Tuesday, October 6, 2026

ರಾಮಧ್ಯಾನ

 ರಾಮಧ್ಯಾನ


ಕವಿತೆ: ರಾಮಧ್ಯಾನ
ರಚನೆ: ಕೃಷ್ಣಪ್ರಕಾಶ ಬೊಳುಂಬು




ನೆನೆವುದು ಮೊದಲಿಗೆ ಸಿರಿರಾಮನನು,

ಕೂಡೆಯೆ ನೆನೆವುದು ಸೀತೆಯನು,

ನೆನೆವುದು ಕೂಡೆಯೆ ಹನುಮಂತನನು,

ಕೂಡೆಯೆ ಲಕ್ಷ್ಮಣ ಭರತ ಶತ್ರುಘ್ನರನು ||ಪ||


ಮಾಯೆಯೊಳಡಗಿದ, ಮಾಯೆಯ ಮೀರಿದ,

ಚಿಂತನೆಯನ್ನು ಮೀರಿದ ರೂಪವನು, ||ಅ.ಪ||


ಎದೆಯೊಳು ಶೋಭಿಪ ಸಿರಿವತ್ಸಾಂಕಿತ,

ಎಡಗೈಯೊಳು ರಾಜಿಪ ಕೋದಂಡ,

ಬಲ ಭುಜದೊಳು ಬಲುಬತ್ತಳಿಕೆಯನಾಂತು,

ನೆರೆದಂಬಿನಿಂ ತೊಳಗುವ ಮೂರ್ತಿಯನು ||೧||


ಲೋಕ ಸಮಸ್ತಕೆ ಆಸರೆಯೀವ,

ಒಳಗಣ ಆಸರ ನೀಗುವ ಅಡಿಗಳನು||೨||


ಇರುವಿಕೆಯನ್ನಿರಮಾಡುತ ಕಳೆಯುತ,

ಒರ್ಮೆಯನ್ನಿರಗೊಟ್ಟ ಅಡಿಗಳನು||೩||


ನಂಬಿದ ಭಕ್ತರ್ಗೆ ಅಭಯವನ್ನೀಯುತ,

ನಲವನ್ನಿರಗೊಟ್ಟ ಅಡಿಗಳನು ||೪||


ಒಳಗಣ ಆಸರು = ಆತ್ಮದ ದಾಹ, 

ಆಸರು = ದಾಹ, ಬಾಯಾರಿಕೆ 

ನಲವು = ಆತ್ಯಂತಿಕ ಆನಂದ 

ಇರುವಿಕೆಯನಿರಮಾಡುತ ಕಳೆಯುತ = ಸೃಷ್ಟಿ, ಸ್ಥಿತಿ  ಮತ್ತು ಲಯಗಳನ್ನು ಇರಮಾಡುತ್ತ, ಇರುವಂತೆ ಮಾಡುತ್ತ

ಒರ್ಮೆ = ಏಕತ್ವ, ಏಕಮೇವ ಅದ್ವಿತೀಯ 

ಸಿರಿವತ್ಸಾಂಕಿತ = ಶ್ರೀವತ್ಸ,

ನೆರೆದಂಬಿನಿಂ = ಬಾಣಗಳಿಂದ ತುಂಬಿಕೊಂಡ

ತೊಳಗುವ = ಹೊಳೆಯುವ

No comments:

Post a Comment

ರಾಮಧ್ಯಾನ

 ರಾಮಧ್ಯಾನ ಕವಿತೆ: ರಾಮಧ್ಯಾನ ರಚನೆ: ಕೃಷ್ಣಪ್ರಕಾಶ ಬೊಳುಂಬು ನೆನೆವುದು ಮೊದಲಿಗೆ ಸಿರಿರಾಮನನು, ಕೂಡೆಯೆ ನೆನೆವುದು ಸೀತೆಯನು, ನೆನೆವುದು ಕೂಡೆಯೆ ಹನುಮಂತನನು, ಕೂಡೆಯೆ ...