Saturday, August 16, 2025

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ


"ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ ಭಾಷೆ. ಆಡುವ ಭಾಷೆಗೂ ಬರೆಯುವ ಭಾಷೆಗೂ ಬಹಳ ವ್ಯತ್ಯಾಸವಿದೆ."

ಎನ್ನುತ್ತಾರೆ.



ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎನ್ನುವುದಾದರೆ ಮಲೆಯಾಳ, ಉರ್ದು ಮೊದಲಾದ ಭಾಷೆಗಳು ಕೃತಕ ಭಾಷೆಗಳೆಂದೇ ಆಗುತ್ತದೆ. ಇಂದಿನ ಮಲೆಯಾಳ ಭಾಷೆಯ ವಿಷಯಕ್ಕೆ ಬರುವುದಾದರೆ, ಆಧುನಿಕ ಮಲೆಯಾಳ ಭಾಷೆ ನಿಂತಿರುವುದು ಕೇರಳ ಪಾಣಿನೀಯದ ಆಧಾರದಲ್ಲಿ ಮತ್ತು ಕೇರಳ ಪಾಣಿನೀಯ ಅತ್ಯಂತ ಕೃತಕವಾದುದು ಮತ್ತು ಸಂಸ್ಕೃತ ಮತ್ತು ಪ್ರಾಕೃತ ವ್ಯಾಕರಣಗಳನ್ನು ಆಧರಿಸಿ ಬರೆದುದಾಗಿದೆ. ಕೇರಳ ಪಾಣಿನೀಯದ ರಚನೆಯಲ್ಲಿ ತೌಲನಿಕವಾದ ದಾಕ್ಷಿಣಾತ್ಯ ವ್ಯಾಕರಣವನ್ನೂ ಗಮನದಲ್ಲಿ ಇರಿಸಿಕೊಳ್ಳಲಾಗಿದೆಯೆಂದು ಹತ್ತೊಂಬನೆಯ ಶತಮಾನದ ಕೊನೆಯ ಭಾಗದಲ್ಲಿ ಆ ಗ್ರಂಥವನ್ನು ರಚಿಸಿದ ರಚನಕಾರರೇ ಹೇಳಿದ್ದಾರೆ. ಹಾಗಾಗಿ ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎಂಬ ಮಾನದಂಡವನ್ನು ಇಟ್ಟುಕೊಂಡರೆ ಇಂದಿನ ಮಲೆಯಾಳ ಭಾಷೆಯನ್ನು ಕತೃಕ ಭಾಷೆಯೆಂದೇ ಕರೆಯಬೇಕು.


ಖಡಿಬೋಲಿ ವ್ಯಾಕರಣದ ಕಟ್ಟುಗೆಯಲ್ಲಿ ಅರೇಬಿಕ್ ಮತ್ತು ಪಾರಸಿ ಭಾಷೆಯ ಮೇಲ್ಮೈ ಹೊದೆಯಿಸಿದ; ಭಾಷೆಯಲ್ಲದ ಭಾಷೆ ಉರ್ದು. ಖಡಿಬೋಲಿ ವ್ಯಾಕರಣ ಎನ್ನುವಂಥದ್ದು ಸಂಸ್ಕೃತ ಮೂಲದ ಇಂಡಿಕ್ ವ್ಯಾಕರಣ ವ್ಯವಸ್ಥೆಯಲ್ಲಿ ನೆಲೆಗೊಂಡದ್ದು ಮತ್ತು ಅದು ಪ್ರಾಕೃತ ಮೂಲವನ್ನು ಹೊಂದಿದೆ. ಉರ್ದು ಭಾಷೆ ಸಹಜವಾಗಿ ಬೆಳೆದುಬಂದ ಭಾಷೆ ಎನ್ನುವವರು ಇಂಡಿಕ್ ವ್ಯಾಕರಣ ವ್ಯವಸ್ಥೆಯನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. 

ಮುಂದೆ ಹೋಗಿ 
"ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಮಾತೃಭಾಷೆ ಆಗಿ ಬಳಸುವ ಜನಾಂಗಗಳು ಇವೆ"
ಎನ್ನುತ್ತಾರೆ.


 ಇದು ವಾಸ್ತವಕ್ಕೆ ವಿರುದ್ಧವಾದುದು. ಆಭಿಜಾತ್ಯ ಗ್ರೀಕ್ ಇಂದು ಬಳಕೆಯಲ್ಲಿ ಇಲ್ಲ ಮತ್ತು ಇಂದು ಬಳಕೆಯಲ್ಲಿರುವ ಆಧುನಿಕ ಗ್ರೀಕ್ ಭಾಷೆಗೂ ಪರಸ್ಪರ ಸಾಂಗತ್ಯವಿಲ್ಲ. ಪ್ರಾಚೀನ ಗ್ರೀಕಿನಲ್ಲಿ ಹೇಳಿದ ಹೇಳಿಕೆ ಅರ್ಥವಾಗಬೇಕೆಂದಿದ್ದರೆ ಆಧುನಿಕ ಗ್ರೀಕ್ ಮಾತನಾಡುವವನು ಪ್ರಾಚೀನ ಗ್ರೀಕ್ ಭಾಷೆಯನ್ನು ಪ್ರತ್ಯೇಕವಾಗಿ ಕಲಿಯಬೇಕು. ಹಾಗೆಂದರೆ ಆಧುನಿಕ ಹಿಂದಿ ಭಾಷೆಗೂ ಸಂಸ್ಕೃತಕ್ಕೂ ಇರುವ ಅಂತರದಷ್ಟೇ ಅಗಾಧವಾದ ಅಂತರ ಪ್ರಾಚೀನ ಗ್ರೀಕ್ ಭಾಷೆಗೂ ಆಧುನಿಕ ಗ್ರೀಕ್ ಭಾಷೆಗೂ ನಡುವೆ ಇದ್ದುಕೊಂಡಿದೆ ಎನ್ನುವಾಗ ಪ್ರಾಚೀನ ಗ್ರೀಕ್ ಇಂದಿಗೂ ಬಳಕೆಯಲ್ಲಿದೆ ಎನ್ನುವುದು ಅಸತ್ಯವೆನಿಸುತ್ತದೆ.

ಸಂಸ್ಕೃತ ಯಾರಿಗೂ ಮಾತೃಭಾಷೆ ಅಲ್ಲವೇ? ೨೦೧೧ರ ಜನಗಣತಿಯಲ್ಲಿ ೧೪,೧೩೫ ಜನರು ಸಂಸ್ಕೃತವನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದ್ದಾರೆ. ೨೦೧೮ರ ಹೊತ್ತಿಗೆ ಈ ಸಂಖ್ಯೆ ೨೪,೮೨೧ ಆಗಿದೆ. ಪೂರಕ ಮಾಹಿತಿಗಳನ್ನೂ ಗಮನಿಸಬಹುದು. (ಮಾಹಿತಿಯಲ್ಲಿ ಉದ್ಧರಿಸಲ್ಪಟ್ಟ ವಾರ್ತಾ ಲೇಖನಗಳು ನೆಗೆಟಿವ್ ಆಗಿದ್ದರೂ ವಿಷಯ ಹೂರಣವನ್ನು ಗ್ರಹಿಸಲಿಕ್ಕೆ ಇದು ಸಾಲುತ್ತದೆ.) ೧


ಸಂಸ್ಕೃತ ಸಾರ್ವತ್ರಿಕ ಪ್ರಯೋಜನಕ್ಕೆ ಒದಗಬಲ್ಲುದು ಮತ್ತು ಅದು ಸನಾತನ ಧಾರ್ಮಿಕ ವ್ಯವಸ್ಥೆಯನ್ನು ಮೀರಿಯೂ ಅದು ನೆಲೆಗೊಂಡಿದೆ. ಸಂಸ್ಕೃತಕ್ಕೆ ಸಾವಿಲ್ಲ, ಸಂಸ್ಕೃತಕ್ಕೆ ಮಿತಿಯೂ ಇಲ್ಲ. ಮತಕ್ಕೆ ಸೀಮಿತವಾದ ಭಾಷೆ ಮತ ಇರುವಷ್ಟು ದಿನ ಇರಬಲ್ಲುದು. 


ಉಲ್ಲೇಖಗಳು

 ೧. https://www.cnbctv18.com/india/only-24821-people-in-india-have-sanskrit-as-mother-tongue-govt-data-14819891.htm
 

 ಕೃಷ್ಣಪ್ರಕಾಶ ಬೊಳುಂಬು

 #ಸಂಸ್ಕೃತ 

Friday, August 15, 2025

ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?

 ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?



ರಾಹುಲ್ ಗಾಂಧಿ ನಮ್ಮ ದೇಶದ ಮಿಲಿಟರಿಯನ್ನು ನಂಬದಿದ್ದರೂ ಚೀನಾ, ಪಾಕಿಸ್ತಾನ ಮತ್ತು ಅಮೇರಿಕವನ್ನು ನಂಬುತ್ತಾನೆ. ಹಾಗೆಯೇ ರಾಹುಲ್ ಗಾಂಧಿ ನ್ಯಾಯಾಲಯಗಳನ್ನು ನಂಬದಿದ್ದರೂ ತನಗೆ ಅಗತ್ಯವಿದ್ದರೆ ಮಾತ್ರ ನ್ಯಾಯಾಲಯಗಳ ಆದೇಶಗಳನ್ನು ಎತ್ತಿ ಹಿಡಿಯುತ್ತಾನೆ. 

ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ನಂಬಿಕೆ ಕಳೆದುಕೊಂಡಿದ್ದಾನೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಮತ್ತು ಅದನ್ನು ಮಾಡಿದ್ದು ಬಿಜೆಪಿ ಎಂಬ ಹೇಳಿಕೆಯೂ ಇದರ ಒಂದು ಭಾಗವಾಗಿತ್ತು.

ಸುಳ್ಳು ಮಾಹಿತಿಯನ್ನು ತರುವ ಮೂಲಕ ತನಗೆ ತಾನೇ ಕೊಡಲಿಯೇಟು ಕೊಟ್ಟುಕೊಂಡ ಪರಿಸ್ಥಿತಿ ಈಗ ರಾಹುಲ್ ಗಾಂಧಿಯದ್ದಾಗಿದೆ. ಇಷ್ಟೇ ಸಾಲದೆಂಬಂತೆ, ತನ್ನ ಸ್ವಂತ ಕ್ಷೇತ್ರ ರಾಯ್ ಬರೇಲಿ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಅವರ ವಯನಾಡ್ ಕ್ಷೇತ್ರ ಸೇರಿದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ ಎಂದು ಗೋಳಿಡುವ ಮೂಲಕ ಬಿಜೆಪಿಯನ್ನು ಎದುರಿಸಲು ಹವಣಿಸುತ್ತಿದ್ದಾನೆ. 

ರಾಹುಲ್ ಗಾಂಧಿ ಸ್ಫೋಟಿಸಿದ ಅಣು ಬಾಂಬ್ ಬಿಜೆಪಿಗೆ ಇನ್ನೊಂದು ಅವಕಾಶವನ್ನು ತೆರೆದುಕೊಟ್ಟಿರುವುದು ಇಂದಿನ ವಾಸ್ತವ.

NRC ಅಥವಾ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೆ ತರುವ ಮೂಲಕ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಕೂಡಲೆ ಗುರುತಿಸಿ ಅವರಿಗೆ ದಾರಿತೋರಿಸುವುದು ಜಾಗರೂಕ ಸರಕಾರದ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲಿಕ್ಕೆ ಸಂವಿಧಾನದ ಪ್ರಕಾರ ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (S.I.R) ನಡೆಸುವ ಅವಕಾಶ ಇದೀಗ ಒದಗಿಬಂದಿದೆ. ಅದಾದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಮತಗಣನೆ ಮಾಡಿ ನಾಗರಿಕ ನೋಂದಣಿಯನ್ನು ರಚಿಸಲು ಅವಕಾಶಗಳಿವೆ. 

 ಕೃಷ್ಣಪ್ರಕಾಶ ಬೊಳುಂಬು

# ರಾಹುಲ್ ಗಾಂಧಿ


Wednesday, August 13, 2025

ಕಪಿಲವಸ್ತು

 ಕಪಿಲವಸ್ತು

ಅದೊಂದು ಪ್ರಶಾಂತ ಸುಂದರವಾದ ನಗರ. ಅಲ್ಲಿ ಒಂದಾನೊಂದು ಕಾಲದಲ್ಲಿ ಮಹಾ ತಪಸ್ವಿ ಕಪಿಲ ವಾಸಿಸುತ್ತಿದ್ದನು. ಆಕಾಶದ ಭಾಗವೊಂದನ್ನು ಕೆತ್ತಿ ಅದನ್ನು ನಿರ್ಮಿಸಲಾಗಿದೆಯೆಂಬಂತೆ ಕಂಡುಬರುತ್ತಿತ್ತು. ನಗರವನ್ನು ಸುತ್ತುವರಿದಿದ್ದ ಅನೇಕ ಕಟ್ಟಡಗಳ ಗೋಡೆಗಳು ಬೆಳಕಿನ ಪುಂಜಗಳಂತೆ ಕಂಗೊಳಿಸುತ್ತಿದ್ದುವು. ಮನೆಗಳು ಮತ್ತು ಉದ್ಯಾನಗಳು ದೈವಿಕ ಕಳೆಗಳನ್ನು ಹೊರಹೊಮ್ಮಿಸುತ್ತಿದ್ದುವು. ಎಲ್ಲೆಡೆ ಅಮೂಲ್ಯವಾದ ಮುತ್ತುರತ್ನಗಳ ಹೊಳಪು ನೋಡುಗರ ಮನಸೆಳೆಯುತ್ತಿದ್ದುವು. ರಾತ್ರಿಯ ಬೆಳದಿಂಗಳಿನಲ್ಲಿ ನಗರದ ಗೋಪುರಗಳು ಸರೋವರದ ನಡುವಣ ನೈದಿಲೆ ಹೂವುಗಳಂದದಲ್ಲಿ ಮೆರೆಯುತ್ತಿದ್ದುವು. ಹಗಲಿನ ಹೊತ್ತು ಮಹಡಿಗಳು ಚಿನ್ನದ ಕಾಂತಿಯ ಸೂರ್ಯನ ಬೆಳಕು ಸೋಕಿದಾಗ ಆ ನಗರವು ಕಮಲದ ನದಿಯಂತೆ ರಮಣೀಯವಾಗಿದ್ದಿತು.


ರಾಜ ಶುದ್ಧೋದನ ಕಪಿಲವಸ್ತುವಿನ ರಾಜ. ಅವನು ಅದರ ಅತ್ಯಂತ ಪ್ರಕಾಶಮಾನವಾದ ಆಭರಣವೂ ಆಗಿ ಮೆರೆಯುತ್ತಿದ್ದನು. ಅವನು ಅತ್ಯಂತ ದಯಾವಂತ, ಉದಾರ, ವಿನಮ್ರ ಮತ್ತು ನ್ಯಾಯಪರನಾಗಿದ್ದವನು. ಅವನು ತನ್ನ ಭೀಕರ ಶತ್ರುಗಳನ್ನು ಹಿಂಬಾಲಿಸಿ ಹೊಡೆದ ಧೈರ್ಯಶಾಲಿ. ಇಂದ್ರನ ವಜ್ರಾಯುಧದ ಆಘಾತಕ್ಕೆ ನಲುಗಿದ ಅಸುರರ ಪಡೆಯಂತೆ ಅವರು ಅವನೊಂದಿಗೆ ಸೋತು ನಿರ್ವಿಣ್ಣರಾದರು. ಸೂರ್ಯನ ತೀಕ್ಷ್ಣ ಕಿರಣಗಳಿಂದ ಕತ್ತಲೆ ಕರಗಿದಂತೆ ದುಷ್ಟರು ಅವನ ಪರಾಕ್ರಮದ ಮುಂದೆ ಸೋತು ಶರಣಾದರು. ಅವನು ಲೋಕಕ್ಕೆ ಬೆಳಕನ್ನು ತಂದನು ಮತ್ತು ಅವನು ತನ್ನ ಆಪ್ತರಾದವರಿಗೆ ನಿಜವಾದ ಮಾರ್ಗವನ್ನು ತೋರಿಸಿದನು. ಅವನ ವಿವೇಕ ಮತ್ತು ಪ್ರಜ್ಞಾವಂತಿಕೆ ಅವನಿಗೆ ಅನೇಕ ಧೈರ್ಯಶಾಲಿಗಳೂ ವಿವೇಚನಾಶೀಲರೂ ಆದ ಸ್ನೇಹಿತರನ್ನು ಗಳಿಸಿಕೊಟ್ಟಿತು. ನಕ್ಷತ್ರಗಳ ಬೆಳಕು ಚಂದ್ರನ ಪ್ರಕಾಶವನ್ನು ತೀವ್ರಗೊಳಿಸಿದಂತೆ ಅವರ ತೇಜಸ್ಸು ಅವನ ವೈಭವವನ್ನು ಹೆಚ್ಚಿಸಿತು. ( ಅತ್ಯಂತ ಪ್ರಭಾಯುತನಾದ ನಕ್ಷತ್ರಕ್ಕೆ ಸೂರ್ಯನೆಂದು ಹೆಸರು)


 ಕೃಷ್ಣಪ್ರಕಾಶ ಬೊಳುಂಬು

#ಕಪಿಲವಸ್ತು, #ಶುದ್ಧೋದನ 

Saturday, August 2, 2025

ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ

 ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ





ಅಳಿಯ ಸಂತಾನ ಕಟ್ಟು ಭೂತಾಳ ಪಾಂಡ್ಯನಿಂದ ಆರಂಭವಾದುದಲ್ಲ. ಪ್ರಸಕ್ತ ಕಾಲಮಾನ 1441ರಿಂದ 1444ರವರೆಗೆ ತುಳುವವನ್ನಾಳಿದ ಕುಲಶೇಖರನು ಅಧಿಕಾರವನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಟ್ಟು ತನ್ನ ಅಲೂಪ ವಂಶದಲ್ಲಿ ಅಳಿಯ ಸಂತಾನ ಕಟ್ಟನ್ನು ಜಾರಿಗೆ ತಂದನು ಮತ್ತು ಪ್ರಸಕ್ತ ಕಾಲಮಾನ 1506ರಲ್ಲಿ ಕೆಳದಿಯ ರಾಜನಾಗಿದ್ದ ಚೌಡಪ್ಪ ನಾಯಕನು 'ಅಳಿಯ ಸಂತಾನ ಕಟ್ಟಿ'ಗೆ ಶಿಲಾಶಾಸನದ ಮುಖಾಂತರ ಮುದ್ರೆಯೊತ್ತಿದನು. ಹೀಗೆ ಸುಮಾರು ಹದಿಮೂರನೆಯ ಶತಮಾನದವರೆಗೆ ಬರಿಯ ಪದ್ಧತಿಯಾಗಿದ್ದ 'ಅಳಿಯ ಸಂತಾನ ಕಟ್ಟು' ಕ್ರಮೇಣ ರಾಜರುಗಳ ಮನ್ನಣೆಗೆ ಪಾತ್ರವಾಗಿ ಅಲೂಪ ರಾಜರುಗಳಿಂದ ಸ್ವೀಕರಿಸಲ್ಪಟ್ಟು ಕೆಳದಿಯ ರಾಜರ ಅಂಗೀಕಾರ ಮುದ್ರೆಯನ್ನೂ ಪಡೆದು  ಪ್ರಸಕ್ತ ಕಾಲಮಾನ ಹದಿನಾರನೆಯ ಶತಮಾನದಿಂದ ಅದೊಂದು ರಾಜಶಾಸನವಾಗಿ ಪರಿಣಮಿಸಿರುವುದು ಚರಿತ್ರೆಯ ಭಾಗ. 



 ಕೃಷ್ಣಪ್ರಕಾಶ ಬೊಳುಂಬು

#ಪಾದೂರು ಗುರುರಾಜ ಭಟ್ಟರು, #ತುಳುನಾಡು, #ಭೂತಾಳ ಪಾಂಡ್ಯ 

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...