Sunday, June 22, 2025

ಪಾಕಿಸ್ಥಾನ ಪ್ರೇಮಿ ಡೊನಾಲ್ಡ್ ಟ್ರಂಪ್

 ರಾಷ್ಟ್ರಗಳೊಳಗಿನ ಪರಸ್ಪರ ಮೈತ್ರಿಗಳು, ಪೈಪೋಟಿಗಳು ಮತ್ತು ರಾಜಕೀಯದ ಬಗ್ಗೆ ಮಾತನಾಡುವಾಗ ನಾವು ಶತಮಾನಗಳ ಚಾರಿತ್ರಿಕ ಘಟನೆಯೊಂದನ್ನು ಗ್ರಹಿಸಿ ಅದರ ಸುತ್ತ ಸಮಸ್ತ ವಿದ್ಯಮಾನಗಳನ್ನು ಒಂದು ವಾಕ್ಯದಲ್ಲಿ ವಿವರಿಸುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಆದರೆ ಆ ಘಟನೆಗಳ ಹಿಂದಿರುವ ಅದಕ್ಕಿಂತ ಆಳವಾದ ಏನೋ ಒಂದನ್ನು ಗ್ರಹಿಸದಿರುತ್ತೇವೆ. ಯಾರಾದರೂ "ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಬಗ್ಗೆ ಮೆಚ್ಚುಗೆಯನ್ನು ಏಕೆ ತೋರಿಸುತ್ತಾನೆ?" ಅಥವಾ "ಯುನೈಟೆಡ್ ಸ್ಟೇಟ್ಸ್ ಭಾರತದ ಬಗ್ಗೆ ಏಕೆ ನಿರ್ಲಿಪ್ತವಾಗಿದೆ?" ಎಂದು ಕೇಳಿದರೆ ಅವರು ನಿಜವಾಗಿ ಕೇಳುತ್ತಿರುವುದು ಅದಕ್ಕಿಂತ ಆಳವಾದ ವಿಷಯವೆಂದು ಗ್ರಹಿಸಬೇಕು. ತೆರೆಮರೆಯ ಕಥೆಗಳನ್ನು, ಭಾವನೆಗಳನ್ನು, ಇತಿಹಾಸಗಳನ್ನು ಗ್ರಹಿಸದೆ ಇದನ್ನು ಅರ್ಥೈಸಿಕೊಳ್ಳುವುದು ಅಸಂಭವವೇ ಹೌದು.

ದೇಶವೊಂದು ಆರ್ಥಿಕವಾಗಿ ವಿಕಸಿಸುವ ಘಟ್ಟದಲ್ಲಿ ಅದು ಆರ್ಥಿಕತೆಯಲ್ಲಿ ಮುಂದುವರಿಯುವುದು ಮಾತ್ರವಲ್ಲದೆ ಆ ದೇಶದೆಡೆಗಿನ ಜಾಗತಿಕ ದೃಷ್ಟಿಕೋನವೂ ಬದಲಾಗತೊಡಗುತ್ತದೆ. ಜಾಗತಿಕ ಉಪಸ್ಥಿತಿಯಲ್ಲಿ ಅದು ನಿಜವಾಗಿ ಮೇಲುಮೇಲಕ್ಕೆ ಏರುವುದು ಗಮನಕ್ಕೆ ಬರುತ್ತದೆ. ಇದನ್ನು ಕೆಲವರು ಸಂತೋಷದಿಂದ ಸ್ವೀಕರಿಸಿದರೆ ಇನ್ನು ಕೆಲವರು ಭಯಭೀತರಾಗಬಹುದು, ಮತ್ತೂ ಕೆಲವರು ನಿರ್ಲಿಪ್ತರಾಗಿರಬಹುದು. ಭಾರತ ಈಗ ಬೆಳೆಯುತ್ತಿರುವ ದೇಶವಲ್ಲ, ಅದು ಪ್ರಜ್ವಲಿಸುತ್ತಿದೆ. ಹಳೆಯ ಕಾಲದ ವ್ಯವಸ್ಥೆಯಲ್ಲಿ ಎಂದಿಗೂ ಯೋಜಿಸಲಾಗದ ಸಂಗತಿಗಳು ಇಲ್ಲಿ ಘಟಿಸುತ್ತಲಿವೆ. ದೇಶವೊಂದು ತನ್ನ ವಿಧಿಯನ್ನು ತಾನೇ ನಿರ್ಣಯಿಸಿಕೊಳ್ಳುವುದು ಇಲ್ಲಿ ಗಮನಕ್ಕೆ ಬಂದಿದೆ. 

ಪಾಕಿಸ್ಥಾನವನ್ನು ನಾನು ಪ್ರೀತಿಸುತ್ತೇನೆ ಎನ್ನುವ ಟ್ರಂಪ್ ಇನ್ನೇನಾದರೂ ಗುರಿಯಿಟ್ಟುಕೊಂಡು ಇದನ್ನು ಹೇಳುತ್ತಿದ್ದಾನೆಯೇ ಎಂದು ಯೋಚಿಸಬೇಕು. ಪಾಕಿಸ್ಥಾನದ ಸೇನಾ ಮುಖ್ಯಸ್ಥನಿಗೆ ಪಾಕಿಸ್ಥಾನದ ಮೇಲಣ ಪರಮ ಪ್ರೀತಿಯಿಂದ ಊಟ ಬಡಿಸಿದ ಡೊನಾಲ್ಡ್ ಟ್ರಂಪ್ ನೋಬೆಲ್ ಪುರಸ್ಕಾರವನ್ನು ಗುರಿಯಾಗಿಟ್ಟುಕೊಂಡುದು ನಿಜವೇ ಆಗಿದ್ದರೆ ಆ ಪ್ರೀತಿಯನ್ನು ಈ ಬಗೆಯಲ್ಲಿ ವಿಶ್ಲೇಷಿಸಬಹುದು. ಒಂದು ದೇಶ ಇನ್ನೊಂದು ದೇಶವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ ಆ ಮೆಚ್ಚುಗೆಗೆ ಏನು ಬೆಲೆ ಮತ್ತು ಅದು ಏನು ಖರೀದಿಸುತ್ತದೆ ಎಂದು ಕೇಳಬೇಕಾಗುತ್ತದೆ. ಅದು ಪ್ರೀತಿಯೋ ಅಥವಾ ಹತೋಟಿಯೋ; ಅದು ನಿಜವಾದದ್ದೋ ಅಥವಾ ಸ್ವಂತ ಅನುಕೂಲಕ್ಕಾಗಿ ಮಾಡಿಕೊಂಡ ಸಂಬಂಧವೋ? ಇವು ಸರಳ ಪ್ರಶ್ನೆಗಳಲ್ಲ ಮತ್ತು ಅವುಗಳ ಉತ್ತರಗಳೂ ಸರಳವಾಗಿರಲೊಲ್ಲವು.ಸತ್ಯವೇನೆಂದರೆ ಶಕ್ತಿಶಾಲಿ ತನ್ನ ನೆಲೆಯಲ್ಲಿ ತಾನು ಸ್ಥಿತವಾಗಿರುತ್ತಾನೆ. ಅವನಿಗೆ ಯಾರ ಅನುಮತಿಯೂ ಬೇಕಾಗದು. ನಿಜವಾದ ಶಕ್ತಿಯೆಂಬುದು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ ಅಥವಾ ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. 

ಡೊನಾಲ್ಡ್ ಟ್ರಂಪ್ ಅವರಂತಹ ಯಾರಾದರೂ ಪಾಕಿಸ್ಥಾನವನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಆ ಪ್ರೀತಿ ಸರಸಮಯ ಪ್ರೇಮ ಸಂಭಾಷಣೆಯದಲ್ಲ, ತೋರಿಸಿದ ಪ್ರೀತಿ ಪ್ರೀತಿಯ ಬಗೆಗಿನದಲ್ಲ, ಅದು ಇತಿಹಾಸ ಅಥವಾ ಸ್ನೇಹದ ಬಗೆಗಿನದ್ದೂ ಅಲ್ಲ. ಇದು ಅನುಕೂಲಸಿಂಧು, ಇದು ರಾಜ್ಯತಂತ್ರಕ್ಕೆ ಸಂಬಂಧಪಟ್ಟುದು ಮತ್ತು ಚದುರಂಗದ ಹಲಗೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ಚಾತುರ್ಯವೆಂದು ಯೋಚಿಸಬೇಕು. ರಾಜಕೀಯ ಜಗತ್ತಿನಲ್ಲಿ ಪ್ರೀತಿ ಪದಗಳಿಗಿಂತ ಹೆಚ್ಚಾಗಿ ಕ್ರಿಯೆಗಳ ಮೂಲಕ ಮಾತನಾಡುತ್ತದೆ. ಒಬ್ಬ ಪ್ರಭಾವಿ ವ್ಯಕ್ತಿ ವೇದಿಕೆಯ ಮೇಲೆ ನಿಂತು "ನಾನು ಈ ದೇಶವನ್ನು ಪ್ರೀತಿಸುತ್ತೇನೆ" ಎಂದು ಹೇಳಿದಾಗ ಅವನ ನಿಜವಾದ ಉದ್ದೇಶ ಸುತ್ತಲಿನ ದೇಶಗಳಿಗೆ ಸೂಚನೆ ಕೊಡುವುದೇ ಆಗಿರುತ್ತದೆ. ಇದು ಆಟದ ಭಾಗವಾದ ಚಲನೆ ಮತ್ತು ನಾವು ನೋಡುತ್ತಿರುವುದು ಬಹಿರಂಗವಾದ ಚಲನೆಗಳನ್ನು ಮಾತ್ರ. ಹೊರಗೆ ಕಂಡುಬರುವುದು ನಗುವ ಮುಖಗಳು, ವ್ಯಂಗ್ಯವಾಡುವ ನಾಲಗೆಗಳು ಮತ್ತು ಬಾಹ್ಯ ಪರಿಣಾಮಗಳು ಮಾತ್ರ. ಹಾಗಾದರೆ ಪಾಕಿಸ್ಥಾನ ಎಲ್ಲಿದೆ ಎಂದು ಕೇಳಿದರೆ ಪಾಕಿಸ್ಥಾನವು ಈ ಮೊದಲು ಎಲ್ಲಿತ್ತೋ ಈಗಲೂ ಅದೇ ಸ್ಥಾನದಲ್ಲಿದೆ. ಅದು ಎಷ್ಟೇ ಆಂತರಿಕ ಹೋರಾಟಗಳನ್ನು ಕಂಡಿರುವ ದೇಶವಾದರೂ ಆರ್ಥಿಕತೆಯಲ್ಲಿ ಎಷ್ಟೇ ಕುಸಿದುಹೋಗಿದ್ದರೂ ಜಾಗತಿಕ ರಾಜ್ಯತಂತ್ರದ ಪ್ರಮುಖ ನೆಲೆಗಳಾದ ಅಫ್ಘಾನಿಸ್ಥಾನ, ಚೀನಾ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿರುವ ದೇಶ ಅದು. ಜನರು ಇಷ್ಟಪಟ್ಟರೂ ಇಷ್ಟಪಡದಿದ್ದರೂ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ದೇಶಗಳಲ್ಲಿ ಒಂದಾಗಿದೆ. ಅವರ ಪ್ರೀತಿಯಿದ್ದರೆ ಯಾರಿಗಾದರೂ ಎಂದಿಗಾದರೂ ಪ್ರಯೋಜನ ಆಗಬಲ್ಲುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.


ಪಾಕಿಸ್ಥಾನವನ್ನು ಪ್ರೀತಿಸುವವರು ಭಾರತದಲ್ಲಿ ಯಾವ ಕೊರತೆ ಕಂಡಿದ್ದಾರೆ ಎಂದು ಚಿಂತಿಸುವ ಅಗತ್ಯವೇ ಇಲ್ಲ. ಭಾರತ ನೆತ್ತಿಯ ಮೇಲಿನ ಸೂರ್ಯ. ಇದು ಇಲ್ಲಿನ ಲಭ್ಯ ತಂತ್ರಜ್ಞಾನದಿಂದಲೂ, ಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚಿನ ತೊಡಗುವಿಕೆಯಿಂದಲೂ, ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾಗಿಯಾಗುವ ರೀತಿಯಿಂದಲೂ ವೇದ್ಯವಾಗುತ್ತದೆ. ಭಾರತದ ಪರವಾದ ಮತ್ತು ಭಾರತದ್ದಾದ ಧ್ವನಿಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ಗಟ್ಟಿಯಾಗಿಯೂ ಹೆಮ್ಮೆಯಿಂದಲೂ ಮೊಳಗುತ್ತಲಿರುವುದು ಇದೇ ಮೊದಲಿಗೆ ಎಂಬಂತೆ ಗೋಚರಿಸುತ್ತಲಿದೆ. ಇದು ನಿಶ್ಶಬ್ದವಾದ ವಿಕಸನವಲ್ಲ; ಇದು ಪರಾಕ್ರಮಶಾಲಿಯೂ ಉತ್ಸಾಹಭರಿತವೂ ಆಧ್ಯಾತ್ಮಿಕವೂ ಬೌದ್ಧಿಕವೂ ಆದ ವಿಕಸನವಾಗಿದೆ. ಇದು ಹೊಸದಾದ ಆತ್ಮವಿಶ್ವಾಸ; ಇಂದಿನ ದಿನಮಾನಗಳಲ್ಲಿ ಭಾರತವನ್ನು ತಡೆಯಬಲ್ಲ ಶಕ್ತಿ ಈ ಲೋಕದಲ್ಲಿಲ್ಲ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ

No comments:

Post a Comment

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...