Saturday, May 9, 2026

ಕಗ್ಗಮಾಲಿಕೆ - ೭: ದ್ವೈತದೊಳದ್ವೈತದ ಕಾಣ್ಕೆ

  

ಕಗ್ಗಮಾಲಿಕೆ - ೭: ದ್ವೈತದೊಳದ್ವೈತದ ಕಾಣ್ಕೆ

ಪೀಠಿಕೆ:

ಚಿಟಿಕೆ ಹೊಡೆಯಲು ಎರಡು ಬೆರಳುಗಳು ಬೇಕಾಗುವಂತೆ, ಲೋಕದ ವ್ಯವಹಾರದಲ್ಲಿ ದ್ವೈತವೇ ಇರುತ್ತದೆ. ಆದರೆ ಪರಮತತ್ತ್ವ ಏಕವೆಂದು ತಿಳಿಯಬೇಕು.


ಕಗ್ಗ:

ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ! ।

ಕರವೊಂದರಲಿ ವೇಣು, ಶಂಖವೊಂದರಲಿ! ॥

ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು ।

ಒರುವನಾಡುವುದೆಂತು? - ಮಂಕುತಿಮ್ಮ ॥



ವ್ಯಾಖ್ಯಾನ:

ಎರಡು ರೂಪಗಳಲ್ಲಿ ಒಂದು ಚೈತನ್ಯದ ಆವಿರ್ಭಾವವಾಗಿ ಶಾಂತಸ್ವರೂಪನಾದ ಶಿವ ಮತ್ತು ಭಯ ಹುಟ್ಟಿಸುವ ಪ್ರಳಯರುದ್ರ — ಇವೆರಡೂ ನಿಜವೇ ಆಗಿರಬಹುದು. ಒಂದು ಕೈಯಲ್ಲಿ ಕೊಳಲನ್ನು ಹಿಡಿದ ವೇಣುಗೋಪಾಲನೂ ಇನ್ನೊಂದು ಕೈಯಲ್ಲಿ ಶಂಖವನ್ನೂ ಹಿಡಿದ ಮಹಾವಿಷ್ಣುವೂ ಒಂದೇ ಚೈತನ್ಯದ ಎರಡು ಬಗೆಯ ಆವಿರ್ಭಾವಗಳು ಯಾಕಾಗಿರಬಾರದು! ಬೆರಳುಗಳು ಎರಡಾದರೂ ಇದ್ದರೆ ಚಿಟಿಕೆ ಹಾಕಲು ಸಾಧ್ಯವಾಗುತ್ತದೆ. ಒಂದೇ ರೂಪದಲ್ಲಿದ್ದರೆ ಎಲ್ಲವನ್ನೂ ಮಾಡಿ ಮುಗಿಸುವುದು ಸಾಧ್ಯವಾಗದೆಯೂ ಇರಬಹುದು — ಎಂಬುದು ಜಿಜ್ಞಾಸೆಯ ಭಾಗವೇ ಹೊರತು ಅಂತಿಮ ನಿಷ್ಕರ್ಷೆಯಲ್ಲವೆಂದು ತಿಳಿದುಕೊಳ್ಳಬೇಕು.  

ತಾತ್ಪರ್ಯ:

ಭೇದವು ರೂಪದಲ್ಲಿರುತ್ತದೆ ಆದರೆ ತತ್ತ್ವದಲ್ಲಿ ಭೇದವಿರುವುದಿಲ್ಲ. ಎರಡು ಬೆರಳುಗಳನ್ನು ಸೇರಿಸಿದಾಗ ಮಾತ್ರ ಚಿಟಿಕೆ ಸಾಧ್ಯವಾಗುತ್ತದೆ. ಹಾಗಾದರೆ ‘ಒಬ್ಬನಿಂದ’ ಅರ್ಥಾತ್ ಭಗವಂತ ಒಂದು ರೂಪದಲ್ಲಿ ಮಾತ್ರ ಇದ್ದುಕೊಂಡರೆ ಅವನೊಬ್ಬನಿಂದ ಎಲ್ಲವೂ ಸಾಧ್ಯವಿಲ್ಲವೆಂಬ ಅರ್ಥವಲ್ಲ. ಒಬ್ಬ ಭಗವಂತನೇ ಅನೇಕ ರೂಪಗಳನ್ನು ತಾಳಬಲ್ಲನು ಅಥವಾ ಅನೇಕ ನಾಮರೂಪಗಳಲ್ಲಿ ಆವಿರ್ಭವಿಸಬಲ್ಲನು. ರೂಪಗಳಲ್ಲಿ ದ್ವೈತವಿದೆ;  ಪರಮತತ್ತ್ವದಲ್ಲಿ ಏಕತ್ವವಿದೆ.

ಉಪಸಂಹಾರ:

ಸಗ್ಗ ಸುಖಕ್ಕೆ ದಾರಿ ತಿಳಿದವರಿಲ್ಲ. ಆದರೆ ಇದು ಕಗ್ಗ ಸುಖದ ಸೆಲೆ; ಇಲ್ಲಿ ಕಗ್ಗದ ಸಾರ ಸೋರದಂತಹ ರಾಗಬದ್ಧವಾದ ಅನುರಣನಗಳಿವೆ — ಇದನ್ನು ಯಥೇಚ್ಛವಾಗಿ ಆಸ್ವಾದಿಸಬಹುದು. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆ ಲೇಖಕನದು.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻

No comments:

Post a Comment

ಕಗ್ಗಮಾಲಿಕೆ - ೭: ದ್ವೈತದೊಳದ್ವೈತದ ಕಾಣ್ಕೆ

   ಕಗ್ಗಮಾಲಿಕೆ - ೭: ದ್ವೈತದೊಳದ್ವೈತದ ಕಾಣ್ಕೆ ಪೀಠಿಕೆ: ಚಿಟಿಕೆ ಹೊಡೆಯಲು ಎರಡು ಬೆರಳುಗಳು ಬೇಕಾಗುವಂತೆ, ಲೋಕದ ವ್ಯವಹಾರದಲ್ಲಿ ದ್ವೈತವೇ ಇರುತ್ತದೆ. ಆದರೆ ಪರಮತತ್ತ್ವ...