ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
"ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ ಭಾಷೆ. ಆಡುವ ಭಾಷೆಗೂ ಬರೆಯುವ ಭಾಷೆಗೂ ಬಹಳ ವ್ಯತ್ಯಾಸವಿದೆ."ಎನ್ನುತ್ತಾರೆ.
ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎನ್ನುವುದಾದರೆ ಮಲೆಯಾಳ, ಉರ್ದು ಮೊದಲಾದ ಭಾಷೆಗಳು ಕೃತಕ ಭಾಷೆಗಳೆಂದೇ ಆಗುತ್ತದೆ. ಇಂದಿನ ಮಲೆಯಾಳ ಭಾಷೆಯ ವಿಷಯಕ್ಕೆ ಬರುವುದಾದರೆ, ಆಧುನಿಕ ಮಲೆಯಾಳ ಭಾಷೆ ನಿಂತಿರುವುದು ಕೇರಳ ಪಾಣಿನೀಯದ ಆಧಾರದಲ್ಲಿ ಮತ್ತು ಕೇರಳ ಪಾಣಿನೀಯ ಅತ್ಯಂತ ಕೃತಕವಾದುದು ಮತ್ತು ಸಂಸ್ಕೃತ ಮತ್ತು ಪ್ರಾಕೃತ ವ್ಯಾಕರಣಗಳನ್ನು ಆಧರಿಸಿ ಬರೆದುದಾಗಿದೆ. ಕೇರಳ ಪಾಣಿನೀಯದ ರಚನೆಯಲ್ಲಿ ತೌಲನಿಕವಾದ ದಾಕ್ಷಿಣಾತ್ಯ ವ್ಯಾಕರಣವನ್ನೂ ಗಮನದಲ್ಲಿ ಇರಿಸಿಕೊಳ್ಳಲಾಗಿದೆಯೆಂದು ಹತ್ತೊಂಬನೆಯ ಶತಮಾನದ ಕೊನೆಯ ಭಾಗದಲ್ಲಿ ಆ ಗ್ರಂಥವನ್ನು ರಚಿಸಿದ ರಚನಕಾರರೇ ಹೇಳಿದ್ದಾರೆ. ಹಾಗಾಗಿ ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎಂಬ ಮಾನದಂಡವನ್ನು ಇಟ್ಟುಕೊಂಡರೆ ಇಂದಿನ ಮಲೆಯಾಳ ಭಾಷೆಯನ್ನು ಕತೃಕ ಭಾಷೆಯೆಂದೇ ಕರೆಯಬೇಕು.
ಖಡಿಬೋಲಿ ವ್ಯಾಕರಣದ ಕಟ್ಟುಗೆಯಲ್ಲಿ ಅರೇಬಿಕ್ ಮತ್ತು ಪಾರಸಿ ಭಾಷೆಯ ಮೇಲ್ಮೈ ಹೊದೆಯಿಸಿದ; ಭಾಷೆಯಲ್ಲದ ಭಾಷೆ ಉರ್ದು. ಖಡಿಬೋಲಿ ವ್ಯಾಕರಣ ಎನ್ನುವಂಥದ್ದು ಸಂಸ್ಕೃತ ಮೂಲದ ಇಂಡಿಕ್ ವ್ಯಾಕರಣ ವ್ಯವಸ್ಥೆಯಲ್ಲಿ ನೆಲೆಗೊಂಡದ್ದು ಮತ್ತು ಅದು ಪ್ರಾಕೃತ ಮೂಲವನ್ನು ಹೊಂದಿದೆ. ಉರ್ದು ಭಾಷೆ ಸಹಜವಾಗಿ ಬೆಳೆದುಬಂದ ಭಾಷೆ ಎನ್ನುವವರು ಇಂಡಿಕ್ ವ್ಯಾಕರಣ ವ್ಯವಸ್ಥೆಯನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ.
ಮುಂದೆ ಹೋಗಿ"ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಮಾತೃಭಾಷೆ ಆಗಿ ಬಳಸುವ ಜನಾಂಗಗಳು ಇವೆ"ಎನ್ನುತ್ತಾರೆ.
ಇದು ವಾಸ್ತವಕ್ಕೆ ವಿರುದ್ಧವಾದುದು. ಆಭಿಜಾತ್ಯ ಗ್ರೀಕ್ ಇಂದು ಬಳಕೆಯಲ್ಲಿ ಇಲ್ಲ ಮತ್ತು ಇಂದು ಬಳಕೆಯಲ್ಲಿರುವ ಆಧುನಿಕ ಗ್ರೀಕ್ ಭಾಷೆಗೂ ಪರಸ್ಪರ ಸಾಂಗತ್ಯವಿಲ್ಲ. ಪ್ರಾಚೀನ ಗ್ರೀಕಿನಲ್ಲಿ ಹೇಳಿದ ಹೇಳಿಕೆ ಅರ್ಥವಾಗಬೇಕೆಂದಿದ್ದರೆ ಆಧುನಿಕ ಗ್ರೀಕ್ ಮಾತನಾಡುವವನು ಪ್ರಾಚೀನ ಗ್ರೀಕ್ ಭಾಷೆಯನ್ನು ಪ್ರತ್ಯೇಕವಾಗಿ ಕಲಿಯಬೇಕು. ಹಾಗೆಂದರೆ ಆಧುನಿಕ ಹಿಂದಿ ಭಾಷೆಗೂ ಸಂಸ್ಕೃತಕ್ಕೂ ಇರುವ ಅಂತರದಷ್ಟೇ ಅಗಾಧವಾದ ಅಂತರ ಪ್ರಾಚೀನ ಗ್ರೀಕ್ ಭಾಷೆಗೂ ಆಧುನಿಕ ಗ್ರೀಕ್ ಭಾಷೆಗೂ ನಡುವೆ ಇದ್ದುಕೊಂಡಿದೆ ಎನ್ನುವಾಗ ಪ್ರಾಚೀನ ಗ್ರೀಕ್ ಇಂದಿಗೂ ಬಳಕೆಯಲ್ಲಿದೆ ಎನ್ನುವುದು ಅಸತ್ಯವೆನಿಸುತ್ತದೆ.
ಸಂಸ್ಕೃತ ಯಾರಿಗೂ ಮಾತೃಭಾಷೆ ಅಲ್ಲವೇ? ೨೦೧೧ರ ಜನಗಣತಿಯಲ್ಲಿ ೧೪,೧೩೫ ಜನರು ಸಂಸ್ಕೃತವನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದ್ದಾರೆ. ೨೦೧೮ರ ಹೊತ್ತಿಗೆ ಈ ಸಂಖ್ಯೆ ೨೪,೮೨೧ ಆಗಿದೆ. ಪೂರಕ ಮಾಹಿತಿಗಳನ್ನೂ ಗಮನಿಸಬಹುದು. (ಮಾಹಿತಿಯಲ್ಲಿ ಉದ್ಧರಿಸಲ್ಪಟ್ಟ ವಾರ್ತಾ ಲೇಖನಗಳು ನೆಗೆಟಿವ್ ಆಗಿದ್ದರೂ ವಿಷಯ ಹೂರಣವನ್ನು ಗ್ರಹಿಸಲಿಕ್ಕೆ ಇದು ಸಾಲುತ್ತದೆ.) ೧
ಸಂಸ್ಕೃತ ಸಾರ್ವತ್ರಿಕ ಪ್ರಯೋಜನಕ್ಕೆ ಒದಗಬಲ್ಲುದು ಮತ್ತು ಅದು ಸನಾತನ ಧಾರ್ಮಿಕ ವ್ಯವಸ್ಥೆಯನ್ನು ಮೀರಿಯೂ ಅದು ನೆಲೆಗೊಂಡಿದೆ. ಸಂಸ್ಕೃತಕ್ಕೆ ಸಾವಿಲ್ಲ, ಸಂಸ್ಕೃತಕ್ಕೆ ಮಿತಿಯೂ ಇಲ್ಲ. ಮತಕ್ಕೆ ಸೀಮಿತವಾದ ಭಾಷೆ ಮತ ಇರುವಷ್ಟು ದಿನ ಇರಬಲ್ಲುದು.
ಉಲ್ಲೇಖಗಳು
೧. https://www.cnbctv18.com/india/only-24821-people-in-india-have-sanskrit-as-mother-tongue-govt-data-14819891.htm
#ಸಂಸ್ಕೃತ