Thursday, January 16, 2014

ಬಂದೇ ಬರುವುದು

ಬಂದೇ ಬರುವುದದೊಂದು ದಿನ ಭೂಮಿಯೊಳು
ಜೀವಮೌನದ ಭಾವ ಸಾಂದ್ರತೆಯನಡರ್ದು
ಕಣ್ಣ ಪಟಲದ ಮುಂದೆ ಬಿರಿದು ನಕ್ಷತ್ರಗಳು
ಉದಯದೊಳು ಮಗುದೊಮ್ಮೆ ದಿನಚರಿಯ ಬಿಡದೆ

ಕಡಲ ತೀರದೊಳು ಬಡಿ-ಬೀಸುತಲೆಗಳು
ನೋವಿನೊಳೂ ನಲಿವಿನೊಳೂ ಭೇದಗಳನ್ನೆಣಿಸದೆಯೆ
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ಅಪರೂಪದಾ ತಾಣ ಅಪರೂಪದಾ ಜೀವ
ಅಂತರಾತ್ಮದ ಭಾವ ನಿಜದಿ ಬಯಸಿದುದನ್ನುಳಿದು
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು

ತೇಲುದೋಣಿ

ತೇಲುದೋಣಿಯ ತೆರದೆ ತೇಲುತೇಲುತ ಸಾಗಿ
ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ
ಹಗರಣದ ರಗಳೆಯದಾವುದೊಂದನ್ನರಿಯದಿರೆ ||

ತೀರವಿಲ್ಲದ ಕಡಲ ನಡುನಡುವೆ ಮೌನದಲಿ
ಮಂದಹಾಸದ ಗಾನ ಗುನುಗುನುಗುತ್ತಿರುವಾಗ
ಕೇಳಬಯಸಿದೆ ಪದವ ಮೀರಿದ ಮಧು ಮಧುರತಮ ಗಾನ ||

ಕಾಲ ಬಾರದದೇಕೋ ಕಾರ್ಯ ತೀರದದಿನ್ನೇಕೋ
ಸಂಜೆಯಾಗಸ ಕೆಂಪು ಕೆಂಪನೆ ಮಸೆವಾಗ
ಮಸುಮಸುಕಿನಾ ಬೆಳಕು ಮೋಡದಲಿ ಮರೆಗೊಳಲು
ತೇಲ್ವ ದೋಣಿಯ ಹುಟ್ಟದಲುಗಾಡದಿರದೇ ||

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...