಿಯವೇಕೆ
ಮತ್ತೆ ಕರೆಯುವ ಮುನ್ನ ಕರೆದಿದ್ದ ಧ್ವನಿಗಳು
ತಂತಮ್ಮ ಜಾಡುಗಳ ತೋರವೇಕೆ
ಕೊಡು ಗುರುವೇ ಹೊಸ ಕನಸುಗಳನ್ನು
'ಪಿಟಿ ದ ನೇಷನ್' ಎಂಬ ಖಲೀಲ್ ಗಿಬ್ರಾನ್ ಕವಿತೆಯ ಛಾಯಾನುವಾದವನ್ನು ಇಲ್ಲಿ ಓದಬಹುದು. ಮೂಲ ಕವಿತೆಯನ್ನೂ ಓದಿರಿ. ~ ಕೆ.ಪಿ. ಬೊಳುಂಬು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು
ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆಳ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏಳ್ಗೆಗಾಗೆಚ್ಚರಿಸು
ಕನಸು
ಹೊಸೆದು ಹೊಸದೊಂದನು
ಕೋಪ-ತಾಪ
ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.
ನಿನ್ನ ಕಡೆಗಣ್ಣ ನೋಟಗಳು;
ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ?
ನಾನಿಂದು ತಾಳದಾದೆ,
ಕೋಪಿಸುತ್ತ ಇದ್ದಿರದಾದೆ;
ಜೇನಿನೊಳದ್ದಿದ ಆ ಕೆಂದುಟಿ ಮತ್ತೆ ಎನ್ನ ಕೋಪವ ಕರಗಿಸದೇ?
ಶೂನ್ಯ
ನೀನಿರದ ಈ ರಾತ್ರಿ
ಮೇಲೆಲ್ಲ ಶೂನ್ಯವಾಗಿ
ಬಾನ ನಕ್ಷತ್ರಗಳೂ ಕಾಣದಿಹವು
ಕಣ್ಣ ಹನಿ
ಕಣ್ಣ ಹನಿ ಜಾರಿತು
ಹೇಳಿದರೂ ಕೇಳದೆ
ಕಣ್ಣು ಕಿವಿಗೆಷ್ಟು ದೂರ ಎಂದಿಂದು ಅರಿತೆ
ಒಂದೆಡೆಯೆ ಇದ್ದರೂ
ಎದುರು ಮುಖ ಮಾಡಿವೆ
ತಮ್ಮ ತಾವರಿಯದಂತೆ ಎಂದಿಂದು ಅರಿತೆ
ದೂರದಿಂದೊಂದು ಸದ್ದು
ಮೊದಲ ಸಲ ಕೇಳಿಬಂತು
ಕಣ್ಣ ಹಾಯಿಸುವ ಮುನ್ನ ದೂರವಾಯಿತು
ಕಾಣದಂತಹ ನೋಟ
ಮೊದಲ ಸಲ ಕಂಡುಬಂತು
ಕಿವಿಯ ಅಗಲಿಸುವ ಮುನ್ನ ಕಾಣದಾಯಿತು
ಕೇಳಲೂ ಆರೆನು
ಕೇಳದಿರಲಾರೆನು
ಎದೆಯ ತುಡಿತದ ಪರಿಯ ಬಣ್ಣಿಸಲಾರೆನು
ಕಾಣಲೂ ಆರೆನು
ಕಾಣದಿರಲಾರೆನು
ಒಳಗೆ ಹುದುಗಿದ ಅರಿಯ ಮಣಿಸಲಾರೆನು
[soundcloud url="https://api.soundcloud.com/tracks/81901997" width="100%" height="166" iframe="true" /]
ಕಾಣದ ಲೋಕ
ನಾ ಕಾಣದ ಲೋಕ;
ತೆರಕೊಂಡಿತಿಂದು ಇಲ್ಲಿ,
ಕಂಡಿರದ ಮಾಟಗಳ ಕೊಡಮಾಡಿತು.
ಎಲ್ಲೋ ಒಮ್ಮೆ ಕಂಡ ಹಾಗೆ;
ಕಂಡು ಮರೆತು ಹೋದ ಹಾಗೆ,
ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.
ದೂರದಿಂದ ಕಂಡೆ;
ಕಂಡು ಸೋತುಹೋದೆ,
ಮಾತುಗಳಿಲ್ಲದೆ ಮೂಕನಾಗಿಹೋದೆ.
ನೀನೇನೋ ದೋಚಿಕೊಂಡೆ;
ನಾನೇನೋ ಕಳೆದುಕೊಂಡೆ,
ಕೊಟ್ಟುಕೊಳುವ ಲೆಕ್ಕವನೂ ನಾ ಮರೆತುಹೋದೆ.
ಕೇಳರಿಯದಾ ರಾಗ;
ನಿನ್ನ ಪಿಳ್ಳಂಗೋವಿಯಲಿ,
ನನ್ನ ಸ್ಪರ್ಶದಿಂದೊಮ್ಮೆ ಮೂಡಿಬಂದ ಹಾಗೆ.
ಆಕಾಶ ಗೋಪುರದ;
ಮೇಲುಹಾಸನೂ ದಾಟಿ,
ಇಂಪಾದ ರಾಗವನ್ನು ಊದುತಿರುವ ಹಾಗೆ.
[soundcloud url="https://api.soundcloud.com/tracks/126563779" params="color=ff6600&auto_play=false&show_artwork=true" width="100%" height="166" iframe="true" /]
ನಿನ್ನದೊಂದೇ ಗುಂಗು
ನಿನ್ನದೊಂದೇ ಗುಂಗು
ಎತ್ತ ಹೋದರೂ ಇಂದು
ನಿನ್ನ ಯೋಚನೆಯಲ್ಲಿ ಕಳೆದುಹೋದೆನು
ನಿನ್ನ ಗುಂಗಿನೊಳಿದ್ದು
ಮರಳ ಪ್ರತಿಮೆಯ ಕೊರೆದು
ಕಡಲ ತೀರದೆ ನಿಂತು ಕಳೆದುಹೋದೆನು
ಅಲೆಯ ಸದ್ದಿನ ಜೊತೆಗೆ
ಸಿಡಿದು ಸಿಡಿಯುವ ಗುಡುಗು
ದಿಣ್ಣೆ ಹಳ್ಳದ ನಡುವೆ ಕಳೆದುಹೋದೆನು
ಕಡಲ ಮೊರೆತದ ನಾದ
ಕಿವಿಗೆ ಇಂಪಾಗಿರಲು
ದಿಣ್ಣೆ ಹಳ್ಳದ ನಡುವೆ ಕಳೆದುಹೋದೆನು
ದಿನವು ಕೊನೆಗೊಳ್ಳುವ ಹೊತ್ತು
ದಿಕ್ಕು ಕೊನೆಗೊಳ್ಳುವ ಕಡೆಗೆ
ದಿಟ್ಟಿಯಿಡುತಲೇ ಇಂದು ಕಳೆದುಹೋದೆನು
ಎಂದು ಸೇರುವುದೆಂದು
ಆ ಎರಡು ರೇಖೆಗಳು
ಬೆರಗುಗೊಳುತಲೇ ನಿಂತು ಕಳೆದುಹೋದೆನು
[soundcloud url="https://api.soundcloud.com/tracks/86309502" width="100%" height="166" iframe="true" /]
ಬಿಟ್ಟುಬಿಡು
ಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?
ಆರ ಭಜಿಸಲಿ ಈ ಗಾಢ ತಿಮಿರದೊಳು
ಮನದ ಕದವನು ಈಗ ಮುಚ್ಚಿಕೊಳಲೇ?
ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆ
ರೇತ ಸಮುದ್ರದಲೀಗ ತೇಲಿಕೊಳಲೇ?
ಅತ್ತು ಬಳಲಿದ ಕಣ್ಣ ಹನಿ ಬತ್ತಿಹೋಗಿರಲು
ಕ್ಷುದ್ರ ರೆಪ್ಪೆಯನೊಮ್ಮೆ ಮುಚ್ಚಿಕೊಳಲೇ?
ಕಂಡ ಕನಸುಗಳೆಲ್ಲ ವಿಚ್ಛಿದ್ರವಾಗಿರಲು
ಎದೆಯ ಬಯಕೆಯನೀಗ ಬಿಚ್ಚಿಕೊಳಲೇ?
ಎಲ್ಲ ಕೊನೆಗೊಳುವ ಮುನ್ನ ಮನವೀಗ ಬೇಡುತಿದೆ
ಎನ್ನ ಕರ್ಕಶ ಸ್ವರದಿಂದೊಮ್ಮೆ ಹಾಡಿಕೊಳಲೇ?
[soundcloud url="https://api.soundcloud.com/tracks/86459760" width="100%" height="166" iframe="true" /]
ಮಳೆ
ಕಾಮನಬಿಲ್ಲು
ನಾನೊಂದು ಕಾಮನಬಿಲ್ಲ
ಹಿಡಿದು ತರುವಂತಿದ್ದರೆ
ತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆ
ನಿನಗಾಗಿ ಗಿರಿಮಾಲೆಗಳ
ಕಟ್ಟಿ ಕೊಡುವಂತಿದ್ದರೆ
ಕಟ್ಟಿ ಕೊಡುವೆ ನಿನ್ನನ್ನೂ ತುತ್ತ ತುದಿಗೇರಿಸಿ
ನಿನ್ನೆಲ್ಲಾ ನೋವುಗಳನ್ನೂ
ಅನುಭವಿಸುವಂತಿದ್ದರೆ
ಸ್ವೀಕರಿಸಿ ಎಲ್ಲವನ್ನೂ ನಾ ಹಂಚಿಕೊಳ್ಳುವೆ
ನಡೆಯವೀ ಮಾತುಗಳೆಂದೂ
ಬರಿಯ ಕನಸಿನವೀ ಮಾತುಗಳೆಂದೂ
ನೀರ ಮೇಲೆ ದೋಣಿಗಳ ತೇಲಿಬಿಡುವೆ
ಕಾಗದದ ಮೇಲೆ ಬರೆದ
ಬರಿಯ ಕವಿತೆ ಸಾಲುಗಳೆಂದೂ
ಕಾಗದದ ದೋಣಿಯಂತೆ ಸುಳ್ಳು-ಪೊಳ್ಳು-ಟೊಳ್ಳು
ಹಾಡಲಾಗದುದು
ಬರವು ಇನ್ನೂ ನಾದ ಹಲವು
ಹಾಡಬಯಸಿದುದನ್ನೂ ಹಾಡದಾದೆನು
ಎದೆಯ ಮಾತ ಹೇಳಲೇಕೋ
ಕೂಡಿ ಬರದು ಕಾಲವೇಕೋ
ಹೇಳಬಯಸಿದುದೆಲ್ಲಾ ಉಳಿದುಹೋಯಿತು
ಮೊಗ್ಗು ಏಕೆ ಅರಳದೀಗ
ಗಾಳಿಯೇಕೆ ಆಡದೀಗ
ಕಾಣುತಿದ್ದ ಮುಖವೂ ಕಾಣದಾಯಿತು
ನನ್ನ ಮನೆಯ ಬೀದಿಯ ಮುಂದೆ
ಕಿಟಕಿಯಲ್ಲಿ ಕಂಡ ಮುಖವ
ಒಮ್ಮೆ ಕರೆಯುವ ಮೊದಲೇ ಬೆಳಕು ಆರಿತು
ಮತ್ತೆ ಎದುರುಗೊಳ್ಳುವ ತನಕ
ಮತ್ತೊಮ್ಮೆ ಅವಳ ಕಾಣುವ ತವಕ
ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು
ಸ್ಫೂರ್ತಿ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು
ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||
ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||
[soundcloud url="https://api.soundcloud.com/tracks/69280433" width="100%" height="166" iframe="true" /]
ಸನಿಹ
ಮನಸ್ಸಿನ ಭ್ರಾಮಕ ಪಟಲದೊಳು
ಈ ಕ್ಷಣ ನೀನೆಲ್ಲಿಲ್ಲಿಹೆಯೋ
ಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆ
ಪ್ರತಿ ಜೀವದಲೂ ನಿನ್ನನೇ ಕಾಣುವೆ
ಹಿಂಬಾಲಿಸುವೆ ನಿನ್ನ ನೆರಳಾಗಿ
ನೀನಲ್ಲದೆ ಬೇರೆ ಲೋಕವ ಕಾಣೆನು
ಎಲ್ಲಿದ್ದರೂ ಕಾಣುವೆ ನಿನ್ನಿರವ
ಮರಕೆಯ ಕಾಣೆನು ಇರುಳುಗಳಲ್ಲಿ
ಬಂಧಿಯೇ ಆದೆನು ಮಾಯೆಯೊಳು
ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು
ಪ್ರೇಮ ನಿವೇದನೆ
ಪ್ರಣಯ
ಪೌರ್ಣಮಿ
ನೀನಿರದೆ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು
ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು
ನೀನಿರದೆ ಜೇನಿಲ್ಲ
ನೀನಿರದೆ ತುಟಿಯಿಲ್ಲ
ನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಕಾವಿಲ್ಲ
ನೀನಿರದೆ ನೋವಿಲ್ಲ
ನೀನಿರದೆ ಸುಡುಬಿಸಿಯಲಿ ಹದಗಾವನು ಈವ ಬಗೆಯೆಂತು
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಮಾತಿಲ್ಲ
ನೀನಿರದೆ ಕನಸಿಲ್ಲ
ನೀನಿರದೆ ಮೆಲುಮಾತಿನ ಸವಿಗನಸನು ಕಾಂಬ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ಚಿತ್ರಪಟ
ತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲ
ಕೇಳಿದರು ಗೆಳತಿಯರು ಯಾರವನು ಯಾರವನು
ನಿನ್ನ ಪಟಲವನು ತುಂಬಿದವನು
ಉತ್ತರವ ನಾನರಿಯೆ ನಾನರಿಯೆ ಎನದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಎದೆಯ ಕೆನ್ವಾಸಿನ ಮೇಲೆ ಬರೆದಿದ್ದೆ ಪಟವೊಂದು
ಕಂಡ ಕನಸುಗಳ ಮಾರೊಡಲನಾಂತು
ಎದೆಯೊಳವಿತಿಟ್ಟ ಗುಟ್ಟುಗಳಿ ಗುತ್ತರವ ನೀಯದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಬಲು ದೀರ್ಘವಾಗಿದ್ದ ಕನಸಿನಿಂದೆಚ್ಚರಗೊಂಡೆ
ಸುತ್ತ ಕಂಡುಬಂದುದು ಬರಿಯ ಹೊದಿಕೆಯ ಅರಿವೆ
ತಾಳ್ಮೆ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
ಇರುಳು ಕಳೆಯುವವರೆಗೆ
ಇರುಳಿನೊಲು ಕಾವೆನು ನಾನು
ಬೆಳಗ್ಗಿನಾ ಬೆಳಕಿನ ಬರವ ತಾಳ್ಮೆಯಲಿ ತಾಳ್ದು
ಬೆಳಗು ಬೆಳಗಲೇ ಬೇಕು
ಇರುಳು ಮಾಸಲೇ ಬೇಕು
ನಿನ್ನಿನಿದಾದ ಮಾತುಗಳ ಹೊಳೆ ಹರಿಯಬೇಕು
ಇನಿದಾದ ಮಾತಿನ ಒಳಗೆ
ಕೇಳರಿಯದಾ ಗಾನ
ಆಕಾಶ ಗೋಪುರವ ಛೇದಿಸಲೇ ಬೇಕು
ಎನ್ನೆದೆಯ ಗೂಡಿನೊಳಿರುವ
ಹಕ್ಕಿಗಳ ಚಿಲಿಪಿಲಿಯಿಂದ
ಗಾನಕ್ಕೆ ಮೇಳವನು ಕೂಡಿಸಲೇ ಬೇಕು
ಆ ಗಾನಮೇಳದಿಂದೆ
ಹೂವುಗಳು ತಾವು ಅರಳಿ
ಇಳೆಯ ಹೂದೋಟಗಳ ವ್ಯಾಪಿಸಲೇ ಬೇಕು
ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
[soundcloud url="https://api.soundcloud.com/tracks/85846689" width="100%" height="166" iframe="true" /]
ಹಳೆಯ ಕವಿತೆಗೆ ಹೊಸ ರೂಪ (ಅಂತರಾತ್ಮ - ೨)
ನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾ
ಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾ
ಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿ
ಒಳಗಿರುವ ನನ್ನನ್ನು ಎಬ್ಬಿಸಿದೆ ನೀ
ಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆ
ಛಲವನ್ನು ಎನಗಿತ್ತು ನಡೆಯಿಸಿದೆ ನೀ
ಬಾಳ್ವೆಯಲಿ ನಲಿವನ್ನೂ ಹದವಾಗಿ ನೋವನ್ನೂ
ಬೆರೆಸುತ್ತ ಊಡಿಸುತ ಬದುಕಿಸಿದೆ ನೀ
ಕ್ಷಣದೊಂದು ಮಾಯೆಯಲಿ ಹಲವಾರು ಬಣ್ಣಗಳ
ತಡೆಯಿರದೆ ಎಲ್ಲೆಲ್ಲೂ ಪ್ರೋಕ್ಷಿಸಿದೆ ನೀ
ಹಲವಾರು ರೂಪಿನಲಿ ಮಾರೊಡಲನ್ನಾಂತು
ಎಲ್ಲವನ್ನು ಎನಗಿತ್ತು ಬದುಕಿಸಿದೆ ನೀ
[soundcloud url="https://api.soundcloud.com/tracks/87050448" width="100%" height="166" iframe="true" /]
ಅಂತರಾತ್ಮ - ೪ (ತೆಲುಗು)
ನೀದೈನ ಲೋಕಮುತೊ ಋಣಮು ನಾದುಗಾ
ನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡು
ನೀದೈನ ದಯಮುಲೊ ಸುಖಮು ನಾದುಗಾ
ಒಕ್ಕಟಿಲೊ ರೆಂಡುನಿ | ರೆಂಡುಲೊ ಒಕ್ಕಟಿನಿ |
ಚೇರಿಂಚು ಸೃಷ್ಟಿನಿ ನುವ್ವು ಚೇಯಗಾ
ಅನ್ನಿಟಿಲೊ ಒಕಟಿನಿ | ಅಂದರುಲೊ ಒಕಡುನಿ |
ಚೂಪಿಸ್ತು ಮಾಯನಿ ತುಡಿಚಿಪೆಟ್ಟವುಗಾ
ನುವ್ವೇಗ ನಾಕಿಂತ ಸ್ಫೂರ್ತಿಲು ಇಚ್ಚಿನವಾಡು
ನೀದೈನ ಲೋಕಮುತೊ ಋಣಮು ನಾದುಗಾ
ನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡು
ನೀದೈನ ದಯಮುಲೊ ಸುಖಮು ನಾದುಗಾ
ಅಂತರಾತ್ಮ - ೩ (ತುಳು)
ಈ ಪೆದ್ದಿ ಲೋಕೊನು ಸುಗಿತ್ತೋನುವೆ
ಈಯತ್ತ ಬದ್‍ಕ್‍ಡ್ ಬೊಳುಪು ಕೊರ್‍ದಿನ ಗುರುವು
ನಿನ್ನವೊಂಜಿ ದಯೆಟ್ಟಿನಿಲ ಸುಖಿ ಯಾನ್‍ಗಾ
ಒಂಜೆತುಳಾ ರಡ್ಡ್‍ನ್ | ರಡ್ಡೆತುಳಾ ಒಂಜೆನ್ |
ಸೇರಾದ್ ಸೃಷ್ಟಿನ್ ಈ ಮಾಲ್ತಗಾ
ಈಯತ್ತ ಎಂಕಿನಿಲ ತೆಲಿಕೆ ನಲಿಕೆದ ತುಡರ್
ಬಾಳುವೆದ ಎದ್‍ಪುಲು ನಿನ್ನ ದಯೊಟೆಗಾ
ನಿನ್ನವೊಂಜಿ ಒಲುಮೆಡ್ ಮಾಂತ ಗೆಂದೆರೆ ಚಲೊನು
ಕೊರುದು ಕೈ ಪತ್ತ್‍ದ್ ನಡಪಾಯಗಾ
ಮಾಂತೈಟ್ ಒಂಜೆನ್ | ಮಾಂತೆರೆಡ ಒರಿಯೆನ್ |
ತೋಜಾದ್ ಮಾಯೊನ್ ಪೂಜಾದಗಾ
ಮೂಡಾಯಿ ಅಯ್ತೆ ಸಿರಿ ಮೂಡ್‍ದ್ ಕಂತುನ ಮುಟ್ಟ
ತುಡಿಟ್ ತುಡಿಪುನ ತಾಳ ಈಯತ್ತಗಾ
ಅಂತರಾತ್ಮ - ೨
ಬರಿದೊಂದು ಸ್ಪರ್ಶದಲಿ ಒಳಗಿರುವ ಎನ್ನನ್ನು
ಮುಟ್ಟಿ ಎಬ್ಬಿಸಿದವನು ನೀನಲ್ಲವೇ
ಬರಿದೊಂದು ದೃಷ್ಟಿಯಲಿ ಎದೆಯೊಳಿಹ ತಂತಿಗಳ
ಮೀಂಟಿ ತಡುಗಿಸಿದವನು ನೀನಲ್ಲವೇ
ನೋವು ನಲಿವಿನ ಬಾಳ್ವೆ ಹದವಾಗಿ ಬೆರೆಸಿಟ್ಟು
ಎನಗೆ ಊಡಿಸಿದವನು ನೀನಲ್ಲವೇ
ನಿನ್ನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ನಡೆಯಿಸಿದವನು ನೀನಲ್ಲವೇ
ಕ್ಷಣದೊಂದು ಮಾಯೆಯಲಿ ಹತ್ತು ಹಲ ಬಣ್ಣಗಳ
ಸಿಂಪರಿಸಿ ಮೆರೆದವನು ನೀನಲ್ಲವೇ
ಹಲವಾರು ರೂಪಿನಲಿ ಧರಿಸಿ ಮಾರೊಡಲುಗಳ
ಅಳವಿರದೆ ಇತ್ತವನು ನೀನಲ್ಲವೇ
ಅಂತರಾತ್ಮ
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ
ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ
ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ
ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ
ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...