\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ್ಲ. ಆದರೆ ಇವರಿಬ್ಬರನ್ನೂ ಪರಸ್ಪರ ವೈರಿಗಳಂತೆ ಬಿಂಬಿಸುವ ಒಂದು ತಂಡ ಇದೆ. \\
ಇವರನ್ನು ಪರಸ್ಪರ ವೈರಿಗಳೆಂದು ಬಿಂಬಿಸುವ ಗುಂಪೊಂದು ಇದೆ ಎಂದು ಬರೆದಿದ್ದಾರೆ. ಅವರು ಯಾವುದೆಂದು ಸ್ಪಷ್ಟಪಡಿಸಿದರೆ ಲೇಖಕರ ನಿಲುವು ಸ್ಪಷ್ಟವಾಗಬಲ್ಲುದು.
ಈ ಗುಂಪು ಯಾವುದೆಂದು ಲೇಖನದ ಭಾವದಿಂದಲೇ ಊಹಿಸಬಹುದು, ಆದರೆ ಊಹೆ ನಿಜವಾಗಬೇಕೆಂದಿಲ್ಲ. ಆದರೆ, ಅನುಮಾನ ಪರಿಹಾರಕ್ಕಾಗಿ ಲೇಖಕರ ನಿಲುವು ಕೇಳಿದುದಕ್ಕೆ ಅವರು ನೀಡಿದ ಪ್ರತ್ಯುತ್ತರದಿಂದ ಅವರು ಉದ್ದೇಶಿಸಿದ ಆ ಗುಂಪು ಯಾವುದೆಂದು ಸ್ಪಷ್ಟವಾಯಿತು. "ಅದನ್ನು ಊಹಿಸಿದರೆ ಸಾಕು ಎಂಬ ಕಾರಣಕ್ಕಾಗಿಯೇ ನಿರ್ದಿಷ್ಟವಾಗಿ ಹೆಸರಿಸಲಿಲ್ಲ" - ಇದು ಲೇಖಕರ ಮಾತು.
\\ಅವರನ್ನು ಮುಖ್ಯ ವಾಹಿನಿಯಿಂದ ಹೊರದಬ್ಬಬೇಕಾದರೆ ರಾಜಸ್ಥಾನದಲ್ಲಿ ನಡೆದಂತಹ ಬೆಳವಣಿಗೆಗಳು ಈ ದೇಶದ ಎಲ್ಲ ಕಡೆಯೂ ನಡೆಯಬೇಕು. ಮುಸ್ಲಿಮರು ಈ ಕುರಿತಂತೆ ಹೆಚ್ಚು ಜವಾಬ್ದಾರಿಯನ್ನು ವಹಿಸಿಕೊಂಡರೆ ಬಹಳ ಒಳ್ಳೆಯದು.\\
ಇಷ್ಟರಿಂದ ಲೇಖನದ ಉದ್ದೇಶ ಸ್ಪಷ್ಟವಾಗಿದೆ, - "ಮುಸ್ಲಿಮರು ಆರೆಸೆಸ್ಸನ್ನು ದೂರ ಇಡಬೇಕು!"
ಅಂದರೆ ಈ ದೇಶದಲ್ಲಿ ಹಿಂದು ಮುಸ್ಲಿಂ ಭಾಯಿ ಭಾಯಿ ಎಂಬ ಭಾವನೆಯೊಂದಿಗೆ ಸಾವಿರಾರು ವರ್ಷಗಳಿಂದ ಬದುಕುತ್ತ ಬಂದಿದ್ದಾರೆ, ಆರೆಸೆಸ್ಸಿನ ಉಗಮ ಯಾವ ವಿಷಮ ಘಳಿಗೆಯಲ್ಲಿ ಆಯಿತೋ ಅಂದಿನಿಂದ ಈ ದೇಶದಲ್ಲಿ ಹಿಂದು ಮುಸ್ಲಿಂ ಸಹೋದರರು ಪರಸ್ಪರ ಕಚ್ಚಾಡುತ್ತಿದ್ದಾರೆ. ಇಷ್ಟು ಮಾತುಗಳು ಲೇಖಕರ ಇಂಗಿತವಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಮುಂದಿನದನ್ನು ನೋಡುವ.
ಮುಸಲ್ಮಾನರಿಗಾಗಿ ಪ್ರತ್ಯೇಕ ದೇಶವೊಂದನ್ನು ಬಿಟ್ಟುಕೊಡಬೇಕು ಎಂಬ ವಾದ ಆರೆಸ್ಸೆಸ್ ಸ್ಥಾಪನೆಗೊಳ್ಳುವುದಕ್ಕಿಂತ ಎಷ್ಟೋ ದಶಕಗಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದಿತು ಮತ್ತು ಅದಕ್ಕಾಗಿ ನಡೆದ ಪ್ರಯತ್ನಗಳಲ್ಲಿ ದೇಶದ ಸಾಮಾನ್ಯ ಪ್ರಜೆಗಳು ಬಲಿಯಾದುದು ಚರಿತ್ರೆ. ಮೊದಲಿಗೆ 'ಬಂಗಾಳ ವಿಭಜನೆ' ಹೋರಾಟದಲ್ಲಿ ಸಾಮಾನ್ಯ ಮುಸಲ್ಮಾನರ ದಾರಿ ತಪ್ಪಿಸಿದ ಮುಖಂಡರ ದೆಸೆಯಿಂದ ಅಸಂಖ್ಯಾತ ಹಿಂದು ಜೀವಗಳು ನೆಲೆ ಕಳೆದುಕೊಂಡುವು ಮತ್ತು ಚರಿತ್ರೆಯಲ್ಲಿ ಮತಗಳ ಹಿನ್ನೆಲೆಯ ವಿಭಜನೆ ನಡೆದೇ ಹೋಯಿತು. ಆಗ ಇನ್ನೂ ಆರೆಸೆಸ್ಸಿನ ಉಗಮ ಆಗಿರಲಿಲ್ಲ. ಹಾಗಾದರೆ "ಇವರಿಬ್ಬರನ್ನು ವೈರಿಗಳಂತೆ ಬಿಂಬಿಸುವ ಗುಂಪು" ಆರೆಸ್ಸೆಸ್ ಅಲ್ಲವೆಂದು ಸ್ಪಷ್ಟವಾಯಿತು. ಆ ಗುಂಪು ಯಾವುದೆಂದು ಮುಂದೆ ನೋಡುವ.
ಆರೆಸ್ಸೆಸ್ ಕ್ರಿ. ಶ. ೧೯೨೫ರಲ್ಲಿ ಸ್ಥಾಪನೆಗೊಂಡಿತು, ಆದರೆ ಹಿಂದುಗಳೇ ಪ್ರತ್ಯೇಕ ರಾಷ್ಟ್ರ, ಅವರಿಗಾಗಿ ಪ್ರತ್ಯೇಕ ದೇಶವೊಂದನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ಆರೆಸೆಸ್ಸಿನಿಂದ ಬಂದಿರಲಿಲ್ಲ. ನಿಜವಾಗಿ ನೋಡಿದರೆ ತೀವ್ರ ಮುಸ್ಲಿಂ ಉಗ್ರಗಾಮಿತ್ವದ ಹಿನ್ನೆಲೆಯನ್ನು ಹೊಂದಿದ ಮಲಬಾರ್ ಕಲಾಪದ ಪರಿಣಾಮವಾಗಿ ಆರೆಸ್ಸೆಸ್ ಸ್ಥಾಪನೆಗೆ ಪ್ರೇರಣೆ ದೊರಕಿತು. ಮಲಬಾರ್ ಕಲಾಪದ ವಿವರಗಳನ್ನು ಬರೆಯುವುದಿದ್ದರೆ ಅದೊಂದು ಪ್ರತ್ಯೇಕ ಅಧ್ಯಾಯವಾಗುತ್ತದೆ. ಮಲಬಾರ್ ಕಲಾಪ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವೆಂದು ನಂಬಿದ ಮುಗ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಮತ್ತು ಇನ್ನು ಕೆಲವರು ಅದು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವೆಂದು ಬಿಂಬಿಸುವುದರಲ್ಲಿ ನಿರತರಾದವರೂ ಇದ್ದಾರೆ.
ಮುಸಲ್ಮಾನರೇ ಪ್ರತ್ಯೇಕ ರಾಷ್ಟ್ರ, ಅವರಿಗಾಗಿ ಪ್ರತ್ಯೇಕ ದೇಶವೊಂದನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ದಾರಿ ತಪ್ಪಿದ ಮುಖಂಡರಿಂದ ಬಂದಿತು ಮತ್ತು ಸಾಮಾನ್ಯ ಮುಸಲ್ಮಾನ ಅದನ್ನು ಒಪ್ಪಿರಲಿಲ್ಲ. ಇಂಥ ದಾರಿ ತಪ್ಪಿದ ಮುಖಂಡರ ನಡುವೆಯೂ "ಹುಬ್ಬುಲ್ ವತನ್ ಮಿನಲ್ ಈಮಾನ್" ಎಂದು ದೇಶಕ್ಕಾಗಿ ಪಣತೊಟ್ಟ ಮುಸಲ್ಮಾನರನ್ನು ಸೃಷ್ಟಿಸಿದ ಇಮಾಮರುಗಳೂ ಇದ್ದರೆಂಬುದನ್ನು ಮರೆಯಲಾಗದು. ಆದರೆ ದಾರಿ ತಪ್ಪಿದ ಮುಖಂಡರ ಸ್ವರವೇ ತೀವ್ರವಾಗಿತ್ತು ಮತ್ತು ಪ್ರತ್ಯೇಕ ದೇಶದ ಸ್ಥಾಪನೆಯೇ ಆಗಿಹೋಯಿತು, ತನ್ಮೂಲಕ ಪ್ರಪಂಚದ ಇತಿಹಾಸ ಕಂಡು ಕೇಳರಿಯದ ದೌರ್ಜನ್ಯವೊಂದಕ್ಕೆ ಈ ದೇಶ ಸಾಕ್ಷಿಯಾಯಿತು. ಮತಗಳ ಆಧಾರದಲ್ಲಿ ವಿಭಜನೆಗೊಂಡ ಎರಡು ದೇಶಗಳು! ಆದರೆ ಮತಗಳ ಆಧಾರದಲ್ಲಿ ಪ್ರತ್ಯೇಕ ದೇಶಗಳನ್ನು ಬಿಟ್ಟುಕೊಡುತ್ತ ಸಾಗಿದರೆ ಕೊನೆಗೆ ಉಳಿದೀತು ಎಂಬ ಆತಂಕಕ್ಕೂ ದಾರಿಯಾಯಿತು. ಆ ಆತಂಕ ಕೆಲವೇ ದಶಕಗಳ ನಂತರ ಸತ್ಯವಾಯಿತು ಮತ್ತು ಕ್ರೈಸ್ತ ಮತದ ಆಧಾರದಲ್ಲಿ ಪ್ರತ್ಯೇಕ ದೇಶ ಬೇಕೆಂಬ ಕೂಗು ಈಶಾನ್ಯ ಮೂಲೆಯಿಂದ ಕೇಳಿಬಂದಿತು. ತಮ್ಮ ಆಚಾರ, ಅನುಷ್ಠಾನಗಳಿಂದ ಹಿಂದುಗಳೇ ಆಗಿದ್ದ ಸಿಕ್ಖರು ಪ್ರತ್ಯೇಕತೆಯನ್ನು ಅನುಭವಿಸತೊಡಗಿದರು. ಕ್ರಮೇಣ ಸಿಕ್ಖರು ತಮ್ಮ ಪ್ರತ್ಯೇಕತೆಯನ್ನು ಅನುಭವಿಸುವುದರ ಜೊತೆಗೆ ಪ್ರತ್ಯೇಕ ದೇಶದ ಬೇಡಿಕೆಯನ್ನೂ ಇಟ್ಟರು. ಇದಕ್ಕಾಗಿ ನಡೆದ ಹೋರಾಟಗಳು ಕೊನೆಗೆ ದೇಶದ ಪ್ರಮುಖ ನಾಯಕರನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಹೊರದೇಶದಲ್ಲಿದ್ದುಕೊಂಡು ಭಾರತಕ್ಕೆ ಸೆಡ್ಡು ಹೊಡೆಯುವ ಸಿಕ್ಖ ಗುಂಪುಗಳೂ ಸೃಷ್ಟಿಯಾದುವು.
"ಹುಬ್ಬುಲ್ ವತನ್ ಮಿನಲ್ ಈಮಾನ್" ಎಂಬ ಮಾತು ಖುರಾನಿನಲ್ಲಿ ಇಲ್ಲದಿದ್ದರೂ ಅದನ್ನು ಪ್ರಚಾರ ಮಾಡುವ ಮೂಲಕ ದೇಶಪ್ರೇಮವನ್ನು ಮೆರೆದ ಮಹಾನುಭಾವರನ್ನು ಈ ಸಂದರ್ಭದಲ್ಲಿ ನೆನೆಯುವುದು ಅನಿವಾರ್ಯ.
ವಿಭಜನೆ ಆಯಿತು, ಅತ್ತ ಕಡೆ ಏನಾಯಿತೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ.
ಹೀಗಿರುವಾಗ "ಈ ಇಬ್ಬರನ್ನು ಪರಸ್ಪರ ವೈರಿಗಳಂತೆ ಬಿಂಬಿಸುವುದರಲ್ಲಿ" ಆರೆಸ್ಸೆಸ್ಸಿನ ಪಾತ್ರ ಎಲ್ಲಿ ಆರಂಭಗೊಂಡಿತು, ಎಲ್ಲಿ ಕೊನೆಗೊಂಡಿತು ಎಂಬುದನ್ನು ಓದುಗರ "ಊಹೆಗೆ" ಬಿಡುತ್ತೇನೆ.
No comments:
Post a Comment