Wednesday, October 30, 2024

ಸಂತ ಬದರುದ್ದಿನ್ - ಬದರಿನಾಥ

 ಶಬರಿಮಲೆಯಲ್ಲಿ ವಾವರ ಸ್ವಾಮಿ ಇರುವಂತೆ ಬದರಿನಾಥದಲ್ಲಿ ಅದೇ ಸ್ಥಾನ ಸಂತ ಬದರುದ್ದಿನ್ ಅವರಿಗೆ ಇದೆ ಎಂದು ತಿಳಿಯಬಹುದು. ವಾವರ ಸ್ವಾಮಿ ನಿಜವಾಗಿ ಅಯ್ಯಪ್ಪನ ಭಕ್ತನಾಗಿದ್ದನೆಂಬುದು ಭಕ್ತರ ಅಂಬೋಣ. ಆದರೆ ಇಂದು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ವಾವರ ಸ್ವಾಮಿಯ ಭೇಟಿ ಮಾಡದಿದ್ದರೆ ಅಯ್ಯಪ್ಪನ ದರ್ಶನ ಸಂಪೂರ್ಣವಲ್ಲ ಎಂದು ತಿಳಿಯುತ್ತಾರೆ. ಭಕ್ತನಾಗಿದ್ದ ವಾವರ ಸ್ವಾಮಿಯ ಭೇಟಿ ಮಾಡಿ ಕಾಣಿಕೆ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಮುಸಲ್ಮಾನ ವಾವರನ ಭೇಟಿಗಾಗಿ ಕಾಣಿಕೆ ಕೊಡುವ ಅಥವಾ ಅಲ್ಲಿ ದೊರಕುವ ಭಸ್ಮ ಸ್ವೀಕರಿಸುವ ಅಗತ್ಯವಿಲ್ಲವೆಂದು ತೋರುತ್ತದೆ. ಭಸ್ಮಧಾರಿಯಾದ ಅಯ್ಯಪ್ಪ ಭಕ್ತನನ್ನು ಮುಸ್ಲಿಂ ಎಂದು ಪರಿಗಣಿಸುವ ಅಗತ್ಯವಿಲ್ಲ ಮತ್ತು ಈ ಬಗೆಯ ಕಾಣಿಕೆಗಳನ್ನು ಸ್ವೀಕರಿಸುವುದು ಅವರ ಆಚಾರದ ಪ್ರಕಾರ ಶಿರ್ಕ್ ಎನಿಸಿಕೊಳ್ಳುತ್ತದೆ. ಹೀಗಾಗಿ ನಿಜವಾಗಿ ಅವರ ಮತಾನುಸರಣೆಗೆ ಅದರ ಅಗತ್ಯವಿಲ್ಲ.  

ಬದರಿನಾಥದಲ್ಲಿ ಇಂದಿಗೆ ಇರುವ ಅವಧಿ ಭಾಷೆಯ ಆರತಿ ಶ್ಲೋಕವನ್ನು ಬರೆದವರು ಸಂತ ಬದರುದ್ದಿನ್ ಎನ್ನಲಾಗುತ್ತದೆ. ಆದ ಸಂತ ಬದರುದ್ದಿನ್ ಎಂಬವರು ಭಸ್ಮಧಾರಿಯಾದ ಶಿವಭಕ್ತನೆಂದು ಅಲ್ಲಿಯೇ ಹೇಳಲಾಗುತ್ತದೆ. ಭಸ್ಮಧಾರಿಯಾದ ಶಿವಭಕ್ತನನ್ನು ಮುಸಲ್ಮಾನನನ್ನು ಮುಸ್ಲಿಂ ಎಂದು ಪರಿಗಣಿಸುವ ಅಗತ್ಯವಿಲ್ಲ. ಸಂತ ಬದರುದ್ದಿನ್ ಕಥೆಯಲ್ಲ, ನಿಜವಾಗಿ ಇದ್ದವರೆಂದು ಪರಿಗಣಿಸಿದರೂ ಶಿವಭಕ್ತನಾದ ಬದರುದ್ದಿನ್ ಅವರಿಗೆ ದರ್ಗಾ ಇರುವುದಿಲ್ಲ ಎಂದು ತಿಳಿಯಬೇಕು. 

ಇನ್ನು ಸೂಫಿ ಬದರುದ್ದಿನ್ ದರ್ಗಾ (ಬಾಘ್‍ಪತ್) ಎನ್ನಲಾಗುವ ಪ್ರದೇಶವೂ ಸಹ ಆಕ್ರಮಣ ಮಾಡಿಕೊಂಡ ಸ್ಥಳವೆಂಬುದಾಗಿ ವರದಿಗಳಿವೆ. 

Saturday, October 5, 2024

ಕಟ್ಟಲೆಡೆಗೊಡುವ ದಾರಿಯೆನಗಿರಲಿ

 ಮತಪಂಥಗಳ ಮೂಲತತ್ವಗಳನ್ನು ಅರಿತು ಜೀವಿತದಲ್ಲಿ ಸನ್ಮಾರ್ಗಗಳನ್ನು ರೂಪಿಸಿಕೊಳ್ಳುವ ಸಾಧ್ಯತೆ ನಿಚ್ಚಳವಿದ್ದಾಗಲೂ ಅದರಲ್ಲಿರಬಹುದಾದ ಕುಂದುಕೊರತೆಗಳನ್ನು ನೀಗಿಸಿಕೊಳ್ಳಲಾಗದೆ ತೀವ್ರಗಾಮಿತ್ವಗಳನ್ನಳವಡಿಸಿಕೊಳ್ಳುವ ದಾರಿ ಕೆಡವಲೆಡೆಗೊಡುವ ದಾರಿ, ಅದು ಕಟ್ಟಲೆಡೆಗೊಡುವ ದಾರಿಯಾಗಿರದು.


ಮುಸ್ಲಿಂ ವಿಶ್ವಾಸಿಗಳ ಚರ್ಚ್

 ಸತ್ಯ ವೇದವನ್ನು ಓದಿ ಮಾನಸಾಂತರ ಹೊಂದಿದ‌; ಸತ್ಯ ವಿಶ್ವಾಸಿಗಳೆಂದು ತಮ್ಮನ್ನು ತಾವು ಕರೆದುಕೊಂಡು ಅಸತ್ಯ ವಿಶ್ವಾಸಿಗಳಾಗಿರುವ ಜನರನ್ನು ಸತ್ಯ ವೇದದ ಪಾರಾಯಣಗಳ ಮೂಲಕ ನೇರವಾಗಿ ಸ್ವರ್ಗಕ್ಕೆ ಪ್ರವೇಶ ದೊರಕಿಸಿಕೊಡುವ ಕಾರ್ಯಕ್ರಮಗಳನ್ನು ಹಾಗೆ ಕರೆಯಲಾಗುತ್ತದೆ. ‌



Saturday, August 17, 2024

ನಾದಬ್ರಹ್ಮ

 ವ್ಯಕ್ತಗಳಲ್ಲಿ ಅವ್ಯಕ್ತವಾದ, ಜೀವಗಳಲ್ಲಿ ಜೀವವಾಗಿ ನೆಲೆಸಿರುವ ಪರಮ ಚೈತನ್ಯವನ್ನಾರಾಧಿಸಲಿಕ್ಕೆ ಒದಗಬಲ್ಲ ಉಪಾಸನೆಗಳಲ್ಲಿ ಪ್ರಮುಖವಾದ ನಾದೋಪಾಸನೆ ಮೋಕ್ಷ ಸಾಧನೆಗಿರುವ ಸಾಧನವೆನ್ನಲಾಗಿದೆ. ಭಾರತೀಯ ಪರಂಪರೆಯಲ್ಲಿ ನಾದವನ್ನು ದೈವತ್ವದ ಅಭಿವ್ಯಕ್ತಿಯೆಂದು ಗ್ರಹಿಸಲಾಗಿದೆ. ಶಾರ್ಙ್ಗದೇವನ ಸಂಗೀತರತ್ನಾಕರದಲ್ಲಿ “ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿರುವ, ನಿತ್ಯವೂ ಆನಂದವನ್ನು ಕೊಡಬಲ್ಲ, ಜೀವಕಾರಕವಾದ ನಾದಬ್ರಹ್ಮವನ್ನು ಪೂಜಿಸುವುದಾಗಲಿ” ಎನ್ನಲಾಗಿದೆ. ಭವ್ಯವಾದ ಈ ಆಶಯವನ್ನು ವಾಗ್ಗೇಯಕಾರರಾದ ತ್ಯಾಗರಾಜ ಸ್ವಾಮಿಗಳು ಬಲವಾಗಿ ಪ್ರತಿಪಾದಿಸಿದರು. ತ್ಯಾಗರಾಜ ಸ್ವಾಮಿಗಳು “ರಾಗಸುಧಾರಸ ಪಾನಮು ಜೇಸಿ ರಾಜಿಲ್ಲವೇ ಓ ಮನಸಾ” ಎಂದು ಸಾರಿದ್ದಾರೆ. “ರಾಗವೆಂಬ ಅಮೃತವನ್ನು ಕುಡಿದು ಆನಂದಿಸು, ಯಾಕೆಂದರೆ ಇದು ಸಕಲ ಸಂಪದಗಳನ್ನೂ ಕೊಡಬಲ್ಲುದು. ಸದಾಶಿವ ಸ್ವರೂಪವಾದ ಓಂಕಾರವನ್ನು ತಿಳಿದವರು ಜೀವನ್ಮುಕ್ತರಾಗುತ್ತಾರೆ” ಎಂಬುದು ಈ ಕೃತಿಯ ಸಾರ. ಇಲ್ಲಿ ರಾಗವೆಂಬುದು ನಾದ ಮತ್ತು ನಾದಬ್ರಹ್ಮ ಎಂಬುದು ಸಂಗೀತ ರೂಪದ ಪರಬ್ರಹ್ಮವೇ ಆಗಿದೆ. ಇದು ವ್ಯಕ್ತಿಗಳಿಗೆ ಸಲ್ಲುವ ಅಭಿಧಾನವಲ್ಲ.

Sunday, October 20, 2019

ದಕ್ಷಿಣಾಮೂರ್ತಿ ಸ್ತೋತ್ರದ ಭಾವಾನುವಾದ

ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ
ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ |
ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ
ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ ||

ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು
ತನ್ನೊಳಚ್ಚರಿಯನಿರಗೊಟ್ಟಡಿಯ ಪೊಡಮಡುತ |
ದೇಶಕಾಲಗಳದೀ ತೋರಿಕೆಯನಣಿಗೊಳಿಸಿ
ನಿರ್ವಿಕಲ್ಪವ ಮಾರ್ಪಡಿಪಡಿಯ ಪೊಡಮಡುತ || ೨ ||

ಮಿಡಿತವದೊಂದರಿಂದೀಯಿದರನಳಗೊಳಿಸಿ
ಈಯಿದದೆಂಬುದನರಿಯಗೊಟ್ಟಡಿಯ ಪೊಡಮಡುತ |
ನಿಜದರಿವನಿರಗೊಡುತ ಇಳೆಯೊಳಾ ಪರಮವನು
ಮರುವಾರಿ ಬಾರಗೊಡದಡಿಯ ಪೊಡಮಡುತ || ೩ ||


ಹಲವು ರಂಧ್ರಗಳೊಡಗೊಂಡ ಘಟವೊಂದದರ
ಬೆಳಕ ಬಿತ್ತರಿಪಂತಿಡಗೊಟ್ಟಡಿಯ ಪೊಡಮಡುತ |
ಬಗೆಯೆ ತಾನು ತಾನೆಂದರಿವನೊಡಮೂಡಿಸುತ
ಕರಣಗಳ ಹಲವನಿರಗೊಟ್ಟಡಿಯ ಪೊಡಮಡುತ || ೪ ||


ಭ್ರಾಂತಿಯಿಂ ಹಲಬಗೆಯ ಭಾವಗಳನೊಳಗೊಳುತ
ಪ್ರಾಣದೇಹವೆನೆ ಮರೆ಼ಗಳನಿರಗೊಟ್ಟಡಿಯ ಪೊಡಮಡುತ |
ಬಾಲ ನಾನೆನುತ ಬಾಲಿಕೆಯೆ ತಾನೆನುತ
ತೋರಿಕೆಯ ಜಗದೆ ಮತಿಗಳನಿರಗೊಟ್ಟಡಿಯ ಪೊಡಮಡುತ || ೫ ||

ಕರಣಗಳ ಹಲವನಿರಗೊಡುತ ತಾನೆಡೆವಡುತ
ನಾಡಿಗಳ ಮರೆಯನಿರಗೊಟ್ಟಡಿಯ ಪೊಡಮಡುತ |
ನಿದಿರೆಯಿಂದೆಚ್ಚರಿತು ಇರವಿನರಿವಾ ಪರಿಯ
ತಾನು ತಾನೆನುತ ಬಗೆಯಗೊಟ್ಟಡಿಯ ಪೊಡಮಡುತ || ೬ ||

ಶಮನೀವ ಮುದಿರೆಯದೊಂದರಿಂದರ್ಚಿಪಗೆ
ತಾನು ತಾನೆನುತಲರಿಯಗೊಟ್ಟಡಿಯ ಪೊಡಮಡುತ |
ಎಚ್ಚರದ ಅನುಭವದೆ ಮತ್ತೆಳವೆಯೆನೆ ಸ್ಥಿತಿಗಳೊಳು
ಮಿಡಿವ ಮಿಡಿತಗಳನಿರಗೊಟ್ಟಡಿಯ ಪೊಡಮಡುತ || ೭ ||


ಕಾರ್ಯಕಾರಣ ಬಂಧದಿಂದೀ ಜಗವನೀಕ್ಷಿಸುತ
ಬಂಧಗಳ ಹಲವನಿರಗೊಟ್ಟಡಿಯ ಪೊಡಮಡುತ |
ಎಚ್ಚರದೆ ನಿದಿರೆಯೊಳೆ ತೋರಿಕೆಗಳಿರಗೊಡುತ
ಪೆರಮೆಗಳ ಬಗೆಯಗೊಟ್ಟಡಿಯ ಪೊಡಮಡುತ || ೮ ||

ಪ್ರಣವದೋಂಕಾರವನೆಡೆಬಿಡದೆ ಜಪಿಸುತಲಿರುತ
ಇರವು ಅರಿವಿನ ನಲವನಿರಗೊಟ್ಟಡಿಯ ಪೊಡಮಡುತ |
ಈ ಚರಾಚರದಖಿಲದೊಳೆ ವ್ಯಾಪಿಸುತ
ತಾನು ತಾನಲ್ಲದುದಿಲ್ಲವೆಂಬುದನರಿಯಗೊಟ್ಟಡಿಯ ಪೊಡಮಡುತ || ೯ ||

ಹದುಳವಿದು ತನ್ನೊಳಗೆ ಹಸಾದವಿದೆಂದೆನುತ
ಅಹಮಿಕೆಯ ಪೊರೆಯೊಳಹಮಿಕೆಯನಿರಗೊಟ್ಟಡಿಯ ಪೊಡಮಡುತ |
ಶ್ರವಣದಿಂ ಮನನದಿಂ ಹದಗೊಂಡ ಮನಸ್ಸುಗಳು
ಧ್ಯಾನಿಸುತಲರಿವನರಿವನು ಪಡೆಯಗೊಟ್ಟಡಿಯ ಪೊಡಮಡುತ || ೧೦ ||

Wednesday, September 18, 2019

ಎಣೆಯಿಲ್ಲದ ಚೆಲುವೆ

ಎಣೆಯಿಲ್ಲದ ಚೆಲುವೆ,
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.

ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂ
ಕಣ್ಣಲ್ಲೆ ನುಡಿವವಳು;
ತನ್ನ ಕಣ್ಣಲ್ಲೆ ನುಡಿವವಳು
ನಾಲಗೆ ನುಡಿಯದ ಮಾತುಗಳೆಲ್ಲವ
ತನ್ನ ಕಣ್ಣಲ್ಲೆ ನುಡಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.

ಮೈಹೊಳಪಿನ ಕಾಂತಿಯೆ ಇಲ್ಲದೆ ಹೋದರೂ
ಬಂಗಾರದಂಥವಳು;
ಮನದೆ ಬಂಗಾರದಂಥವಳು
ಮೈಬಣ್ಣದ ಭ್ರಾಂತಿಗೆ ಸೋಲದೆ ಇದ್ದರೂ ಬಂಗಾರದಂಥವಳು;
ಮನದೆ ಬಂಗಾರದಂಥವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.

ಮಾತುಗಳಾಡುತ ಮೈಯ ಮರೆವವಳಲ್ಲ
ಮಾತನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ಮಿತಿಗಳನರಿಯದೆ ಆಡದೆ ಇದ್ದರೂ
ಹಿತವನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.

ನಾ ನುಡಿಯದೆ ಇದ್ದರೂ ಮನಸ್ಸಿನ ಮಾತನು
ತಾನಾಗಿ ಅರಿವವಳು
ತಾನಾಡದೆ ಒಂದನೂ ಉಳಿಸದೆ ಇದ್ದರೂ ತಾನಾಗಿ ಅರಿವವಳು;
ಎಲ್ಲವ ತಾನಾಗಿ ಅರಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.

Wednesday, February 19, 2014

ಅನುಭವ

ಅನುಭವ

ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ

ಜನಿಮರಣಂಗಳಲ್ಲೂ ಇಹಪರಂಗಳಲ್ಲೂ (೨)
ಬಿಡದಲೆ ಕಾಯುತ್ತ ದಾರಿಗಾಣಿಸಿದೆ
ಹೊಸತನು ಅರಿತಾಗ ಹಳತನು ತೊರೆದಾಗ
ಅಪರವೆಂಬುದು ಕಾಣೆ ನಿನ್ನ ಸೃಷ್ಟಿಯೊಳಗೆ
ನಿನ್ನನು ಅರಿತಾಗ ಮುಚ್ಚಿದ್ದು ತೆರೆದಾಗ
ನೀನೇ ನೀನಿದ್ದುದ ಕಂಡೆ ನಿನ್ನ ಸೃಷ್ಟುಯೊಳಾಗೆ

ಬರಿದೊಂದು ಸ್ಪರ್ಶದ ಮೋಹಕ ಮಾಯೆಯಲಿ
ಅರಿಯದ ತೀರದೊಳು ಎನ್ನ ತಂದು ಕೂರಿಸಿದೆ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...