ಕಪಿಲವಸ್ತು
ಅದೊಂದು ಪ್ರಶಾಂತ ಸುಂದರವಾದ ನಗರ. ಅಲ್ಲಿ ಒಂದಾನೊಂದು ಕಾಲದಲ್ಲಿ ಮಹಾ ತಪಸ್ವಿ ಕಪಿಲ ವಾಸಿಸುತ್ತಿದ್ದನು. ಆಕಾಶದ ಭಾಗವೊಂದನ್ನು ಕೆತ್ತಿ ಅದನ್ನು ನಿರ್ಮಿಸಲಾಗಿದೆಯೆಂಬಂತೆ ಕಂಡುಬರುತ್ತಿತ್ತು. ನಗರವನ್ನು ಸುತ್ತುವರಿದಿದ್ದ ಅನೇಕ ಕಟ್ಟಡಗಳ ಗೋಡೆಗಳು ಬೆಳಕಿನ ಪುಂಜಗಳಂತೆ ಕಂಗೊಳಿಸುತ್ತಿದ್ದುವು. ಮನೆಗಳು ಮತ್ತು ಉದ್ಯಾನಗಳು ದೈವಿಕ ಕಳೆಗಳನ್ನು ಹೊರಹೊಮ್ಮಿಸುತ್ತಿದ್ದುವು. ಎಲ್ಲೆಡೆ ಅಮೂಲ್ಯವಾದ ಮುತ್ತುರತ್ನಗಳ ಹೊಳಪು ನೋಡುಗರ ಮನಸೆಳೆಯುತ್ತಿದ್ದುವು. ರಾತ್ರಿಯ ಬೆಳದಿಂಗಳಿನಲ್ಲಿ ನಗರದ ಗೋಪುರಗಳು ಸರೋವರದ ನಡುವಣ ನೈದಿಲೆ ಹೂವುಗಳಂದದಲ್ಲಿ ಮೆರೆಯುತ್ತಿದ್ದುವು. ಹಗಲಿನ ಹೊತ್ತು ಮಹಡಿಗಳು ಚಿನ್ನದ ಕಾಂತಿಯ ಸೂರ್ಯನ ಬೆಳಕು ಸೋಕಿದಾಗ ಆ ನಗರವು ಕಮಲದ ನದಿಯಂತೆ ರಮಣೀಯವಾಗಿದ್ದಿತು.
ರಾಜ ಶುದ್ಧೋದನ ಕಪಿಲವಸ್ತುವಿನ ರಾಜ. ಅವನು ಅದರ ಅತ್ಯಂತ ಪ್ರಕಾಶಮಾನವಾದ ಆಭರಣವೂ ಆಗಿ ಮೆರೆಯುತ್ತಿದ್ದನು. ಅವನು ಅತ್ಯಂತ ದಯಾವಂತ, ಉದಾರ, ವಿನಮ್ರ ಮತ್ತು ನ್ಯಾಯಪರನಾಗಿದ್ದವನು. ಅವನು ತನ್ನ ಭೀಕರ ಶತ್ರುಗಳನ್ನು ಹಿಂಬಾಲಿಸಿ ಹೊಡೆದ ಧೈರ್ಯಶಾಲಿ. ಇಂದ್ರನ ವಜ್ರಾಯುಧದ ಆಘಾತಕ್ಕೆ ನಲುಗಿದ ಅಸುರರ ಪಡೆಯಂತೆ ಅವರು ಅವನೊಂದಿಗೆ ಸೋತು ನಿರ್ವಿಣ್ಣರಾದರು. ಸೂರ್ಯನ ತೀಕ್ಷ್ಣ ಕಿರಣಗಳಿಂದ ಕತ್ತಲೆ ಕರಗಿದಂತೆ ದುಷ್ಟರು ಅವನ ಪರಾಕ್ರಮದ ಮುಂದೆ ಸೋತು ಶರಣಾದರು. ಅವನು ಲೋಕಕ್ಕೆ ಬೆಳಕನ್ನು ತಂದನು ಮತ್ತು ಅವನು ತನ್ನ ಆಪ್ತರಾದವರಿಗೆ ನಿಜವಾದ ಮಾರ್ಗವನ್ನು ತೋರಿಸಿದನು. ಅವನ ವಿವೇಕ ಮತ್ತು ಪ್ರಜ್ಞಾವಂತಿಕೆ ಅವನಿಗೆ ಅನೇಕ ಧೈರ್ಯಶಾಲಿಗಳೂ ವಿವೇಚನಾಶೀಲರೂ ಆದ ಸ್ನೇಹಿತರನ್ನು ಗಳಿಸಿಕೊಟ್ಟಿತು. ನಕ್ಷತ್ರಗಳ ಬೆಳಕು ಚಂದ್ರನ ಪ್ರಕಾಶವನ್ನು ತೀವ್ರಗೊಳಿಸಿದಂತೆ ಅವರ ತೇಜಸ್ಸು ಅವನ ವೈಭವವನ್ನು ಹೆಚ್ಚಿಸಿತು. ( ಅತ್ಯಂತ ಪ್ರಭಾಯುತನಾದ ನಕ್ಷತ್ರಕ್ಕೆ ಸೂರ್ಯನೆಂದು ಹೆಸರು)
#ಕಪಿಲವಸ್ತು, #ಶುದ್ಧೋದನ
No comments:
Post a Comment