Monday, August 26, 2013

ಮಳೆ

ಮಳೆ

ಎಡೆಬಿಡದೆ ಸುರಿಯುವ ಮಳೆಗೆ
ಕೊಚ್ಚಿಹೋದುವು ಹಲವೂ
ಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆ

ಕೊನೆಯಿರದ ಸುರಿತದ ನಡುವೆ
ಕೊನೆಗಂಡಿತಂದು ಮಳೆಯೂ
ಇನ್ನೊಮ್ಮೆ ಬಾರದೇ ಆಷಾಢ ಮಾಸ

ಸುಡುವ ಬೇಗೆಯ ಬಿಸಿಗೆ
ಒಣಗಿ ಮರ-ಗಂಟಿಗಳು
ಇನ್ನೊಮ್ಮೆ ಕೊನರುವುದೇ ಕನಲಿರುವ ಕೊಂಬೆ

ತನ್ನದಿರೆ ತನ್ನದೆಂದೂ
ಅನ್ಯವಿರೆ ಪರವೆಂದೂ
ಅನ್ಯವನ್ನೊ ಳಗೊಂಡೀತೇ ಮುರುಟಿರುವ ಮಾನಸ

ವ್ರಣ

ವ್ರಣ

ನಿನ್ನನರಿತೆನು ಎಂದು
ತಿಳಿದಿದ್ದೆ ನಾನಂದು
ನಮ್ಮ ದೇಹಗಳ ನಾವರಿತುಕೊಂಡ ಹಾಗೆ

ಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆ
ಇನ್ನೊಂದು ಸ್ಪರ್ಶದಲಿ ನೋವನೀವಂತೆ
ಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನು

ಭ್ರಮೆ ಕಳಚಿತೊಂದು ದಿನ
ತಿಳಿಯಲಾರದೆ ಹೋದೆ
ನನ್ನ ದೇಹವನೇ ನಾನರಿಯಲಿಲ್ಲ

ಮೇಲುಹರಿವಿನ ಮಂಜು
ನಿಜದಲ್ಲಿ ಹಿರಿದೆಂದು
ಮಂಜುಗುಡ್ಡೆಯ ಗಾತ್ರಾ ನಾನರಿಯಲಿಲ್ಲ

ಹೊರಗೆ ಕಾಣುವ ಪೊರೆಯ
ಒಳಗನರಿಯದೆ ಹೋದೆ
ಒಳಗೆ ಬೆಳೆದಿದ್ದ ವ್ರಣಾ ನಾನರಿಯಲಿಲ್ಲ

ಮಂಜುಗುಡ್ಡೆ = iceberg

ಜೀವವಾಹ

ಜೀವವಾಹ

ಹಗಲಿರುಳು ಎಡೆಬಿಡದೆ
ನನ್ನೊಳಗೆ ನನ್ನಂತೆ
ಹರಿವ ಜೀವದ ವಾಹ ನೀನಲ್ಲವೇ

ಮಣ್ಣ ಕಣ-ಕಣದಿಂದ
ಸ್ಫುರಣಗೊಳೆ ಭವವಾಗಿ
ಅರಳ್ವ ಜೀವದ ವಾಹ ನೀನಲ್ಲವೇ

ಅಳವಿರದಾ ಕಾಶದಿಂದ
ಹರಿವ ಬಲ್ಝರಿಯಂತೆ
ಸುರಿವ ಜೀವದ ವಾಹ ನೀನಲ್ಲವೇ

ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟನೀಯುವ ವಾಹ ನೀನಲ್ಲವೇ

ಚಣಚಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನಲ್ಲವೇ

ಎಲ್ಲೆ

ಎಲ್ಲೆ ಮೀರಿದ ಕ್ಷಣವ
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ

ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು

ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು

ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು

Tuesday, August 13, 2013

ತಿರುಗಿನೋಡಿದ ಮೋರೆ

ತಿರುಗಿನೋಡಿದ ಮೋರೆ ಮರೆಯಾಗಿ ಹೋಯ್ತೇಕೆ
ತಿರುಗೆ ತಿರುತಿರುಗಿ ನೋಡದೇಕೆ

ಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು
ತನ್ನ ಮೆಯ್ಯ ಮಾಟವನ್ನು ತೋರದೇಕೆ

ಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳು
ತಂತಮ್ಮ ಗಮ್ಯಗಳ ಸೇರವೇಕೆ

ಕೊನೆಯ ಕೊಳ್ಳುವನ್ನಕ ಇಡಿದಿಡಿವ ಚಾಣಗಳು
ಅರೆಯಿಂದ ರೂಪೊಂದ ಕಡೆಯವೇಕೆ

ಮತ್ತೆ ಒರೆಯುವ ಮುನ್ನ ತಡವರಿಸಿ ಮಾತುಗಳು
ಪಿಸಿಯುತ್ತ ತಾವ್ತಾವೇ ಉಲಿಯವೇಕೆ

ಮತ್ತೆ ಕರೆಯುವ ಮುನ್ನ ಕರೆದಿದ್ದ ಧ್ವನಿಗಳು
ತಂತಮ್ಮ ಜಾಡುಗಳ ತೋರವೇಕೆ

ಕೊಡು ಗುರುವೇ ಹೊಸ ಕನಸುಗಳನ್ನು





'ಪಿಟಿ ದ ನೇಷನ್' ಎಂಬ ಖಲೀಲ್ ಗಿಬ್ರಾನ್ ಕವಿತೆಯ ಛಾಯಾನುವಾದವನ್ನು ಇಲ್ಲಿ ಓದಬಹುದು. ಮೂಲ ಕವಿತೆಯನ್ನೂ ಓದಿರಿ. ~ ಕೆ.ಪಿ. ಬೊಳುಂಬು

khalil-gibran-beauty-eternity


ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು

ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆಳ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏಳ್ಗೆಗಾಗೆಚ್ಚರಿಸು


ಕೊಡು ಗುರುವೇ ಹೊಸ ಗುರುವರ್ಯಕ್ಕಳ

ನಾಡಿನೊಳ್ಳಿತಿಗಾಗಿ ಹಾರಯಿಸುವವರನ್ನು

ಕೊಡು ಗುರುವೇ ಹೊಸ ಕನಸುಗಳನ್ನು

ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ



ಕನಸು

ಬತ್ತಿಹೋದ ಸಾರದಿಂದ

ಹೊಸೆದು ಹೊಸದೊಂದನು
ಹೊತ್ತಿ ಉರಿವ ದೀಪವಾಗಿ ನನ್ನಲೀಗ ಬೆಳಗಿಸು || ಪ ||


ಒಮ್ಮೆ ತೊಟ್ಟ ಬಾಣವನ್ನು

ಮರಳಿ ತೊಡದೆ ಇರುವಂಥ

ಮಹಾ ಶಪಥವೊಂದನು ನನ್ನಲೀಗ ಮಾಡಿಸು || ಅ. ಪ ||


ಅರಳಿದಂಥ ಮಲ್ಲಿಗೆ

ಹಳದಿ ಎರವಂತಿಗೆ

ಹೂಗಳಿಂದು ಕಾಣಿಕೆ ನಿನ್ನದೊಂದು ಸೇವೆಗೆ || ೧ ||


ನಿನ್ನ ಹೂಬಾಣಗಳು

ತುಂಟ ಕುಡಿನೋಟಗಳು

ಮಾಸದಂಥ ಗಾಯವ ನನ್ನಲಿಂದು ಮಾಡಿವೆ || ೨ ||


ನಿನ್ನ ಸವಿಮಾತುಗಳು

ನೆನಸದಂಥ ನೆನಕೆಗಳು

ಕಾಣದಂಥ ಕನಸನು ಕಾಣುವಂತೆ ಮಾಡಿವೆ || ೩ ||

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...