ರಾಮಧ್ಯಾನ
ಕವಿತೆ: ರಾಮಧ್ಯಾನ
ರಚನೆ: ಕೃಷ್ಣಪ್ರಕಾಶ ಬೊಳುಂಬು
ನೆನೆವುದು ಮೊದಲಿಗೆ ಸಿರಿರಾಮನನು,
ಕೂಡೆಯೆ ನೆನೆವುದು ಸೀತೆಯನು,
ನೆನೆವುದು ಕೂಡೆಯೆ ಹನುಮಂತನನು,
ಕೂಡೆಯೆ ಲಕ್ಷ್ಮಣ ಭರತ ಶತ್ರುಘ್ನರನು ||ಪ||
ಮಾಯೆಯೊಳಡಗಿದ, ಮಾಯೆಯ ಮೀರಿದ,
ಚಿಂತನೆಯನ್ನು ಮೀರಿದ ರೂಪವನು, ||ಅ.ಪ||
ಎದೆಯೊಳು ಶೋಭಿಪ ಸಿರಿವತ್ಸಾಂಕಿತ,
ಎಡಗೈಯೊಳು ರಾಜಿಪ ಕೋದಂಡ,
ಬಲ ಭುಜದೊಳು ಬಲುಬತ್ತಳಿಕೆಯನಾಂತು,
ನೆರೆದಂಬಿನಿಂ ತೊಳಗುವ ಮೂರ್ತಿಯನು ||೧||
ಲೋಕ ಸಮಸ್ತಕೆ ಆಸರೆಯೀವ,
ಒಳಗಣ ಆಸರ ನೀಗುವ ಅಡಿಗಳನು||೨||
ಇರುವಿಕೆಯನ್ನಿರಮಾಡುತ ಕಳೆಯುತ,
ಒರ್ಮೆಯನ್ನಿರಗೊಟ್ಟ ಅಡಿಗಳನು||೩||
ನಂಬಿದ ಭಕ್ತರ್ಗೆ ಅಭಯವನ್ನೀಯುತ,
ನಲವನ್ನಿರಗೊಟ್ಟ ಅಡಿಗಳನು ||೪||
ಒಳಗಣ ಆಸರು = ಆತ್ಮದ ದಾಹ,
ಆಸರು = ದಾಹ, ಬಾಯಾರಿಕೆ
ನಲವು = ಆತ್ಯಂತಿಕ ಆನಂದ
ಇರುವಿಕೆಯನಿರಮಾಡುತ ಕಳೆಯುತ = ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಇರಮಾಡುತ್ತ, ಇರುವಂತೆ ಮಾಡುತ್ತ
ಒರ್ಮೆ = ಏಕತ್ವ, ಏಕಮೇವ ಅದ್ವಿತೀಯ
ಸಿರಿವತ್ಸಾಂಕಿತ = ಶ್ರೀವತ್ಸ,
ನೆರೆದಂಬಿನಿಂ = ಬಾಣಗಳಿಂದ ತುಂಬಿಕೊಂಡ
ತೊಳಗುವ = ಹೊಳೆಯುವ
