Monday, March 23, 2026

ಸೂರಿಕುಮೇರು ಎಂಬ ಯಕ್ಷಗಾನದ ಮೇರುಪರ್ವತ

ಯಕ್ಷಗಾನದ ಮೇರು ಸೂರಿಕುಮೇರು ಕೆ. ಗೋವಿಂದ ಭಟ್ಟರವರ ನಿಧನದ ಸುದ್ದಿ ಯಕ್ಷಗಾನ ಪ್ರೇಮಿಗಳ ಹೃದಯವನ್ನು ಕಲಕಿದೆ.

_*ಸೂರಿಕುಮೇರು ಎಂಬ ಯಕ್ಷಗಾನದ ಮೇರುಪರ್ವತ*_

ಯಕ್ಷಗಾನದ ಮಟ್ಟು ಮಜಲುಗಳನ್ನು ಬಲ್ಲವನಲ್ಲ; ಪ್ರಸಂಗಾಂತರಗಳಲ್ಲಿ ಕಂಡು ಕೇಳಿದ ಅಲ್ಪಜ್ಞಾನವೇ ಈ ಬರೆಹಕ್ಕೆ ಆಧಾರ. ಆದರೆ ಶಾಸ್ತ್ರ ಪರಿಜ್ಞಾನಕ್ಕಿಂತಲೂ ಮುಖ್ಯವಾದುದು ಸಾಮಾನ್ಯ ರಸಾಸ್ವಾದಕನ ನೆಲೆಯಲ್ಲಿ ಮಾಡಬಲ್ಲ ಕಲಾಸ್ವಾದನೆ ಎಂಬ ಧೈರ್ಯದಲ್ಲಿ ಬರೆಯುತ್ತಲಿದ್ದೇನೆ. 

‘‘ಪಾತ್ರ ಯಾವುದೇ ಇರಲಿ, ತಕರಾರಿಲ್ಲದೆ ಕಲಾವಿದ ಒಪ್ಪಿಕೊಂಡರೆ ಕಲಾವಿದ ಬೆಳೆಯುತ್ತಾನೆ ಮತ್ತು ಪ್ರಯೋಗ ಯಶಸ್ವಿಯಾಗುತ್ತದೆ. ನಮ್ಮನ್ನು ನಾವು ಒಂದೆರಡು ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡರೆ ಕಲಾಮಾಧ್ಯಮ ಸೊರಗುತ್ತದೆ. ಯಕ್ಷಗಾನವು ಒಂದು ಸಾಮುದಾಯಿಕ ಭಾವಾಭಿವ್ಯಕ್ತಿಯೇ ಹೊರತು ಏಕವ್ಯಕ್ತಿ ಪ್ರದರ್ಶನವಲ್ಲ. ಇಡೀ ತಂಡವಾಗಿ ಕಲಾವಿದರು ದುಡಿದರೆ ಎಂತಹ ಪ್ರಸಂಗವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದು ನಾನು ಕಂಡುಕೊಂಡ ಸತ್ಯ.’’  - ಗೋವಿಂದ ಭಟ್ಟರು

ಎಳವೆಯ ಬಡತನ ಮತ್ತು ಅಲೆದಾಟಗಳು ಅವರ ಜೀವನಗಳನ್ನು ಹದಗೊಳಿಸಿದ ಚೆಂಡೆಪೆಟ್ಟುಗಳಾದುವು. ಗಂಭೀರ ಪಾತ್ರಗಳಲ್ಲಿನ ಅತಿಗಂಭೀರ ಅಭಿನಯದಿಂದಲೂ ಕಲಾರಸಿಕರ ಮನಸೂರೆಗೊಂಡರು . ಯಕ್ಷಗಾನದ ಸವ್ಯಸಾಚಿಯಾಗಿಯೂ ರಂಗಸ್ಥಳದ ಮೇರುಪರ್ವತವಾಗಿಯೂ ಸುಮಾರು ಏಳು ದಶಕಗಳ ಕಾಲ ಗೆಜ್ಜೆ ಕಟ್ಟಿ ನಟನವಾಡಿದ ಅನನ್ಯವಾದ ಸೇವೆಯನ್ನು ನೀಡಿದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಯಕ್ಷಗಾನ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪಸರಿಸುವಲ್ಲಿ ಮಹತ್ತರ ಪಾತ್ರವಹಿಸಿದವರು ಗೋವಿಂದ ಭಟ್ಟರು. 

ನಾನು ಕೇಳಿದ "ಮಧ್ಯಮ ವ್ಯಾಯೋಗ"  ಪ್ರಸಂಗದಲ್ಲಿ ಘಟೋತ್ಕಚನಾಗಿ ಸೂರಿಕುಮೇರು ಮತ್ತು ಶೇಣಿ ಭೀಮಸೇನನಾಗಿ ಪಾತ್ರ ನಿರ್ವಹಿಸಿದ್ದರು. ಆಗ ಶೇಣಿಯವರು "ನನ್ನೊಟ್ಟಿಗೆ ಮಾತಿಗೆ ಮಾತು ಮಾತಿಗೆ ಮಾತು ಕೊಡಬಲ್ಲವನು ನೀನೊಬ್ಬನೇ" ಎಂದಿದ್ದರು.ಅದು ಭೀಮಸೇನನಾಗಿ ಅವರು ಘಟೋತ್ಕಚನೊಡನೆ ಹೇಳಿದ್ದಲ್ಲ; ಗೋವಿಂದ ಭಟ್ಟರ ಸಾಮರ್ಥ್ಯದ ಪ್ರಶಂಸೆಯೆಂದು ತಿಳಿಯುವುದು ಆಸ್ವಾದಕನ ಪಾಲಿಗೆ ತಪ್ಪಾಗದು.

ಕಲೆಗೆ ಸಾವಿಲ್ಲ, ಕಲಾವಿದನಿಗೆ ಅವಸಾನವಿಲ್ಲ.

ಕೃಷ್ಣಪ್ರಕಾಶ ಬೊಳುಂಬು

No comments:

Post a Comment

ಸೂರಿಕುಮೇರು ಎಂಬ ಯಕ್ಷಗಾನದ ಮೇರುಪರ್ವತ

ಯಕ್ಷಗಾನದ ಮೇರು ಸೂರಿಕುಮೇರು ಕೆ. ಗೋವಿಂದ ಭಟ್ಟರವರ ನಿಧನದ ಸುದ್ದಿ ಯಕ್ಷಗಾನ ಪ್ರೇಮಿಗಳ ಹೃದಯವನ್ನು ಕಲಕಿದೆ. _*ಸೂರಿಕುಮೇರು ಎಂಬ ಯಕ್ಷಗಾನದ ಮೇರುಪರ್ವತ*_ ಯಕ್ಷಗಾನದ ಮ...