Sunday, October 5, 2025

ಜಾತಿಗಣತಿಯ ಆ60 ಪ್ರಶ್ನೆಗಳು

ಜಾತಿಗಣತಿಯ ಆ 60 ಪ್ರಶ್ನೆಗಳು 

ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025) ಜಾರಿಯಲ್ಲಿದೆ. ಸಾಮಾಜಿಕ ನ್ಯಾಯವನ್ನೊದಗಿಸುವ ಅದ್ಭುತ ಪ್ರಕ್ರಿಯೆಯೆಂದು ಕರೆಯಿಸಿಕೊಂಡ ಜಾತಿ ಸಮೀಕ್ಷೆ ಆಡಳಿತಾತ್ಮಕ ಪ್ರಹಸನ ಮತ್ತು ರಾಜಕೀಯ ವಿಡಂಬನೆಯ ವಸ್ತುವಾಗಿ ಒಡ್ಡಿಕೊಳ್ಳುತ್ತಲಿದೆ.


ಸಮೀಕ್ಷೆ ಮುಂದುವರಿಯುತ್ತಿರುವಂತೆಯೇ ವ್ಯವಸ್ಥೆಯಲ್ಲಿ ಒಡಮೂಡಿರುವ ಬಿರುಕುಗಳು  ಎದ್ದುತೋರಿಕೊಳ್ಳುತ್ತಲಿವೆ. ತಾಂತ್ರಿಕ ದೋಷಗಳು, ಶಿಸ್ತು ಕ್ರಮದ ಬೆದರಿಕೆಗಳು, ಸಮುದಾಯಗಳ ನಡುವಣ ಕಲಹ ಮತ್ತು ನ್ಯಾಯಾಂಗದ ಎಚ್ಚರಿಕೆಗಳು - ಇವೆಲ್ಲವೂ ಈ ಪರಿಪಾಟದ ಸಿಂಧುತ್ವವನ್ನು ಪ್ರಶ್ನಿಸುತ್ತಲಿವೆ. 

ಕರ್ನಾಟಕ ರಾಜ್ಯ ಸರಕಾರವು ಸಮಾಜ ಕಲ್ಯಾಣ ಅಥವಾ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಬಹುದಾದರೂ ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಮಗ್ರ ಜಾತಿ ಜನಗಣತಿಯನ್ನು ನಡೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ.

ಆ ಅರುವತ್ತು ಪ್ರಶ್ನೆಗಳು ಯಾವುವು ಎಂದು ಕೇಳಿದರೆ ಉತ್ತರ ಇಲ್ಲಿದೆ.

ಸಮೀಕ್ಷೆಗೆ ಬೇಕಾಗಿರುವ ದಾಖಲೆಗಳು

  • ರೇಷನ್ ಕಾರ್ಡ್
  • ಮನೆಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  • ಚುನಾವಣಾ ಐಡಿ ಕಾರ್ಡ್
ಅದರ ಮಾದರಿಯೊಂದನ್ನು ಇಲ್ಲಿ ನೋಡಬಹುದು.

ಸದ್ದು ಮಾಡುತ್ತಲಿರುವ ಸುದ್ದಿಗಳು

  • ಕೊಡಗಿನಲ್ಲಿ ರೊಚ್ಚಿಗೇಳುತ್ತಿರುವ ಶಿಕ್ಷಕರು: ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಗಣತಿದಾರರಾಗಿ ಸೇವೆ ಸಲ್ಲಿಸಲು ಒತ್ತಾಯಪೂರ್ವಕವಾಗಿ ನೇಮಿಸಲ್ಪಟ್ಟಿದ್ದಾರೆ. ದುರ್ಬಲ ಮೊಬೈಲ್ ನೆಟ್‌ವರ್ಕ್, ಡೇಟಾವನ್ನು ಅಪ್‌ಲೋಡ್ ಮಾಡುವ ಅಸೌಲಭ್ಯ, ತಪ್ಪಾದ ಜಿಪಿಎಸ್ ನಮೂದುಗಳು ಮತ್ತು ಅರಣ್ಯ ಪ್ರದೇಶದಲ್ಲಿನ ಸುರಕ್ಷತಾ ಅಪಾಯಗಳ ಬಗೆಗೆ ಅವರರು ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
  • ಕೆಲಸ ಮಾಡಲು ನಿರಾಕರಿಸಿದ ಗಣತಿದಾರರ ಮೇಲೆ ರಾಜ್ಯ ಸರಕಾರದ ದೌರ್ಜನ್ಯ: ಸಮೀಕ್ಷೆಯ ಸಂದರ್ಭದಲ್ಲಿ "ಕರ್ತವ್ಯಗಳನ್ನು ನಿರ್ಲಕ್ಷಿಸುವ" ಸರಕಾರಿ ಸಿಬ್ಬಂದಿ ಅಥವಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಎಚ್ಚರಿಸಿದೆ.
  • ಎರಡು ದಿನದಲ್ಲಿ 71 ಸಾವಿರ ಮಂದಿಯನ್ನೊಳಗೊಂಡ ಸಮೀಕ್ಷೆ: ಆ್ಯಪ್‌ನಲ್ಲಿ ಮುಂದುವರಿದ ದೋಷ, ಅಡಚಣೆ, ಗೊಂದಲ: ಬೆಂಗಳೂರಿನಲ್ಲಾದ ಸಮೀಕ್ಷೆಯ 2 ನೇ ದಿನದಲ್ಲಿ 18,487 ಮನೆಗಳಲ್ಲಿ 71,004 ಜನರಿಂದ ಡೇಟಾವನ್ನು ಸಂಗ್ರಹಿಸಲಾಗಿದೆ - ಆದರೆ ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆಗಳು, ಒಟಿಪಿ ವೈಫಲ್ಯಗಳು ಮತ್ತು ಅಜಾಗರೂಕ ಅಪ್‌ಲೋಡ್‌ಗಳಿಂದಾಗಿ ಅನೇಕ ಫಾರ್ಮ್‌ಗಳು ಅಪೂರ್ಣವಾಗಿ ಉಳಿದಿವೆ.
  • ನ್ಯಾಯಾಲಯವು ಎಚ್ಚರಿಕೆಗಳೊಂದಿಗೆ ಸಮೀಕ್ಷೆಯನ್ನು ಮುಂದುವರಿಸಲು ಅನುಮತಿಸಿತು: ಕರ್ನಾಟಕ ಹೈಕೋರ್ಟ್ ಸಮೀಕ್ಷೆಯನ್ನು ತಡೆಯಲು ನಿರಾಕರಿಸಿತು ಆದರೆ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಬಾರದು ಎಂದು ಆದೇಶಿಸಿತು.
  • ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಗಡುವು ನಿಗದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 7 ರ ಮುನ್ನ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಮತ್ತು ರಾಜ್ಯದ 1.43 ಕೋಟಿ ಮನೆಗಳಲ್ಲಿ ದಿನಕ್ಕೆ ಗಣತಿದಾರರು 10% ರಷ್ಟು ಸಮೀಕ್ಷೆಯನ್ನು ಒಳಗೊಳ್ಳುವಂತೆ ಒತ್ತಾಯಿಸಿದ್ದಾರೆ.
  • ಜಾತಿ ಗಣತಿ ಮಾಹಿತಿ ಸ್ವಯಂ ಇಚ್ಛೆಗೆ ಬಿಟ್ಟ ಸಂಗತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜನರನ್ನೂ ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ ಪ್ರಸ್ತುತ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಜನರ/ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಟ್ಟಿದ್ದು ಎಂಬುದಾಗಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್‌ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
  • ಅಪರ್ಯಾಪ್ತ ವೇತನ ನಿಗದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ 1.20 ಲಕ್ಷ ಸಮೀಕ್ಷಕರಿಗೆ ಮೊದಲ ಕಂತಿನ ಗೌರವಧನವಾಗಿ ತಲಾ 5000 ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 60.36 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ
  • ಮುಸ್ಲಿಮರಿಂದ ಅಪಸ್ವರ: ಜಾತಿ ಸಮೀಕ್ಷೆ - ಮುಸ್ಲಿಮರಲ್ಲಿ ಗೊಂದಲ. ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ೧೧.೦೯.೨೦೨೫ (ವರದಿ: ಮುಹಮ್ಮದ್ ಆರಿಫ್ ಮಂಗಳೂರು) 
  • ಪ್ರತ್ಯೇಕತಾವಾದಿಗಳಿಗೊಂದು ಸುವರ್ಣಾವಕಾಶ: ಸಂದರ್ಭಕ್ಕಾಗಿ ಕಾದಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರತ್ಯೇಕತಾವಾದಿಗಳು "ಹಿಂದೂ ಧರ್ಮ" ಎಂದು ನಮೂದಿಸದೆ "ಲಿಂಗಾಯತ ಧರ್ಮ" ಎಂದು ನಮೂದಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾರೆ.
  • ನ್ಯಾಯಾಲಯದ ಆದೇಶ ಎತ್ತಿಹಿಡಿದ ಬ್ರಾಹ್ಮಣ ಮಹಾಸಭಾ: ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಒಪ್ಪಿಗೆ ಸ್ವಯಂಪ್ರೇರಿತವಾಗಿರಬೇಕು ಎಂದು ಸಾರುವ ನ್ಯಾಯಾಲಯದ ಆದೇಶವನ್ನು ಬ್ರಾಹ್ಮಣ ಮಹಾಸಭಾ ಎತ್ತಿಹಿಡಿದಿದೆ.  
  • ತನ್ನ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯದ ನಡುವಣ ವ್ಯತ್ಯಾಸ ತಿಳಿಯದ ರಾಜ್ಯ ಸರಕಾರ: ₹420 ಕೋಟಿ ಬಜೆಟ್‌ ಹೊಂದಿದ ಈ ಪರಿಪಾಟವು ಪರಸ್ಪರ ವಿರುದ್ಧವಾದ ಊಹೆಗಳ ಮೇಲೆ ನೆಲೆಗೊಂಡಿದೆ. ಸಾವಿರಾರು ಜಾತಿಗಳನ್ನು ಅಚ್ಚುಕಟ್ಟಾಗಿ ವರ್ಗೀಕರಿಸಬಹುದು, ಅವುಗಳ ಗಣನೆ ಸಂಪೂರ್ಣವಾಗಿ ರಾಜಕೀಯೇತರವಾಗಿದೆ ಮತ್ತು ರಾಜ್ಯ ಸರಕಾರದ ವ್ಯವಸ್ಥೆ ಅವುಗಳನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಲು ಸಮರ್ಥವಾಗಿದೆ ಎನ್ನುವಂತಹವು ಆ ಊಹೆಗಳು. ಅದೃಷ್ಟವೋ ದುರದೃಷ್ಟವೋ ಎನ್ನುವಂತೆ ಈ ಊಹೆಗಳಲ್ಲಿ ಯಾವುದೂ ನಿಜವಲ್ಲ.






ಜಾತಿಗಣತಿಯ ಆ60 ಪ್ರಶ್ನೆಗಳು

ಜಾತಿಗಣತಿಯ ಆ 60 ಪ್ರಶ್ನೆಗಳು  ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ...