Saturday, August 16, 2025

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ


"ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ ಭಾಷೆ. ಆಡುವ ಭಾಷೆಗೂ ಬರೆಯುವ ಭಾಷೆಗೂ ಬಹಳ ವ್ಯತ್ಯಾಸವಿದೆ."

ಎನ್ನುತ್ತಾರೆ.



ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎನ್ನುವುದಾದರೆ ಮಲೆಯಾಳ, ಉರ್ದು ಮೊದಲಾದ ಭಾಷೆಗಳು ಕೃತಕ ಭಾಷೆಗಳೆಂದೇ ಆಗುತ್ತದೆ. ಇಂದಿನ ಮಲೆಯಾಳ ಭಾಷೆಯ ವಿಷಯಕ್ಕೆ ಬರುವುದಾದರೆ, ಆಧುನಿಕ ಮಲೆಯಾಳ ಭಾಷೆ ನಿಂತಿರುವುದು ಕೇರಳ ಪಾಣಿನೀಯದ ಆಧಾರದಲ್ಲಿ ಮತ್ತು ಕೇರಳ ಪಾಣಿನೀಯ ಅತ್ಯಂತ ಕೃತಕವಾದುದು ಮತ್ತು ಸಂಸ್ಕೃತ ಮತ್ತು ಪ್ರಾಕೃತ ವ್ಯಾಕರಣಗಳನ್ನು ಆಧರಿಸಿ ಬರೆದುದಾಗಿದೆ. ಕೇರಳ ಪಾಣಿನೀಯದ ರಚನೆಯಲ್ಲಿ ತೌಲನಿಕವಾದ ದಾಕ್ಷಿಣಾತ್ಯ ವ್ಯಾಕರಣವನ್ನೂ ಗಮನದಲ್ಲಿ ಇರಿಸಿಕೊಳ್ಳಲಾಗಿದೆಯೆಂದು ಹತ್ತೊಂಬನೆಯ ಶತಮಾನದ ಕೊನೆಯ ಭಾಗದಲ್ಲಿ ಆ ಗ್ರಂಥವನ್ನು ರಚಿಸಿದ ರಚನಕಾರರೇ ಹೇಳಿದ್ದಾರೆ. ಹಾಗಾಗಿ ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎಂಬ ಮಾನದಂಡವನ್ನು ಇಟ್ಟುಕೊಂಡರೆ ಇಂದಿನ ಮಲೆಯಾಳ ಭಾಷೆಯನ್ನು ಕತೃಕ ಭಾಷೆಯೆಂದೇ ಕರೆಯಬೇಕು.


ಖಡಿಬೋಲಿ ವ್ಯಾಕರಣದ ಕಟ್ಟುಗೆಯಲ್ಲಿ ಅರೇಬಿಕ್ ಮತ್ತು ಪಾರಸಿ ಭಾಷೆಯ ಮೇಲ್ಮೈ ಹೊದೆಯಿಸಿದ; ಭಾಷೆಯಲ್ಲದ ಭಾಷೆ ಉರ್ದು. ಖಡಿಬೋಲಿ ವ್ಯಾಕರಣ ಎನ್ನುವಂಥದ್ದು ಸಂಸ್ಕೃತ ಮೂಲದ ಇಂಡಿಕ್ ವ್ಯಾಕರಣ ವ್ಯವಸ್ಥೆಯಲ್ಲಿ ನೆಲೆಗೊಂಡದ್ದು ಮತ್ತು ಅದು ಪ್ರಾಕೃತ ಮೂಲವನ್ನು ಹೊಂದಿದೆ. ಉರ್ದು ಭಾಷೆ ಸಹಜವಾಗಿ ಬೆಳೆದುಬಂದ ಭಾಷೆ ಎನ್ನುವವರು ಇಂಡಿಕ್ ವ್ಯಾಕರಣ ವ್ಯವಸ್ಥೆಯನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. 

ಮುಂದೆ ಹೋಗಿ 
"ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಮಾತೃಭಾಷೆ ಆಗಿ ಬಳಸುವ ಜನಾಂಗಗಳು ಇವೆ"
ಎನ್ನುತ್ತಾರೆ.


 ಇದು ವಾಸ್ತವಕ್ಕೆ ವಿರುದ್ಧವಾದುದು. ಆಭಿಜಾತ್ಯ ಗ್ರೀಕ್ ಇಂದು ಬಳಕೆಯಲ್ಲಿ ಇಲ್ಲ ಮತ್ತು ಇಂದು ಬಳಕೆಯಲ್ಲಿರುವ ಆಧುನಿಕ ಗ್ರೀಕ್ ಭಾಷೆಗೂ ಪರಸ್ಪರ ಸಾಂಗತ್ಯವಿಲ್ಲ. ಪ್ರಾಚೀನ ಗ್ರೀಕಿನಲ್ಲಿ ಹೇಳಿದ ಹೇಳಿಕೆ ಅರ್ಥವಾಗಬೇಕೆಂದಿದ್ದರೆ ಆಧುನಿಕ ಗ್ರೀಕ್ ಮಾತನಾಡುವವನು ಪ್ರಾಚೀನ ಗ್ರೀಕ್ ಭಾಷೆಯನ್ನು ಪ್ರತ್ಯೇಕವಾಗಿ ಕಲಿಯಬೇಕು. ಹಾಗೆಂದರೆ ಆಧುನಿಕ ಹಿಂದಿ ಭಾಷೆಗೂ ಸಂಸ್ಕೃತಕ್ಕೂ ಇರುವ ಅಂತರದಷ್ಟೇ ಅಗಾಧವಾದ ಅಂತರ ಪ್ರಾಚೀನ ಗ್ರೀಕ್ ಭಾಷೆಗೂ ಆಧುನಿಕ ಗ್ರೀಕ್ ಭಾಷೆಗೂ ನಡುವೆ ಇದ್ದುಕೊಂಡಿದೆ ಎನ್ನುವಾಗ ಪ್ರಾಚೀನ ಗ್ರೀಕ್ ಇಂದಿಗೂ ಬಳಕೆಯಲ್ಲಿದೆ ಎನ್ನುವುದು ಅಸತ್ಯವೆನಿಸುತ್ತದೆ.

ಸಂಸ್ಕೃತ ಯಾರಿಗೂ ಮಾತೃಭಾಷೆ ಅಲ್ಲವೇ? ೨೦೧೧ರ ಜನಗಣತಿಯಲ್ಲಿ ೧೪,೧೩೫ ಜನರು ಸಂಸ್ಕೃತವನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದ್ದಾರೆ. ೨೦೧೮ರ ಹೊತ್ತಿಗೆ ಈ ಸಂಖ್ಯೆ ೨೪,೮೨೧ ಆಗಿದೆ. ಪೂರಕ ಮಾಹಿತಿಗಳನ್ನೂ ಗಮನಿಸಬಹುದು. (ಮಾಹಿತಿಯಲ್ಲಿ ಉದ್ಧರಿಸಲ್ಪಟ್ಟ ವಾರ್ತಾ ಲೇಖನಗಳು ನೆಗೆಟಿವ್ ಆಗಿದ್ದರೂ ವಿಷಯ ಹೂರಣವನ್ನು ಗ್ರಹಿಸಲಿಕ್ಕೆ ಇದು ಸಾಲುತ್ತದೆ.) ೧


ಸಂಸ್ಕೃತ ಸಾರ್ವತ್ರಿಕ ಪ್ರಯೋಜನಕ್ಕೆ ಒದಗಬಲ್ಲುದು ಮತ್ತು ಅದು ಸನಾತನ ಧಾರ್ಮಿಕ ವ್ಯವಸ್ಥೆಯನ್ನು ಮೀರಿಯೂ ಅದು ನೆಲೆಗೊಂಡಿದೆ. ಸಂಸ್ಕೃತಕ್ಕೆ ಸಾವಿಲ್ಲ, ಸಂಸ್ಕೃತಕ್ಕೆ ಮಿತಿಯೂ ಇಲ್ಲ. ಮತಕ್ಕೆ ಸೀಮಿತವಾದ ಭಾಷೆ ಮತ ಇರುವಷ್ಟು ದಿನ ಇರಬಲ್ಲುದು. 


ಉಲ್ಲೇಖಗಳು

 ೧. https://www.cnbctv18.com/india/only-24821-people-in-india-have-sanskrit-as-mother-tongue-govt-data-14819891.htm
 

 ಕೃಷ್ಣಪ್ರಕಾಶ ಬೊಳುಂಬು

 #ಸಂಸ್ಕೃತ 

Friday, August 15, 2025

ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?

 ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?



ರಾಹುಲ್ ಗಾಂಧಿ ನಮ್ಮ ದೇಶದ ಮಿಲಿಟರಿಯನ್ನು ನಂಬದಿದ್ದರೂ ಚೀನಾ, ಪಾಕಿಸ್ತಾನ ಮತ್ತು ಅಮೇರಿಕವನ್ನು ನಂಬುತ್ತಾನೆ. ಹಾಗೆಯೇ ರಾಹುಲ್ ಗಾಂಧಿ ನ್ಯಾಯಾಲಯಗಳನ್ನು ನಂಬದಿದ್ದರೂ ತನಗೆ ಅಗತ್ಯವಿದ್ದರೆ ಮಾತ್ರ ನ್ಯಾಯಾಲಯಗಳ ಆದೇಶಗಳನ್ನು ಎತ್ತಿ ಹಿಡಿಯುತ್ತಾನೆ. 

ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ನಂಬಿಕೆ ಕಳೆದುಕೊಂಡಿದ್ದಾನೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಮತ್ತು ಅದನ್ನು ಮಾಡಿದ್ದು ಬಿಜೆಪಿ ಎಂಬ ಹೇಳಿಕೆಯೂ ಇದರ ಒಂದು ಭಾಗವಾಗಿತ್ತು.

ಸುಳ್ಳು ಮಾಹಿತಿಯನ್ನು ತರುವ ಮೂಲಕ ತನಗೆ ತಾನೇ ಕೊಡಲಿಯೇಟು ಕೊಟ್ಟುಕೊಂಡ ಪರಿಸ್ಥಿತಿ ಈಗ ರಾಹುಲ್ ಗಾಂಧಿಯದ್ದಾಗಿದೆ. ಇಷ್ಟೇ ಸಾಲದೆಂಬಂತೆ, ತನ್ನ ಸ್ವಂತ ಕ್ಷೇತ್ರ ರಾಯ್ ಬರೇಲಿ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಅವರ ವಯನಾಡ್ ಕ್ಷೇತ್ರ ಸೇರಿದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ ಎಂದು ಗೋಳಿಡುವ ಮೂಲಕ ಬಿಜೆಪಿಯನ್ನು ಎದುರಿಸಲು ಹವಣಿಸುತ್ತಿದ್ದಾನೆ. 

ರಾಹುಲ್ ಗಾಂಧಿ ಸ್ಫೋಟಿಸಿದ ಅಣು ಬಾಂಬ್ ಬಿಜೆಪಿಗೆ ಇನ್ನೊಂದು ಅವಕಾಶವನ್ನು ತೆರೆದುಕೊಟ್ಟಿರುವುದು ಇಂದಿನ ವಾಸ್ತವ.

NRC ಅಥವಾ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೆ ತರುವ ಮೂಲಕ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಕೂಡಲೆ ಗುರುತಿಸಿ ಅವರಿಗೆ ದಾರಿತೋರಿಸುವುದು ಜಾಗರೂಕ ಸರಕಾರದ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲಿಕ್ಕೆ ಸಂವಿಧಾನದ ಪ್ರಕಾರ ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (S.I.R) ನಡೆಸುವ ಅವಕಾಶ ಇದೀಗ ಒದಗಿಬಂದಿದೆ. ಅದಾದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಮತಗಣನೆ ಮಾಡಿ ನಾಗರಿಕ ನೋಂದಣಿಯನ್ನು ರಚಿಸಲು ಅವಕಾಶಗಳಿವೆ. 

 ಕೃಷ್ಣಪ್ರಕಾಶ ಬೊಳುಂಬು

# ರಾಹುಲ್ ಗಾಂಧಿ


Wednesday, August 13, 2025

ಕಪಿಲವಸ್ತು

 ಕಪಿಲವಸ್ತು

ಅದೊಂದು ಪ್ರಶಾಂತ ಸುಂದರವಾದ ನಗರ. ಅಲ್ಲಿ ಒಂದಾನೊಂದು ಕಾಲದಲ್ಲಿ ಮಹಾ ತಪಸ್ವಿ ಕಪಿಲ ವಾಸಿಸುತ್ತಿದ್ದನು. ಆಕಾಶದ ಭಾಗವೊಂದನ್ನು ಕೆತ್ತಿ ಅದನ್ನು ನಿರ್ಮಿಸಲಾಗಿದೆಯೆಂಬಂತೆ ಕಂಡುಬರುತ್ತಿತ್ತು. ನಗರವನ್ನು ಸುತ್ತುವರಿದಿದ್ದ ಅನೇಕ ಕಟ್ಟಡಗಳ ಗೋಡೆಗಳು ಬೆಳಕಿನ ಪುಂಜಗಳಂತೆ ಕಂಗೊಳಿಸುತ್ತಿದ್ದುವು. ಮನೆಗಳು ಮತ್ತು ಉದ್ಯಾನಗಳು ದೈವಿಕ ಕಳೆಗಳನ್ನು ಹೊರಹೊಮ್ಮಿಸುತ್ತಿದ್ದುವು. ಎಲ್ಲೆಡೆ ಅಮೂಲ್ಯವಾದ ಮುತ್ತುರತ್ನಗಳ ಹೊಳಪು ನೋಡುಗರ ಮನಸೆಳೆಯುತ್ತಿದ್ದುವು. ರಾತ್ರಿಯ ಬೆಳದಿಂಗಳಿನಲ್ಲಿ ನಗರದ ಗೋಪುರಗಳು ಸರೋವರದ ನಡುವಣ ನೈದಿಲೆ ಹೂವುಗಳಂದದಲ್ಲಿ ಮೆರೆಯುತ್ತಿದ್ದುವು. ಹಗಲಿನ ಹೊತ್ತು ಮಹಡಿಗಳು ಚಿನ್ನದ ಕಾಂತಿಯ ಸೂರ್ಯನ ಬೆಳಕು ಸೋಕಿದಾಗ ಆ ನಗರವು ಕಮಲದ ನದಿಯಂತೆ ರಮಣೀಯವಾಗಿದ್ದಿತು.


ರಾಜ ಶುದ್ಧೋದನ ಕಪಿಲವಸ್ತುವಿನ ರಾಜ. ಅವನು ಅದರ ಅತ್ಯಂತ ಪ್ರಕಾಶಮಾನವಾದ ಆಭರಣವೂ ಆಗಿ ಮೆರೆಯುತ್ತಿದ್ದನು. ಅವನು ಅತ್ಯಂತ ದಯಾವಂತ, ಉದಾರ, ವಿನಮ್ರ ಮತ್ತು ನ್ಯಾಯಪರನಾಗಿದ್ದವನು. ಅವನು ತನ್ನ ಭೀಕರ ಶತ್ರುಗಳನ್ನು ಹಿಂಬಾಲಿಸಿ ಹೊಡೆದ ಧೈರ್ಯಶಾಲಿ. ಇಂದ್ರನ ವಜ್ರಾಯುಧದ ಆಘಾತಕ್ಕೆ ನಲುಗಿದ ಅಸುರರ ಪಡೆಯಂತೆ ಅವರು ಅವನೊಂದಿಗೆ ಸೋತು ನಿರ್ವಿಣ್ಣರಾದರು. ಸೂರ್ಯನ ತೀಕ್ಷ್ಣ ಕಿರಣಗಳಿಂದ ಕತ್ತಲೆ ಕರಗಿದಂತೆ ದುಷ್ಟರು ಅವನ ಪರಾಕ್ರಮದ ಮುಂದೆ ಸೋತು ಶರಣಾದರು. ಅವನು ಲೋಕಕ್ಕೆ ಬೆಳಕನ್ನು ತಂದನು ಮತ್ತು ಅವನು ತನ್ನ ಆಪ್ತರಾದವರಿಗೆ ನಿಜವಾದ ಮಾರ್ಗವನ್ನು ತೋರಿಸಿದನು. ಅವನ ವಿವೇಕ ಮತ್ತು ಪ್ರಜ್ಞಾವಂತಿಕೆ ಅವನಿಗೆ ಅನೇಕ ಧೈರ್ಯಶಾಲಿಗಳೂ ವಿವೇಚನಾಶೀಲರೂ ಆದ ಸ್ನೇಹಿತರನ್ನು ಗಳಿಸಿಕೊಟ್ಟಿತು. ನಕ್ಷತ್ರಗಳ ಬೆಳಕು ಚಂದ್ರನ ಪ್ರಕಾಶವನ್ನು ತೀವ್ರಗೊಳಿಸಿದಂತೆ ಅವರ ತೇಜಸ್ಸು ಅವನ ವೈಭವವನ್ನು ಹೆಚ್ಚಿಸಿತು. ( ಅತ್ಯಂತ ಪ್ರಭಾಯುತನಾದ ನಕ್ಷತ್ರಕ್ಕೆ ಸೂರ್ಯನೆಂದು ಹೆಸರು)


 ಕೃಷ್ಣಪ್ರಕಾಶ ಬೊಳುಂಬು

#ಕಪಿಲವಸ್ತು, #ಶುದ್ಧೋದನ 

Saturday, August 2, 2025

ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ

 ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ





ಅಳಿಯ ಸಂತಾನ ಕಟ್ಟು ಭೂತಾಳ ಪಾಂಡ್ಯನಿಂದ ಆರಂಭವಾದುದಲ್ಲ. ಪ್ರಸಕ್ತ ಕಾಲಮಾನ 1441ರಿಂದ 1444ರವರೆಗೆ ತುಳುವವನ್ನಾಳಿದ ಕುಲಶೇಖರನು ಅಧಿಕಾರವನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಟ್ಟು ತನ್ನ ಅಲೂಪ ವಂಶದಲ್ಲಿ ಅಳಿಯ ಸಂತಾನ ಕಟ್ಟನ್ನು ಜಾರಿಗೆ ತಂದನು ಮತ್ತು ಪ್ರಸಕ್ತ ಕಾಲಮಾನ 1506ರಲ್ಲಿ ಕೆಳದಿಯ ರಾಜನಾಗಿದ್ದ ಚೌಡಪ್ಪ ನಾಯಕನು 'ಅಳಿಯ ಸಂತಾನ ಕಟ್ಟಿ'ಗೆ ಶಿಲಾಶಾಸನದ ಮುಖಾಂತರ ಮುದ್ರೆಯೊತ್ತಿದನು. ಹೀಗೆ ಸುಮಾರು ಹದಿಮೂರನೆಯ ಶತಮಾನದವರೆಗೆ ಬರಿಯ ಪದ್ಧತಿಯಾಗಿದ್ದ 'ಅಳಿಯ ಸಂತಾನ ಕಟ್ಟು' ಕ್ರಮೇಣ ರಾಜರುಗಳ ಮನ್ನಣೆಗೆ ಪಾತ್ರವಾಗಿ ಅಲೂಪ ರಾಜರುಗಳಿಂದ ಸ್ವೀಕರಿಸಲ್ಪಟ್ಟು ಕೆಳದಿಯ ರಾಜರ ಅಂಗೀಕಾರ ಮುದ್ರೆಯನ್ನೂ ಪಡೆದು  ಪ್ರಸಕ್ತ ಕಾಲಮಾನ ಹದಿನಾರನೆಯ ಶತಮಾನದಿಂದ ಅದೊಂದು ರಾಜಶಾಸನವಾಗಿ ಪರಿಣಮಿಸಿರುವುದು ಚರಿತ್ರೆಯ ಭಾಗ. 



 ಕೃಷ್ಣಪ್ರಕಾಶ ಬೊಳುಂಬು

#ಪಾದೂರು ಗುರುರಾಜ ಭಟ್ಟರು, #ತುಳುನಾಡು, #ಭೂತಾಳ ಪಾಂಡ್ಯ 

Wednesday, July 30, 2025

ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ಬರೆದ ಪತ್ರದ ಪೂರ್ಣ ಪಠ್ಯ: ಅನುವಾದ


ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ಬರೆದ ಪತ್ರದ ಪೂರ್ಣ ಪಠ್ಯ: ಅನುವಾದ 


ಕಳೆದ ಮಾರ್ಚ್ 25ರಿಂದ ಪೂರ್ವ ಬಂಗಾಳದಲ್ಲಿ ಮತ್ತು ಭಾರತದಲ್ಲಿ ನಡೆದ ಘಟನೆಗಳ ದುರಂತ ಮತ್ತು ಅಸಹನೀಯ ಪರಿಣಾಮಗಳ ಬಗ್ಗೆ ಭಾರತ ಸರ್ಕಾರವು ನಿಮ್ಮ ಸರ್ಕಾರಕ್ಕೆ ಮತ್ತು ನಿಮ್ಮ ಜನರಿಗೆ ಮಾಹಿತಿ ನೀಡಬಯಸುತ್ತೇವೆ.  ಇಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಕುರಿತು ನಮ್ಮ ರಾಜತಾಂತ್ರಿಕ ಪ್ರತಿನಿಧಿಗಳ ಮೂಲಕ ನಾವು ನಿಮಗೆ ಕಾಲಕಾಲಕ್ಕೆ ವಿವರಿಸುತ್ತಲೇ ಬಂದಿದ್ದೇವೆ. ಪೂರ್ವ ಬಂಗಾಳದಲ್ಲಿ ಪಾಕಿಸ್ಥಾನ ಸರ್ಕಾರವು ಅನುಸರಿಸಿದ ದಮನಕಾರಿ, ಕ್ರೂರ ಮತ್ತು ವಸಾಹತುಶಾಹಿ ನೀತಿಯು ಮಾರ್ಚ್ 25, 1971 ರಿಂದ ನರಮೇಧ ಮತ್ತು ಬೃಹತ್ ಹಿಂಸಾಚಾರದಲ್ಲಿ ಕೊನೆಗೊಂಡಿತು. ಇದು ನಿಮಗೆ ತಿಳಿದಿರುವಂತೆ 10 ಮಿಲಿಯ ಪೂರ್ವ ಬಂಗಾಳಿ ಪ್ರಜೆಗಳು ಭಾರತಕ್ಕೆ ವಲಸೆ ಹೋಗಲು ಕಾರಣವಾಗಿದೆ ಮತ್ತು ಅಂತಹವರ ಸಂಖ್ಯೆ ಇನ್ನೂ ಹೆಚ್ಚುತ್ತಲಿದೆ.

ಈ ಘಟನೆಗಳ ಹೊರೆಯನ್ನು ನಾವು ಹೊತ್ತಿದ್ದೇವೆ ಮತ್ತು ಅಂತಹ ಸಂದರ್ಭಗಳಲ್ಲಿ ಯಾವುದೇ ದೇಶ ಎದುರಿಸಬಹುದಾದ ದೊಡ್ಡ ಒತ್ತಡವನ್ನು ತಡೆದುಕೊಳ್ಳುತ್ತಿದ್ದೇವೆ. ಪಾಕಿಸ್ಥಾನ ನೀಡುತ್ತಿರುವ ನಿರಂತರ ಪ್ರಚೋದನೆಗಳ ನಡುವೆಯೂ ನಾವು ಅತ್ಯಂತ ಸಂಯಮದಿಂದ ವರ್ತಿಸಿದ್ದೇವೆ.

ಪರಿಸ್ಥಿತಿಯ ವಾಸ್ತವಗಳ ಬಗೆಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ನಾವು ತಿಳಿಸಬಯಸುವುದು ಏನೆಂದರೆ: ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ನಮ್ಮ ಪ್ರಯತ್ನಗಳು ಮತ್ತು ನನ್ನ ಸಹೋದ್ಯೋಗಿಗಳು ಮತ್ತು ನಾನು ಕೈಗೊಂಡ ಭೇಟಿಗಳು ಯಾವುದೇ ಫಲಿತಾಂಶಗಳನ್ನು ನೀಡಿಲ್ಲ. ಪೂರ್ವ ಬಂಗಾಳದ ಜನರ ಚುನಾಯಿತ ನಾಯಕರೊಂದಿಗೆ ನೇರವಾಗಿ ವ್ಯವಹರಿಸಲು ಮತ್ತು ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಸಾಧಿಸಲು ಅಧ್ಯಕ್ಷ ಯಾಹ್ಯಾ ಖಾನ್ ಅವರನ್ನು ಮನವೊಲಿಸಲು ವಿಶ್ವದ ರಾಜಕಾರಣಿಗಳ ವಿವೇಚನಾಶೀಲ ಸಲಹೆಗಳು ಸಫಲವಾಗಲಿಲ್ಲ.

ಪಾಕಿಸ್ಥಾನದ ಯುದ್ಧೋತ್ಸುಕತೆಯನ್ನು ಕುರಿತ ನಿರ್ವಿವಾದವಾದ ಪುರಾವೆಗಳು ಈಗ ನಮಗೆ ದೊರೆತಿವೆ. ಡಿಸೆಂಬರ್ 3 1971 ರಂದು ಅಪರಾಹ್ನ ಅಧ್ಯಕ್ಷ ಯಾಹ್ಯಾ ಖಾನ್ ನೇತೃತ್ವದ ಪಾಕಿಸ್ಥಾನ ಸರ್ಕಾರ ತನ್ನ ಪಶ್ಚಿಮ ಗಡಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡಲು ಆದೇಶಿಸಿತು. ಇದಾದ ನಂತರ ಡಿಸೆಂಬರ್ 4 1971 ರ ಬೆಳಿಗ್ಗೆ ಪಾಕಿಸ್ಥಾನ ಸರ್ಕಾರವು ಭಾರತದ ವಿರುದ್ಧ ಯುದ್ಧ ಸಾರುವುದಾಗಿ ಘೋಷಿಸುವ ಅಸಾಧಾರಣ ಗೆಜೆಟ್ ಪ್ರಕಟಿಸಿತು.

ಡಿಸೆಂಬರ್ 3 ರಂದು ಸಾಯಂಕಾಲ ಐದುವರೆ ಗಂಟೆಯ ಹೊತ್ತಿಗೆ ಪಾಕಿಸ್ಥಾನ ನಮ್ಮ ದೇಶದ ಮೇಲೆ ಪಶ್ಚಿಮ ಗಡಿಯುದ್ದಕ್ಕೂ ಬೃಹತ್ ವಾಯು ಮತ್ತು ನೆಲದ ದಾಳಿಯನ್ನು ಪ್ರಾರಂಭಿಸಿತು ಎಂದು ನಿಮಗೆ ತಿಳಿಸಲು ನಾನು ವಿಷಾದಿಸುತ್ತೇನೆ. ಅವರ ವಿಮಾನಗಳು ಶ್ರೀನಗರ, ಅಮೃತಸರ, ಪಠಾಣ್‌ಕೋಟ್, ಉತ್ತರಾಲಿ, ಅಂಬಾಲ, ಆಗ್ರಾ, ಜೋಧ್‌ಪುರ ಮತ್ತು ಅವಂತಿಪುರದ ಮೇಲೆ ಬಾಂಬ್ ದಾಳಿ ನಡೆಸಿದುವು. ಅಂಬಾಲಾ, ಫಿರೋಜ್‌ಪುರ, ಸುಲೈಮಂಕಿ, ಖೇಮ್ಕರನ್, ಪೂಂಚ್, ಮೆಹ್ದೀಪುರ ಮತ್ತು ಜೈಸೆಲ್ಮೇರೆಗಳ ಗಡಿ ನಗರಗಳು ಮತ್ತು ಪಟ್ಟಣಗಳ ಮೇಲೆ ಭಾರೀ ಶೆಲ್ ದಾಳಿ ನಡೆದಿದೆ. ಭಾರತದ ವಿರುದ್ಧದ ದಾಳಿಯನ್ನು ಎಚ್ಚರಿಕೆಯಿಂದ ಆಯೋಜಿಸಲಾಗಿದೆ ಮತ್ತು ಅದು ಪೂರ್ವಯೋಜಿತವಾಗಿತ್ತು. ಪಾಕಿಸ್ಥಾನ ಸೇನೆ ಜೈಸೆಲ್ಮೇರಿನಿಂದ ಕಾಶ್ಮೀರದವರೆಗೆ ವಿಸ್ತರಿಸಿರುವ ಭಾರತದ ಪಶ್ಚಿಮ ಗಡಿಗಳಲ್ಲಿ ಮೂರು ಗಂಟೆಯಿಂದ ಮೂರು ಗಂಟೆಯವರೆಗೆ ದಾಳಿ ನಡೆಸಿದೆ ಎಂಬ ಅಂಶದಿಂದ ಇದು ಸಾಬೀತಾಗಿದೆ.

ಈ ಆಕ್ರಮಣ ಪೂರ್ವನಿಯೋಜಿತವಾಗಿದೆ ಎಂಬುದು ನವೆಂಬರ್ 25 ರಂದು ಅಧ್ಯಕ್ಷ ಯಾಹ್ಯಾ ಖಾನ್ ಅವರು "ಹತ್ತು ದಿನಗಳಲ್ಲಿ ಯುದ್ಧಕ್ಕೆ ಹೋಗುತ್ತೇನೆ" ಎಂದು ಘೋಷಿಸಿದ್ದರು ಎಂಬ ಅಂಶದಿಂದ ಸ್ಪಷ್ಟವಾಗುತ್ತದೆ. ನಾನು ಸ್ವತಃ ಕಲ್ಕತ್ತಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮತ್ತು ಸಂಪುಟದ ಹೆಚ್ಚಿನ ಹಿರಿಯ ಸಹೋದ್ಯೋಗಿಗಳು ದೇಶದ ವಿವಿಧ ಭಾಗಗಳಲ್ಲಿದ್ದಾಗ ಪಾಕಿಸ್ಥಾನ ದಾಳಿಯನ್ನು ಪ್ರಾರಂಭಿಸಲು ಆಯ್ಕೆ ಮಾಡಿತು. ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಪಾಕಿಸ್ಥಾನದ ಪ್ರಚಾರ ಮಾಧ್ಯಮವು ಭಾರತವು ಮಧ್ಯಾಹ್ನದ ಮೊದಲು ಪಶ್ಚಿಮ ಪಾಕಿಸ್ಥಾನದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿ ದುರುದ್ದೇಶಪೂರಿತ ಪ್ರಚಾರ ದಾಳಿಯನ್ನು ಪ್ರಾರಂಭಿಸಿತು ಎಂಬುದು ಗಮನಾರ್ಹ.

ಭಾರತ ಮತ್ತು ಪಾಕಿಸ್ಥಾನ ಸ್ವಾತಂತ್ರ್ಯ ಪಡೆದ ನಂತರ ಪಾಕಿಸ್ಥಾನ ಭಾರತದ ಮೇಲೆ ದಾಳಿ ಮಾಡುತ್ತಿರುವುದು ಇದು ನಾಲ್ಕನೇ ಬಾರಿ ಎಂಬುದನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ. 1947, 1948 ಮತ್ತು 1965 ರ ನಮ್ಮ ಕಹಿ ಅನುಭವಗಳು, ಪಾಕಿಸ್ಥಾನವು ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಗೆ ಎಲ್ಲಾ ರೀತಿಯಿಂದಲೂ ಬೆದರಿಕೆ ಹಾಕಲು ದೃಢನಿಶ್ಚಯ ಹೊಂದಿದೆ ಎಂದು ನಮಗೆ ಕಲಿಸಿದೆ - ಈ ಬಾರಿ ವಿಶೇಷವಾಗಿ ಪೂರ್ವ ಬಂಗಾಳದೊಳಗಿನ ತನ್ನ ವಸಾಹತುಶಾಹಿ ಮತ್ತು ದಮನಕಾರಿ ನೀತಿಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಸಮಸ್ಯೆಯನ್ನು ಅಂತರರಾಷ್ಟ್ರೀಯಗೊಳಿಸಲು.

ನನ್ನ ದೇಶ ಮತ್ತು ನನ್ನ ಜನರಿಗೆ ಗಂಭೀರ ಅಪಾಯ ಮತ್ತು ಅಪಾಯದ ಕ್ಷಣದಲ್ಲಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಪಾಕಿಸ್ಥಾನ ಮಿಲಿಟರಿ ಯಂತ್ರದ ಸಾಹಸದಿಂದಲಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯ ಯಶಸ್ಸು ಈಗ ಭಾರತದ ಮೇಲಿನ ಯುದ್ಧವಾಗಿ ಮಾರ್ಪಟ್ಟಿದೆ. ಇದು ನಮ್ಮ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಕಡ್ಡಾಯ ಜವಾಬ್ದಾರಿಯನ್ನು ನನ್ನ ಜನರು ಮತ್ತು ನನ್ನ ಸರ್ಕಾರದ ಮೇಲೆ ಹೇರಿದೆ. ನಮ್ಮ ದೇಶವನ್ನು ಯುದ್ಧಭೂಮಿಯಲ್ಲಿ ಇರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಆದುದರಿಂದ ನಾವು ಭಾರತದ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದೇವೆ. ಪಾಕಿಸ್ಥಾನವು ನಮ್ಮೆಲ್ಲರ ಮೇಲೆ ಅಪ್ರಚೋದಿತ ದಾಳಿಯನ್ನು ಅನುಸರಿಸುವ ಗಂಭೀರ ಪರಿಣಾಮಗಳು ಪಾಕಿಸ್ಥಾನ ಸರ್ಕಾರದ ಏಕೈಕ ಜವಾಬ್ದಾರಿಯಾಗಿರುತ್ತದೆ. ನಾವು ಶಾಂತಿಪ್ರಿಯ ಜನರು ಆದರೆ ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಜೀವನ ವಿಧಾನವನ್ನು ನಾವು ರಕ್ಷಿಸದಿದ್ದರೆ ಶಾಂತಿ ಉಳಿಯಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ನಾವು ನಮ್ಮ ಪ್ರಾದೇಶಿಕ ಸಮಗ್ರತೆಗಾಗಿ ಮಾತ್ರ ಹೋರಾಡುತ್ತಿಲ್ಲ, ಆದರೆ ನನ್ನ ದೇಶಕ್ಕೆ ಬಲವನ್ನು ನೀಡಿದ ಮತ್ತು ಭಾರತದ ಸಂಪೂರ್ಣ ಭವಿಷ್ಯವನ್ನು ಅವಲಂಬಿಸಿರುವ ಮೂಲ ಆದರ್ಶಗಳಿಗಾಗಿ ಹೋರಾಡುತ್ತಿದ್ದೇವೆ. ಈ ಉದ್ದೇಶಪೂರ್ವಕ ಮತ್ತು ಅಪ್ರಚೋದಿತ ಆಕ್ರಮಣವನ್ನು ನಿರ್ಣಾಯಕವಾಗಿ ಮತ್ತು ಅಂತಿಮವಾಗಿ ಒಮ್ಮೆ ಮತ್ತು ಶಾಶ್ವತವಾಗಿ ಹಿಮ್ಮೆಟ್ಟಿಸಬೇಕು ಎಂದು ಜನರು ಮತ್ತು ಭಾರತ ಸರ್ಕಾರವು ದೃಢನಿಶ್ಚಯವನ್ನು ಹೊಂದಿದೆ ಎಂದು ನಾನು ನಿಮಗೆ ಒತ್ತಿ ಹೇಳಬೇಕು; ಇಡೀ ಭಾರತವು ಈ ದೃಢಸಂಕಲ್ಪದಲ್ಲಿ ಒಗ್ಗಟ್ಟಾಗಿ ನಿಂತಿದೆ ಮತ್ತು ಅಂತರರಾಷ್ಟ್ರೀಯ ಸಮುದಾಯವು ನಮ್ಮ ಸಂಕಷ್ಟವನ್ನು ಮೆಚ್ಚುತ್ತದೆ ಮತ್ತು ನಮ್ಮ ಉದ್ದೇಶದ ನ್ಯಾಯಯುತತೆಯನ್ನು ಅಂಗೀಕರಿಸುತ್ತದೆ ಎಂದು ನಿರೀಕ್ಷಿಸುತ್ತದೆ.

ಈ ಅಪಾಯದ ಸಮಯದಲ್ಲಿ ಭಾರತ ಸರ್ಕಾರ ಮತ್ತು ಜನರು ನಿಮ್ಮ ತಿಳುವಳಿಕೆಯನ್ನು ಬಯಸುತ್ತಾರೆ ಮತ್ತು ಪಾಕಿಸ್ಥಾನ ದುರದೃಷ್ಟವಶಾತ್ ಕೈಗೊಂಡಿರುವ ಉದ್ದೇಶಪೂರ್ವಕ ಆಕ್ರಮಣಶೀಲತೆ ಮತ್ತು ಮಿಲಿಟರಿ ಸಾಹಸ ನೀತಿಯಿಂದ ತಕ್ಷಣವೇ ಹಿಂದೆ ಸರಿಯುವಂತೆ ಮನವೊಲಿಸುವಂತೆ ನಿಮ್ಮನ್ನು ಒತ್ತಾಯಿಸುತ್ತಾರೆ. ಭಾರತದ ವಿರುದ್ಧದ ಆಕ್ರಮಣಕಾರಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಪಾಕಿಸ್ಥಾನದ ಮಾತ್ರವಲ್ಲದೆ ಇಡೀ ಉಪಖಂಡದ ಜನರಿಗೆ ಹಲವು ಪರೀಕ್ಷೆಗಳು ಮತ್ತು ಕ್ಲೇಶಗಳನ್ನು ಉಂಟುಮಾಡಿರುವ ಪೂರ್ವ ಬಂಗಾಳದ ಸಮಸ್ಯೆಯ ಮೂಲವನ್ನು ತಕ್ಷಣವೇ ನಿಭಾಯಿಸಲು ಪಾಕಿಸ್ಥಾನ ಸರ್ಕಾರದ ಮೇಲೆ ನಿಮ್ಮ ನಿಸ್ಸಂದೇಹವಾದ ಪ್ರಭಾವವನ್ನು ಬಳಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ.


ಇದು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸುವ ಬಗೆಗೆ ಅವರು ಘೋಷಿಸಿಕೊಂಡ ಕಾರಣಗಳಲ್ಲಿ ಒಂದಾಗಿದ್ದರೆ ನಿಜವಾದ ಕಾರಣ ಬೇರೆಯೇ ಇತ್ತೆಂದು ಚರಿತ್ರೆಯಿಂದ ತಿಳಿದುಬರುತ್ತದೆ. 


ಇದನ್ನು ಕುರಿತ ಬಿಬಿಸಿ ವರದಿ

ಜೂನ್ 25, 1975 ರ ಮಧ್ಯರಾತ್ರಿಯಲ್ಲಿ ಯುವ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತಿದೊಡ್ಡ ದೇಶವಾದ ಭಾರತವು ಸ್ಥಗಿತಗೊಂಡಿತು. ಯಾಕೆಂದರೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಆಗ ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಲಾಯಿತು, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಯಿತು, ಪತ್ರಿಕಾ ಬಾಯಿ ಮುಚ್ಚಲಾಯಿತು ಮತ್ತು ಸಂವಿಧಾನವು ಸಂಪೂರ್ಣ ಕಾರ್ಯಕಾರಿ ಅಧಿಕಾರದ ಸಾಧನವಾಗಿ ಬದಲಾಯಿತು. ಮುಂದಿನ 21 ತಿಂಗಳುಗಳ ಕಾಲ, ಭಾರತವು ತಾಂತ್ರಿಕವಾಗಿ ಪ್ರಜಾಪ್ರಭುತ್ವವಾಗಿತ್ತು ಆದರೆ ಸಂಪೂರ್ಣವಾಗಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ರೀತಿಯಲ್ಲಿ ಕಾರ್ಯನಿರ್ವಹಿಸಿತು.

ಅಲಹಾಬಾದ್ ಹೈಕೋರ್ಟ್‌ನ ಸ್ಫೋಟಕ ತೀರ್ಪು ಇಂದಿರಾ ಗಾಂಧಿಯವರನ್ನು ಚುನಾವಣಾ ದುಷ್ಕೃತ್ಯದಲ್ಲಿ ತಪ್ಪಿತಸ್ಥರೆಂದು ಘೋಷಿಸಿತು ಮತ್ತು 1971 ರ ಚುನಾವಣಾ ಗೆಲುವನ್ನು ಅಮಾನ್ಯಗೊಳಿಸಿತು. ರಾಜಕೀಯ ಅನರ್ಹತೆ ಮತ್ತು ಹಿರಿಯ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಬೀದಿ ಪ್ರತಿಭಟನೆಗಳ ಹೆಚ್ಚುತ್ತಿರುವ ಅಲೆಯನ್ನು ಎದುರಿಸುತ್ತಿದ್ದ ಗಾಂಧಿಯವರು, ರಾಷ್ಟ್ರೀಯ ಸ್ಥಿರತೆಗೆ ಬೆದರಿಕೆಗಳನ್ನು ಉಲ್ಲೇಖಿಸಿ ಸಂವಿಧಾನದ 352 ನೇ ವಿಧಿಯ ಅಡಿಯಲ್ಲಿ "ಆಂತರಿಕ ತುರ್ತು ಪರಿಸ್ಥಿತಿ"ಯನ್ನು ಘೋಷಿಸಲು ಆಯ್ಕೆ ಮಾಡಿಕೊಂಡರು. 

ಇತಿಹಾಸಕಾರ ಶ್ರೀನಾಥ್ ರಾಘವನ್ ಅವರು ಇಂದಿರಾ ಗಾಂಧಿಯವರ ಕುರಿತಾದ ತಮ್ಮ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಸಂವಿಧಾನವು ತುರ್ತು ಪರಿಸ್ಥಿತಿಯ ಸಮಯದಲ್ಲಿ ವ್ಯಾಪಕವಾದ ಅಧಿಕಾರಗಳನ್ನು ಅನುಮತಿಸಿತು. ಆದರೆ ನಂತರ ಏನಾಯಿತು ಎಂದರೆ "ಅಸಾಧಾರಣ ಮತ್ತು ಅಭೂತಪೂರ್ವ ಕಾರ್ಯಕಾರಿ ಅಧಿಕಾರವನ್ನು ಬಲಪಡಿಸುವುದು... ನ್ಯಾಯಾಂಗ ಪರಿಶೀಲನೆಯಿಂದ ನಿಯಂತ್ರಿಸಲ್ಪಡಲಿಲ್ಲ".

ಮೊರಾರ್ಜಿ ದೇಸಾಯಿ, ಜ್ಯೋತಿ ಬಸು ಮತ್ತು ಎಲ್.ಕೆ. ಅಡ್ವಾಣಿ ಮುಂತಾದ ಪ್ರಮುಖ ವಿರೋಧ ಪಕ್ಷದ ರಾಜಕೀಯ ವ್ಯಕ್ತಿಗಳು ಸೇರಿದಂತೆ 110,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಬಲಪಂಥೀಯರಿಂದ ಹಿಡಿದು ತೀವ್ರ ಎಡಪಂಥೀಯ ಗುಂಪುಗಳ ಮೇಲೆ ನಿಷೇಧ ಹೇರಲಾಯಿತು. ಜೈಲುಗಳು ಕಿಕ್ಕಿರಿದು ತುಂಬಿದ್ದುವು ಮತ್ತು ಜನರಿಗೆ ವಿನಾಕಾರಣ ಚಿತ್ರಹಿಂಸೆ ನೀಡುವುದು ವಾಡಿಕೆಯಾಗಿತ್ತು.

ಹೀಗೆ ಮುಂದುವರಿಯುತ್ತದೆ.

ಉಲ್ಲೇಖಗಳು

೧. https://www.bbc.com/news/articles/cn0gnvq72lko

 ಕೃಷ್ಣಪ್ರಕಾಶ ಬೊಳುಂಬು

#ಇಂದಿರಾ ಗಾಂಧಿ, # ಪಾಕಿಸ್ಥಾನ, #ನಿಕ್ಸನ್, 


Tuesday, July 8, 2025

ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರು ಸೂಚನೆ

 ಪಿ ಮಹಮ್ಮದ್ ಹೇಳುತ್ತಾರೆ: 

~~ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರನ್ನು (<ವ್ಯಕ್ತಿಯೊಬ್ಬರ ಹೆಸರು>) ಸೂಚಿಸಿದ್ದಾರೆ...~~

ನಿಜವಾಗಿ ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರು ಸೂಚಿಸಿದವನು ಪಾಕಿಸ್ಥಾನದ ಫೇಲ್ಡ್ ಮಾರ್ಷಲ್ ಆಸಿಫ್ ಮುನೀರನ ಕೈಗೊಂಬೆ ಪ್ರಧಾನಮಂತ್ರಿ ಶೆಹಬಾಜ್ ಶರೀಫ್. ಇದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ವರದಿಯಾಗಿದೆ.



 "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ #ವಾರ್ತಾಭಾರತಿ

Sunday, June 22, 2025

ಪಾಕಿಸ್ಥಾನ ಪ್ರೇಮಿ ಡೊನಾಲ್ಡ್ ಟ್ರಂಪ್

 ರಾಷ್ಟ್ರಗಳೊಳಗಿನ ಪರಸ್ಪರ ಮೈತ್ರಿಗಳು, ಪೈಪೋಟಿಗಳು ಮತ್ತು ರಾಜಕೀಯದ ಬಗ್ಗೆ ಮಾತನಾಡುವಾಗ ನಾವು ಶತಮಾನಗಳ ಚಾರಿತ್ರಿಕ ಘಟನೆಯೊಂದನ್ನು ಗ್ರಹಿಸಿ ಅದರ ಸುತ್ತ ಸಮಸ್ತ ವಿದ್ಯಮಾನಗಳನ್ನು ಒಂದು ವಾಕ್ಯದಲ್ಲಿ ವಿವರಿಸುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಆದರೆ ಆ ಘಟನೆಗಳ ಹಿಂದಿರುವ ಅದಕ್ಕಿಂತ ಆಳವಾದ ಏನೋ ಒಂದನ್ನು ಗ್ರಹಿಸದಿರುತ್ತೇವೆ. ಯಾರಾದರೂ "ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಬಗ್ಗೆ ಮೆಚ್ಚುಗೆಯನ್ನು ಏಕೆ ತೋರಿಸುತ್ತಾನೆ?" ಅಥವಾ "ಯುನೈಟೆಡ್ ಸ್ಟೇಟ್ಸ್ ಭಾರತದ ಬಗ್ಗೆ ಏಕೆ ನಿರ್ಲಿಪ್ತವಾಗಿದೆ?" ಎಂದು ಕೇಳಿದರೆ ಅವರು ನಿಜವಾಗಿ ಕೇಳುತ್ತಿರುವುದು ಅದಕ್ಕಿಂತ ಆಳವಾದ ವಿಷಯವೆಂದು ಗ್ರಹಿಸಬೇಕು. ತೆರೆಮರೆಯ ಕಥೆಗಳನ್ನು, ಭಾವನೆಗಳನ್ನು, ಇತಿಹಾಸಗಳನ್ನು ಗ್ರಹಿಸದೆ ಇದನ್ನು ಅರ್ಥೈಸಿಕೊಳ್ಳುವುದು ಅಸಂಭವವೇ ಹೌದು.

ದೇಶವೊಂದು ಆರ್ಥಿಕವಾಗಿ ವಿಕಸಿಸುವ ಘಟ್ಟದಲ್ಲಿ ಅದು ಆರ್ಥಿಕತೆಯಲ್ಲಿ ಮುಂದುವರಿಯುವುದು ಮಾತ್ರವಲ್ಲದೆ ಆ ದೇಶದೆಡೆಗಿನ ಜಾಗತಿಕ ದೃಷ್ಟಿಕೋನವೂ ಬದಲಾಗತೊಡಗುತ್ತದೆ. ಜಾಗತಿಕ ಉಪಸ್ಥಿತಿಯಲ್ಲಿ ಅದು ನಿಜವಾಗಿ ಮೇಲುಮೇಲಕ್ಕೆ ಏರುವುದು ಗಮನಕ್ಕೆ ಬರುತ್ತದೆ. ಇದನ್ನು ಕೆಲವರು ಸಂತೋಷದಿಂದ ಸ್ವೀಕರಿಸಿದರೆ ಇನ್ನು ಕೆಲವರು ಭಯಭೀತರಾಗಬಹುದು, ಮತ್ತೂ ಕೆಲವರು ನಿರ್ಲಿಪ್ತರಾಗಿರಬಹುದು. ಭಾರತ ಈಗ ಬೆಳೆಯುತ್ತಿರುವ ದೇಶವಲ್ಲ, ಅದು ಪ್ರಜ್ವಲಿಸುತ್ತಿದೆ. ಹಳೆಯ ಕಾಲದ ವ್ಯವಸ್ಥೆಯಲ್ಲಿ ಎಂದಿಗೂ ಯೋಜಿಸಲಾಗದ ಸಂಗತಿಗಳು ಇಲ್ಲಿ ಘಟಿಸುತ್ತಲಿವೆ. ದೇಶವೊಂದು ತನ್ನ ವಿಧಿಯನ್ನು ತಾನೇ ನಿರ್ಣಯಿಸಿಕೊಳ್ಳುವುದು ಇಲ್ಲಿ ಗಮನಕ್ಕೆ ಬಂದಿದೆ. 

ಪಾಕಿಸ್ಥಾನವನ್ನು ನಾನು ಪ್ರೀತಿಸುತ್ತೇನೆ ಎನ್ನುವ ಟ್ರಂಪ್ ಇನ್ನೇನಾದರೂ ಗುರಿಯಿಟ್ಟುಕೊಂಡು ಇದನ್ನು ಹೇಳುತ್ತಿದ್ದಾನೆಯೇ ಎಂದು ಯೋಚಿಸಬೇಕು. ಪಾಕಿಸ್ಥಾನದ ಸೇನಾ ಮುಖ್ಯಸ್ಥನಿಗೆ ಪಾಕಿಸ್ಥಾನದ ಮೇಲಣ ಪರಮ ಪ್ರೀತಿಯಿಂದ ಊಟ ಬಡಿಸಿದ ಡೊನಾಲ್ಡ್ ಟ್ರಂಪ್ ನೋಬೆಲ್ ಪುರಸ್ಕಾರವನ್ನು ಗುರಿಯಾಗಿಟ್ಟುಕೊಂಡುದು ನಿಜವೇ ಆಗಿದ್ದರೆ ಆ ಪ್ರೀತಿಯನ್ನು ಈ ಬಗೆಯಲ್ಲಿ ವಿಶ್ಲೇಷಿಸಬಹುದು. ಒಂದು ದೇಶ ಇನ್ನೊಂದು ದೇಶವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ ಆ ಮೆಚ್ಚುಗೆಗೆ ಏನು ಬೆಲೆ ಮತ್ತು ಅದು ಏನು ಖರೀದಿಸುತ್ತದೆ ಎಂದು ಕೇಳಬೇಕಾಗುತ್ತದೆ. ಅದು ಪ್ರೀತಿಯೋ ಅಥವಾ ಹತೋಟಿಯೋ; ಅದು ನಿಜವಾದದ್ದೋ ಅಥವಾ ಸ್ವಂತ ಅನುಕೂಲಕ್ಕಾಗಿ ಮಾಡಿಕೊಂಡ ಸಂಬಂಧವೋ? ಇವು ಸರಳ ಪ್ರಶ್ನೆಗಳಲ್ಲ ಮತ್ತು ಅವುಗಳ ಉತ್ತರಗಳೂ ಸರಳವಾಗಿರಲೊಲ್ಲವು.ಸತ್ಯವೇನೆಂದರೆ ಶಕ್ತಿಶಾಲಿ ತನ್ನ ನೆಲೆಯಲ್ಲಿ ತಾನು ಸ್ಥಿತವಾಗಿರುತ್ತಾನೆ. ಅವನಿಗೆ ಯಾರ ಅನುಮತಿಯೂ ಬೇಕಾಗದು. ನಿಜವಾದ ಶಕ್ತಿಯೆಂಬುದು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ ಅಥವಾ ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. 

ಡೊನಾಲ್ಡ್ ಟ್ರಂಪ್ ಅವರಂತಹ ಯಾರಾದರೂ ಪಾಕಿಸ್ಥಾನವನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಆ ಪ್ರೀತಿ ಸರಸಮಯ ಪ್ರೇಮ ಸಂಭಾಷಣೆಯದಲ್ಲ, ತೋರಿಸಿದ ಪ್ರೀತಿ ಪ್ರೀತಿಯ ಬಗೆಗಿನದಲ್ಲ, ಅದು ಇತಿಹಾಸ ಅಥವಾ ಸ್ನೇಹದ ಬಗೆಗಿನದ್ದೂ ಅಲ್ಲ. ಇದು ಅನುಕೂಲಸಿಂಧು, ಇದು ರಾಜ್ಯತಂತ್ರಕ್ಕೆ ಸಂಬಂಧಪಟ್ಟುದು ಮತ್ತು ಚದುರಂಗದ ಹಲಗೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ಚಾತುರ್ಯವೆಂದು ಯೋಚಿಸಬೇಕು. ರಾಜಕೀಯ ಜಗತ್ತಿನಲ್ಲಿ ಪ್ರೀತಿ ಪದಗಳಿಗಿಂತ ಹೆಚ್ಚಾಗಿ ಕ್ರಿಯೆಗಳ ಮೂಲಕ ಮಾತನಾಡುತ್ತದೆ. ಒಬ್ಬ ಪ್ರಭಾವಿ ವ್ಯಕ್ತಿ ವೇದಿಕೆಯ ಮೇಲೆ ನಿಂತು "ನಾನು ಈ ದೇಶವನ್ನು ಪ್ರೀತಿಸುತ್ತೇನೆ" ಎಂದು ಹೇಳಿದಾಗ ಅವನ ನಿಜವಾದ ಉದ್ದೇಶ ಸುತ್ತಲಿನ ದೇಶಗಳಿಗೆ ಸೂಚನೆ ಕೊಡುವುದೇ ಆಗಿರುತ್ತದೆ. ಇದು ಆಟದ ಭಾಗವಾದ ಚಲನೆ ಮತ್ತು ನಾವು ನೋಡುತ್ತಿರುವುದು ಬಹಿರಂಗವಾದ ಚಲನೆಗಳನ್ನು ಮಾತ್ರ. ಹೊರಗೆ ಕಂಡುಬರುವುದು ನಗುವ ಮುಖಗಳು, ವ್ಯಂಗ್ಯವಾಡುವ ನಾಲಗೆಗಳು ಮತ್ತು ಬಾಹ್ಯ ಪರಿಣಾಮಗಳು ಮಾತ್ರ. ಹಾಗಾದರೆ ಪಾಕಿಸ್ಥಾನ ಎಲ್ಲಿದೆ ಎಂದು ಕೇಳಿದರೆ ಪಾಕಿಸ್ಥಾನವು ಈ ಮೊದಲು ಎಲ್ಲಿತ್ತೋ ಈಗಲೂ ಅದೇ ಸ್ಥಾನದಲ್ಲಿದೆ. ಅದು ಎಷ್ಟೇ ಆಂತರಿಕ ಹೋರಾಟಗಳನ್ನು ಕಂಡಿರುವ ದೇಶವಾದರೂ ಆರ್ಥಿಕತೆಯಲ್ಲಿ ಎಷ್ಟೇ ಕುಸಿದುಹೋಗಿದ್ದರೂ ಜಾಗತಿಕ ರಾಜ್ಯತಂತ್ರದ ಪ್ರಮುಖ ನೆಲೆಗಳಾದ ಅಫ್ಘಾನಿಸ್ಥಾನ, ಚೀನಾ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿರುವ ದೇಶ ಅದು. ಜನರು ಇಷ್ಟಪಟ್ಟರೂ ಇಷ್ಟಪಡದಿದ್ದರೂ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ದೇಶಗಳಲ್ಲಿ ಒಂದಾಗಿದೆ. ಅವರ ಪ್ರೀತಿಯಿದ್ದರೆ ಯಾರಿಗಾದರೂ ಎಂದಿಗಾದರೂ ಪ್ರಯೋಜನ ಆಗಬಲ್ಲುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.


ಪಾಕಿಸ್ಥಾನವನ್ನು ಪ್ರೀತಿಸುವವರು ಭಾರತದಲ್ಲಿ ಯಾವ ಕೊರತೆ ಕಂಡಿದ್ದಾರೆ ಎಂದು ಚಿಂತಿಸುವ ಅಗತ್ಯವೇ ಇಲ್ಲ. ಭಾರತ ನೆತ್ತಿಯ ಮೇಲಿನ ಸೂರ್ಯ. ಇದು ಇಲ್ಲಿನ ಲಭ್ಯ ತಂತ್ರಜ್ಞಾನದಿಂದಲೂ, ಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚಿನ ತೊಡಗುವಿಕೆಯಿಂದಲೂ, ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾಗಿಯಾಗುವ ರೀತಿಯಿಂದಲೂ ವೇದ್ಯವಾಗುತ್ತದೆ. ಭಾರತದ ಪರವಾದ ಮತ್ತು ಭಾರತದ್ದಾದ ಧ್ವನಿಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ಗಟ್ಟಿಯಾಗಿಯೂ ಹೆಮ್ಮೆಯಿಂದಲೂ ಮೊಳಗುತ್ತಲಿರುವುದು ಇದೇ ಮೊದಲಿಗೆ ಎಂಬಂತೆ ಗೋಚರಿಸುತ್ತಲಿದೆ. ಇದು ನಿಶ್ಶಬ್ದವಾದ ವಿಕಸನವಲ್ಲ; ಇದು ಪರಾಕ್ರಮಶಾಲಿಯೂ ಉತ್ಸಾಹಭರಿತವೂ ಆಧ್ಯಾತ್ಮಿಕವೂ ಬೌದ್ಧಿಕವೂ ಆದ ವಿಕಸನವಾಗಿದೆ. ಇದು ಹೊಸದಾದ ಆತ್ಮವಿಶ್ವಾಸ; ಇಂದಿನ ದಿನಮಾನಗಳಲ್ಲಿ ಭಾರತವನ್ನು ತಡೆಯಬಲ್ಲ ಶಕ್ತಿ ಈ ಲೋಕದಲ್ಲಿಲ್ಲ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...