Tuesday, September 23, 2025

ಇದು ಕಾಸರಗೋಡಿನಲ್ಲಿ ಆದ ಘಟನೆಯೇ?

 ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯೊಂದನ್ನು ಕಟ್ಟಿ ಕ್ಲಾಸ್ ಮಾಡುತ್ತಿರುವ ಚಿತ್ರವೊಂದು ಕಾಸರಗೋಡಿನಲ್ಲಿ ಆದ ಘಟನೆ ಎಂಬಂತೆ ಕನ್ನಡ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಲಿದೆ. ಇದು ಕಾಸರಗೋಡಿನಲ್ಲಿ ಆದುದು ನಿಜವೇ? ಈಚೆಗೆ ಕನ್ನಡ ಪತ್ರಿಕೆಗಳು ಕೇರಳದ ಯಾವುದೇ ಸುದ್ದಿಗೆ ಕಾಸರಗೋಡು ಎಂದು ಬರೆಯುತ್ತಿವೆ. ಕೇರಳದ ಅನ್ಯ ಸ್ಥಾನದಲ್ಲಿ ನಡೆದ ಘಟನೆಗೆ ಕಾಸರಗೋಡು ಎಂಬ ಉಪಶೀರ್ಷಿಕೆ ಕೊಟ್ಟುದು ನಿಜವೇ ಆಗಿದ್ದರೆ ಇದು ಅಕ್ಷಮ್ಯ ಅಪರಾಧ. ಕೇರಳದಲ್ಲಿ ನಡೆದ ಯಾವುದೇ ಘಟನೆಯನ್ನು ಕಾಸರಗೋಡಿನಲ್ಲಿ ನಡೆದುದು ಎಂಬಂತೆ ಬಿಂಬಿಸುವುದು ಕನ್ನಡದ ಮಾಧ್ಯಮ ವರದಿಗಾರರಲ್ಲಿ ಬೇರೂರುತ್ತಿರುವ ದುರಭ್ಯಾಸವೂ ಆಗಿ ಬದಲಾಗುತ್ತಲಿದೆ.  

ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರ ಸಂಖ್ಯೆ ಇಳಿಮುಖವಾಗಿ ಆ ಸ್ಥಾನದಲ್ಲಿ ಅಬ್ಬರದಲ್ಲಿ ಬೊಬ್ಬೆ ಹೊಡೆಯುವ ಮುಜಾಹಿದರು ಹೆಚ್ಚಿಕೊಳ್ಳುತ್ತಿದ್ದಾರೆ. ಅವರಿಗೆ ಆದರೆ ಸ್ತ್ರೀ ಪುರುಷರ ಮಧ್ಯೆ ಪರದೆ ಇರಲೇ ಬೇಕು ಮತ್ತು ಹಧೀಸುಗಳ ಪಾಲನೆ 100% ಆಗಬೇಕು. ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರಾದರೋ ಅಲ್ಲೊಬ್ಬ ಮಹಿಳೆ ಬುರುಕ ತೊಟ್ಟು ಊರಿನ ಸಾಂಸ್ಕತಿಕ ಆಚರಣೆಯಲ್ಲಿ ಭಾಗಿಯಾಗುವುದು, ಇಲ್ಲೊಬ್ಬ ಮಾನಸಾಂತರ ಪೂರ್ವದ ತನ್ನ ಸಾಂಸ್ಕತಿಕ ಹಿನ್ನೆಲೆಯನ್ನು ಒಪ್ಪುವುದು ಎಂದು ಮುಂತಾದ ರೀತಿಗಳಲ್ಲಿ ಇದ್ದುಕೊಂಡಿದೆ.

ನಿಜವಾಗಿ ಈ ಘಟನೆ ಕೊಚ್ಚಿಯಲ್ಲಿ ನಡೆದುದು. ತೀವ್ರ ಇಸ್ಲಾಮಿಕ್ ದೃಷ್ಟಿಕೋನವಾದ ಮುಜಾಹಿದ್ ಚಳುವಳಿಯ ಅನುಯಾಯಿಗಳು ಸಂಘಟಿಸಿದ ಕಾರ್ಯಕ್ರಮ ಇದು. ಮುಜಾಹಿದ್ ದೃಷ್ಟಿಕೋನದಿಂದ ಇದಕ್ಕೆ ಉತ್ತರವನ್ನು ಈ ಕೆಳಗಿನಂತೆ ಊಹಿಸಬಹುದು.

೧. ನಾವು ಸ್ತ್ರೀಯರನ್ನು ಪರದೆ ಕಟ್ಟಿ ದೂರ ಇಟ್ಟಿಲ್ಲ, ಬದಲಿಗೆ ಪುರುಷರನ್ನು ಸ್ತ್ರೀಯರಿಂದ ದೂರ ಇಟ್ಟಿದ್ದೇವೆ. ಸ್ತ್ರೀ ಪುರುಷರ ಮಧ್ಯೆ ನಾವು ಕಟ್ಟಿದ ಪರದೆ ಸ್ತ್ರೀ ವಿರುದ್ಧವಾದುದು ಎಂದು ತಿಳಿಯುವುದು ತಪ್ಪು. ಅದನ್ನು ಯಾಕೆ ಪುರುಷ ವಿರುದ್ಧ ಎಂದು ಕರೆಯಬಾರದು? ಇದು ಸ್ತ್ರೀ ವಿರುದ್ಧವಲ್ಲ ಎಂದು ನಾವು ತಿಳಿಯುತ್ತೇವೆ. ಸ್ತ್ರೀ ಪುರುಷರ ಮಧ್ಯೆ ಇರುವ ಪ್ರತ್ಯೇಕತೆ ವಾಸ್ತವವೇ ಆಗಿದೆ. ಅದು ಇಂದು ನಿನ್ನೆಯದಲ್ಲ. ಅಲ್ಲಾಹು ನಮ್ಮನ್ನು ಸೃಷ್ಟಿಸಿದುದು ಹೀಗೆಯೇ ಎಂದು ತಿಳಿಯಬೇಕು.

೨. ಸ್ತ್ರೀ ಪುರುಷರ ಮಧ್ಯೆ ಇರುವ ಪರದೆಯನ್ನು ನೀವು ನೋಡುತ್ತೀರಿ ಆದರೆ ಮಸೀದಿಗಳಲ್ಲಿ ಸ್ತ್ರೀ ಪುರುಷರ ಮಧ್ಯೆ ಇರುವ ಗೋಡೆಯನ್ನು ಯಾಕೆ ನೋಡುವುದಿಲ್ಲ. [ಕೆಲವು ಪಂಥಗಳಿಗೆ ಸೇರಿದ ಮಸೀದಿಗಳಲ್ಲಿ ಸ್ತ್ರೀಯರಿಗೂ ನಮಾಜ್ಃ ಸಲ್ಲಿಸುವ ಅವಕಾಶವಿದೆ.]

೩. ಮುಸ್ಲಿಮರು ಯಾಕೆ ಯಾವಾಗಲೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಲೇ ಇರಬೇಕು? ಅದು ಸಾಧ್ಯವಿಲ್ಲ- ನಾವು (ಮುಸಲ್ಮಾನರು) ಇರುವುದೇ ಹೀಗೆ, ನಮ್ಮ ಜೀವನವೇ ಹೀಗೆ ಎನ್ನುತ್ತೇವೆ. 

೪.  ಅನ್ಯ ಸ್ತ್ರೀ ಪುರುಷರು ನಿರ್ದಿಷ್ಟ ಮಿತಿಯನ್ನು ಮೀರಿ ಒಡನಾಡಿದರೆ ಏನಾಗಬಹುದು ಎಂದು ನಾವು ಊಹಿಸಬಹುದು. ಪಾಪಗಳಿಗೆ ದಾರಿ ಮಾಡಿಕೊಡುವುದು ಇಂತಹ ಪ್ರವೃತ್ತಿಗಳು ಎಂದು ತಿಳಿಯಬೇಕು. ವ್ಯಭಿಚಾರ ತಪ್ಪೆಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಪುರುಷರಲ್ಲಿ ಹಾರ್ಮೋನುಗಳ ವ್ಯತ್ಯಯದ ಮೂಲಕ ಮತ್ತು ಸ್ತ್ರೀಯರಿಗೆ ತಮ್ಮೊಡನೆ ಕಾಳಜಿ ತೋರಿಸುವವರೊಂದಿಗೆ ಮೂಲಕ ಉಂಟಾಗುವ ಪ್ರೀತಿ ಪರಸ್ಪರ ಆತ್ಮೀಯತೆಗೆ ದಾರಿಮಾಡಿಕೊಡುತ್ತದೆ. ಆತ್ಮೀಯತೆ ನಿರ್ದಿಷ್ಟ ಮಿತಿಯನ್ನು ಮೀರಿದಾಗಲೇ ಅದು ವ್ಯಭಿಚಾರ ಎನಿಸಿಕೊಳ್ಳುತ್ತದೆ.      

೫. ಯಾವುದೇ ರೀತಿಯ ಅನಾಚಾರಗಳಿಗೆ ಆಸ್ಪದ ಕೊಡದಿರುವುದು ಇಸ್ಲಾಮ್ ಮತದ ವೈಶಿಷ್ಟ್ಯ. ವ್ಯಭಿಚಾರಕ್ಕೆ ಆಸ್ಪದ ಕೊಡುವ ದಾರಿಗಳನ್ನೂ ಕೂಡ ಇಸ್ಲಾಮ್ ಇಲ್ಲವಾಗಿಸುತ್ತದೆ. "ವಾಲಾ ತಕ್ರಬು ಝಿಃನ" - (ವ್ಯಭಿಚಾರದಿಂದ ದೂರವಿರಿ) ಎನ್ನುವುದು ಇಸ್ಲಾಮಿನ ವೈಶಿಷ್ಟ್ಯ, ವ್ಯಭಿಚಾರ ಮಾಡಬಾರದು ಎಂದು ಮಾತ್ರವೇ ಅಲ್ಲ ಎಂದು ತಿಳಿಯಬೇಕು. ತಪ್ಪುಗಳನ್ನು ಮಾಡಬಾರದು ಎಂದು ಮಾತ್ರವಲ್ಲ ತಪ್ಪುಗಳತ್ತ ಮುನ್ನಡೆಸುವ ದಾರಿಗಳನ್ನೂ ಸಹ ಕುರಾನ್ ಇಲ್ಲವಾಗಿಸುತ್ತದೆ. ಸ್ತ್ರೀಯರು ಪುರುಷರನ್ನು ನೋಡಿದರೆ ಅಥವಾ ಪುರುಷರು ಸ್ತ್ರೀಯರನ್ನು ನೋಡಿದೊಡನೆ ಲೈಂಗಿಕ ಭಾವನೆಗಳು ಮಾತ್ರವಲ್ಲದೆ ಸ್ನೇಹದ ಅಥವಾ ಇತರ ಭಾವನೆಗಳು ಕೂಡ ಉಂಟಾಗಬಹುದು. ಅದನ್ನು ನಾವು ಅಲ್ಲಗಳೆಯುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟೂ ಪ್ರತ್ಯೇಕತೆಯನ್ನು ಪಾಲಿಸುವುದು ನಾವು ಇಸ್ಲಾಮನ್ನು ಅನುಸರಿಸುವ ರೀತಿ.  

೬. ಪ್ರತ್ಯೇಕತೆಯೆಂಬುದು ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ಹಾಗಾಗಿ ನಾವು ಸ್ವಯಂ ಹಿಜಾಬ್ ಧರಿಸಬೇಕು. ಸ್ತ್ರೀಯರಿಗೂ ಪುರುಷರಿಗೂ ಹಿಜಾಬ್ ಇದೆ. ಸ್ತ್ರೀಯರು ಧರಿಸುವ ಪರದಾ ಹಿಜಾಬ್ ಆಗಿದ್ದರೆ ಪುರುಷರಿಗೆ ತಮ್ಮ ದೃಷ್ಟಿಯನ್ನು ಕೆಳಗೆ ಹಾಯಿಸುವುದು ಅವರಿಗೆ ಹಿಜಾಬ್ ಆಗಿದೆ. ಇಸ್ಲಾಂ ದೈವಿಕ ಮತವಾದ ಕಾರಣ ಪಾಪಕ್ಕೆ ದಾರಿಮಾಡಿಕೊಡುವ ಯಾವುದೇ ಅಂಶಗಳನ್ನು ಇಲ್ಲವಾಗಿಸುವುದು ಸಹಜ. ಇದನ್ನು ಎಲ್ಲರೂ ಮಾಡಬೇಕೆಂದು ನಾವು ಹೇಳುವುದಿಲ್ಲ. ಮುಸಲ್ಮಾನರು ಇದನ್ನು ಅನುಸರಿಸಿದರೆ ಇತರರು ಯಾಕೆ ಪ್ರಶ್ನೆ ಮಾಡಬೇಕು?

 ----------------

ಊಹೆ ಸರಿಯಾಗಿದೆಯೋ ತಪ್ಪೋ ಎಂದು ಅನುಮಾನವಿದ್ದರೆ ಕೆಳಗಿನ ವಿಡಿಯೋ ನೋಡಬಹುದು. [https://www.youtube.com/watch?v=oFULP4uF9T4&t=31s] ಅದು ಮಲೆಯಾಳ ಭಾಷೆಯಲ್ಲಿ ಇರುವ ಕಾರಣ ೧೦೦% ಅರ್ಥವಾಗದೆಯೂ ಇರಬಹುದು. ಒಟ್ಟಂದದಲ್ಲಿ ಆ ಸಂಭಾಷಣೆಯ ಭಾವಗ್ರಹಣ ಇಲ್ಲಿ ಆಗಿದೆ ಎಂದು ತಿಳಿದುಕೊಳ್ಳಬಹುದು. 

~ಕೃಷ್ಣಪ್ರಕಾಶ ಬೊಳುಂಬು

#ಕಾಸರಗೋಡು  #ಹಿಜಾಬ್ #ಮುಜಾಹಿದ್ 


No comments:

Post a Comment

ಇದು ಕಾಸರಗೋಡಿನಲ್ಲಿ ಆದ ಘಟನೆಯೇ?

 ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯೊಂದನ್ನು ಕಟ್ಟಿ ಕ್ಲಾಸ್ ಮಾಡುತ್ತಿರುವ ಚಿತ್ರವೊಂದು ಕಾಸರಗೋಡಿನಲ್ಲಿ ಆದ ಘಟನೆ ಎಂಬಂತೆ ಕನ್ನಡ ಮಾಧ್ಯಮಗಳಲ್ಲಿ ಹ...