Thursday, September 25, 2025

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

 ಸಾಹಿತ್ಯ ಲೋಕವು ಒಂದು ಹೊಳೆಯುವ ನಕ್ಷತ್ರವನ್ನು ಕಳೆದುಕೊಂಡಿದೆ. ಕನ್ನಡ ಸಾಹಿತ್ಯದಲ್ಲಿ ಆತ್ಮಶೋಧನೆ, ಸತ್ಯಾನ್ವೇಷಣೆ ಮತ್ತು ತಾತ್ವಿಕ ಚಿಂತನೆಯ ಸಂಕೇತವಾಗಿ ನಿಂತಿದ್ದ ಎಸ್.ಎಲ್. ಭೈರಪ್ಪ ಇನ್ನಿಲ್ಲ. ಅವರ ಕಾಲ ಕಳೆದರೂ, ಅವರ ಲೇಖನಿಯಿಂದ ಬೆಳಗಿದ ಆಲೋಚನೆಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲಿವೆ. ಈ ಮೂಲಕ ಎಸ್.ಎಲ್.ಭೈರಪ್ಪನವರಿಗೆ ಅಂತಿಮ ನಮನಗಳನ್ನು ಸಲ್ಲಿಸುವುದಾಗಿದೆ.

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

ಸೆಪ್ಟೆಂಬರ್ 24, 2025 ರಂದು ಎಸ್. ಎಲ್. ಭೈರಪ್ಪ ಎಂಬ ದೈತ್ಯ ಪ್ರತಿಭೆಯೊಂದು ನಮ್ಮನ್ನಗಲಿತು. ಬರೆಹಗಾರನಿಗಿಂತ ಹೆಚ್ಚಿಗೆ ಗುರುವಾಗಿಯೂ, ಚಿಂತಕನಾಗಿಯೂ  ನಿರಂತರ ಸತ್ಯಾನ್ವೇಷಕರೂ ಅವರು ಛಾಪುಗಳನ್ನೊತ್ತಿದವರೆಂದು ನಾವು ನೆನಪಿಸಿಕೊಳ್ಳುತ್ತೇವೆ.

ಭೈರಪ್ಪನವರ ಕೃತಿಗಳೊಂದಿಗೆ ಬೆಳೆದವರಿಗೆ ಅವರು ಬರಿಯ ಬರೆಹಗಾರರಾಗಿರಲಿಲ್ಲ. ಅವರು ಜೀವನದ ಉದ್ದ ಅಗಲಗಳನ್ನು ಕಣ್ಣ ಮುಂದೆ ತೆರೆದಿಟ್ಟ ಪಥಪ್ರದರ್ಶಕನಾದ ಗುರುವೂ ಅವರಾಗಿದ್ದರು. "ಪರ್ವ" ಕೃತಿಯ ಓದಿನೊಂದಿಗೆ ಇತಿಹಾಸಗಳು ಬರಿಯ ಕಟ್ಟುಕಥೆಗಳಲ್ಲ, ಜೀವನದ ಹೋರಾಟಗಳ ಪ್ರತಿಬಿಂಬಗಳು ಅವು ಎಂದು ಭೈರಪ್ಪ ನಮಗೆ ತೋರಿಸಿಕೊಟ್ತರು. "ಆವರಣ", "ಸಾರ್ಥ" ಕೃತಿಗಳು ಸರಿದುಹೋದ ಚರಿತ್ರೆಯ ವಾಸ್ತವಿಕ ಚಿತ್ರಣಗಳನ್ನು ತೆರೆದಿಟ್ಟಿತು. ಪ್ರತಿಯೊಂದು ಕಾದಂಬರಿಯಲ್ಲಿಯೂ ಅವರು ನಮಗೆ ಪ್ರಶ್ನಿಸಲಿಕ್ಕೆ ಮತ್ತು ಅಹಿತಕರ ಸತ್ಯಗಳನ್ನು ಧೈರ್ಯದಿಂದ ಎದುರಿಸಲಿಕ್ಕೆ  ಹೇಳಿಕೊಟ್ಟರು.

ಅವರ ಭಾಷೆ ಗಂಭೀರವಾಗಿತ್ತು ಮತ್ತು ವಿಮರ್ಶೆಗಳಿಗೆ ಬಾಗದ ದೃಢ ನಿಲುವುಗಳು ಅವರವಾಗಿದ್ದುವು. ಆದರೆ ಅವೆಲ್ಲದರ ಅಂತರಾಳದಲ್ಲಿ ಸದಾ ಸ್ಫುರಿಸುವ ಮಾನವಪ್ರೇಮ ನೆಲೆಗೊಂಡಿತ್ತು. ಮನುಷ್ಯರು ಮತ್ತು ಅವರ ಕುಟುಂಬಗಳು, ನೆನಪುಗಳು ಮತ್ತು ಬದಲಾವಣೆಗಳ ನಡುವೆ ಸಿಲುಕಿ ನರಳುವ ಸ್ಥಳೀಯ ಸಂಸ್ಕೃತಿಗಳು ಅವರ ಕೃತಿಗಳ ಕೇಂದ್ರಬಿಂದುಗಳು.

ಭೈರಪ್ಪನವರು ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದರು. ಆದರೆ ಅವರಿಗೆ ಸಂದ ನಿಜವಾದ ಪ್ರಶಸ್ತಿ ಅವರ ಓದುಗರ ಹೃದಯದ ಮೌನವಾಗಿ ನೆಲೆಸಿದ ಆರಾಧನೆಯ ಭಾವನೆ.

ನಮಗಿಂದು ದುಃಖವಿದೆ; ಅದರೊಂದಿಗೆ ನಾವು ಭೈರಪ್ಪನವರಿಗೆ ಕೃತಜ್ಞತೆಗಳನ್ನೂ ಸಲ್ಲಿಸುತ್ತೇವೆ. ಏಕೆಂದರೆ ಭೈರಪ್ಪನವರ ಮಾತುಗಳು, ಎಂದಿಗೂ ಬೆಳಗುವ ನಂದಾದೀಪಗಳಾಗಿ ನಮಗೆ ಮಾರ್ಗದರ್ಶನ ನೀಡುತ್ತಲಿರಬಲ್ಲುವು ಮತ್ತು ಪ್ರಶ್ನಿಸಲು ಪ್ರೇರಣೆ ನೀಡುತ್ತಲಿರಬಲ್ಲುವು. ಇದು ಯುಗಗಳ ಅಂತ್ಯಕಾಲದವರೆಗೆ ಮಸುಕಾಗದ ಧ್ವನಿಯೆಂದು ನೆನಪಿಸಿಕೊಳ್ಳುತ್ತ ಭೈರಪ್ಪನವರಿಗೆ ಅಂತಿಮ ನಮನಗಳು.

 ಕೃಷ್ಣಪ್ರಕಾಶ ಬೊಳುಂಬು



No comments:

Post a Comment

ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು

 ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು  ಅತ್ತ ಬಲಕ್ಕೂ ವಾಲದೆ ಇತ್ತ ಎಡಕ್ಕೂ ವಾಲದಿದ್ದ ಭೈರಪ್ಪನವರು ಎಡಪಂಥೀಯರಿಗೆ ಅಪಥ್ಯರಾಗಿಯೇ ಉಳಿದರು...