ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮುಸಲ್ಮಾನರ ಸಂಪ್ರದಾಯದಲ್ಲಿ 'ಶಿರ್ಕ್' ಎಂಬ ಅಂಶವಿದೆ. ಇದು ಅಲ್ಲಾಹುವಿನ ಹೊರತಾದ ಅನ್ಯದೇವತಾರಾಧನೆಗಳನ್ನು ಪ್ರಾರ್ಥನೆಗಳಲ್ಲಿ ಸೇರಿಸಿಕೊಳ್ಳುವುದನ್ನು ಖಡಾಖಡಿ ನಿರಾಕರಿಸುವ ಅಂಶ. ಇದು ಇಸ್ಲಾಮಿಕ್ ಮತಾಚರಣೆಯೆಂಬ ವಿಚಾರ ವಿದಿತವೇ ಆಗಿದ್ದರೂ ಸಾರ್ವಜನಿಕ ಆಚರಣೆಗಳಲ್ಲಿ ಮಿತತ್ವವನ್ನು ರೂಢಿಸಿಕೊಂಡ ನಾಗರಿಕರು ಸರ್ವಸಾಮಾನ್ಯವಾಗಿ ನಮ್ಮ ಮುಂದಿರುವ ಮುಸಲ್ಮಾನರು. ಮಿತತ್ವವನ್ನು ರೂಢಿಸಿಕೊಳ್ಳಬಲ್ಲವರಾದ ನಟ ಮಮ್ಮುಟ್ಟಿಯೇ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸುತ್ತಾರೆ. (ಮಿತತ್ವವನ್ನು ರೂಢಿಸಿಕೊಂಡವರು ಸೆಲೆಬ್ರಿಟಿಗಳು ಮಾತ್ರ ಎನ್ನುವುದು ನನ್ನ ಉದ್ದೇಶವಾಗಿಲ್ಲ.) ಆದರೆ ಇಸ್ಲಾಮ್ ಮತಸ್ಥರೇ ಆದ ಇನ್ನು ಕೆಲವರು 'ಶಿರ್ಕ್' ಮುಂದಿಟ್ಟುಕೊಂಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಲು ನಿರಾಕರಿಸುತ್ತಾರೆ.
ಆ ಇನ್ನು ಕೆಲವರು ಯಾರು ಎಂದು ಗಮನಿಸುವುದಾದರೆ ಅವರು ತೀವ್ರ ಮತಧೋರಣೆಯನ್ನು ಹೊಂದಿರುವವರು. ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಖೇನ ತೀವ್ರ ಇಸ್ಲಾಮಿಕ್ ಪ್ರಚಾರವನ್ನು ಕೈಗೊಳ್ಳುತ್ತಿರುವವರು ಇವರೇ. ಇವರ ಅನುಯಾಯಿಗಳು ಕಂಡಕಂಡಲ್ಲಿ ದಾವಾ ಕಾರ್ಯಕ್ರಮ ನಡೆಯಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಸ್ಲಾಮಿಗೆ ಅನುಯಾಯಿಗಳನ್ನು ಸೇರಿಸಿಕೊಳ್ಳಬೇಕು ಎನ್ನುವವರು ಇವರು. ಅಲ್ಲಾಹುವಿನ ಹೊರತಾದ ಅನ್ಯದೇವತೆಗಳನ್ನು ಆರಾಧಿಸಿದರೆ ನರಕದ ಬೆಂಕಿಯಿಂದ ವಿಮುಕ್ತಿಯಿಲ್ಲ ಎಂದು ತೀವ್ರವಾಗಿ ನಂಬಿದವರು. "ಲವ್ ಜಿಹಾದ್" ಸೇರಿದಂತೆ ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎಂದು ಸಾರುವುದು ತಪ್ಪು. ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎನ್ನುವಾಗ ತಮ್ಮ ವೈಯಕ್ತಿಕ ಆಚರಣೆಗಳನ್ನು "ಜಿಹಾದ್" ಎಂದು ಬಗೆದು ಅತೀವ ಶ್ರದ್ಧೆಯಿಂದ ತಮ್ಮ ಮತಾಚರಣೆಗಳನ್ನು ಅನುಸರಿಸುವ ಮಿತತ್ವವಾದಿಗಳಿಗೆ ಘಾಸಿಯಾಗುವುದು ಸಹಜವೇ ಆಗಿದೆ. ಹೀಗಾಗಿ "ಲವ್ ಜಿಹಾದ್" ಎಂಬ ಪದಪ್ರಯೋಗ ತಪ್ಪಾಗಿದೆಯೆಂದು ಮನಗಾಣಬೇಕು.
ಮುಸಲ್ಮಾನ ಸಾಹಿತಿಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಸಂದರ್ಭವಿದ್ದರೆ ಅವರ ಮತಾಚಾರ ಪೂರ್ವಕವಾದ ಅಂಶಗಳಿಗೆ ಪೂರಕವೋ ಬಾಧಕವೋ ಆಗಿರಬಹುದಾದ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟು ಅವರ ಸಮ್ಮತವಿದೆಯೆಂದು ದೃಢೀಕರಿಸಿದ ನಂತರವೇ ಅವರನ್ನು ಔಪಚಾರಿಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸೂಕ್ತ.
ತಮ್ಮ ಸಂಪ್ರದಾಯಗಳನ್ನು ಟೀಕಿಸಿಯೋ ದೂರುತ್ತಲೋ ಬರೆಯುವ ಮುಸಲ್ಮಾನ ಸಾಹಿತಿಗಳು ತೀವ್ರ ಮತಧೋರಣೆಯನ್ನು ಹೊಂದಿರುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಆದರೂ ಅವರ ಸಾಹಿತ್ಯದಲ್ಲಿ; ತಮ್ಮಲ್ಲಿ ಇರಬಹುದಾದ ಆಚರಣೆಗಳಲ್ಲಿ ಅನಪೇಕ್ಷಣೀಯವೆಂದು ಅವರಿಗೆ ತೋರಿದ ವಿಷಯಗಳನ್ನು ಟೀಕಿಸುತ್ತಲೋ ಪ್ರತಿರೋಧಿಸುತ್ತಲೋ ಬರೆಯುವಾಗಲೂ ಇಂದಿನ ಕಾಲದಲ್ಲಿ ಜಾರಿಗೆ ಬಂದಿರುವ ತೀವ್ರ ಮತಧೋರಣೆಯನ್ನು ನಿರಾಕರಿಸುವುದು ಕಂಡುಬಾರದಿರುವುದೂ ವಾಸ್ತವವೇ. ಉದಾಹರಣೆಗೆ, ಕಾಸರಗೋಡಿನ ತಳಂಗರೆ ಮಸೀದಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೆಂದೂ ಅದು ಪ್ರವಾದಿಗಳ ಕಾಲದಲ್ಲಿ ಕಟ್ಟಲ್ಪಟ್ಟ ಮಸೀದಿಯೆಂದೂ ಎಡಪಂಥೀಯರಾದ ಸಾರಾ ಅಬೂಬಕ್ಕರ್ ಬರೆದಿದ್ದಾರೆ.
~ಕೃಷ್ಣಪ್ರಕಾಶ ಬೊಳುಂಬು
#ಶಿರ್ಕ್
No comments:
Post a Comment