Tuesday, August 13, 2013

ಸ್ಫೂರ್ತಿ

ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು

ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||

ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||

 

[soundcloud url="https://api.soundcloud.com/tracks/69280433" width="100%" height="166" iframe="true" /]

ಸನಿಹ

ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು
ಈ ಕ್ಷಣ ನೀನೆಲ್ಲಿಲ್ಲಿಹೆಯೋ
ಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆ

ಪ್ರತಿ ಜೀವದಲೂ ನಿನ್ನನೇ ಕಾಣುವೆ
ಹಿಂಬಾಲಿಸುವೆ ನಿನ್ನ ನೆರಳಾಗಿ
ನೀನಲ್ಲದೆ ಬೇರೆ ಲೋಕವ ಕಾಣೆನು
ಎಲ್ಲಿದ್ದರೂ ಕಾಣುವೆ ನಿನ್ನಿರವ

ಮರಕೆಯ ಕಾಣೆನು ಇರುಳುಗಳಲ್ಲಿ
ಬಂಧಿಯೇ ಆದೆನು ಮಾಯೆಯೊಳು
ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು

ಪ್ರೇಮ ನಿವೇದನೆ

nivedane

ಅವನ ಕಣ್ಣಿನ ಮಿಂಚು
ಏನೇನೋ ಹೇಳಿದೆ ಇಂದು
ಅವನ ನಾಲಗೆ ಮಾತ್ರ ಮೂಕವಾಗಿದೆ

ಅರೆ ಬಿರಿದ ತುಟಿಗಳ ಚಲನೆ
ನೂರು ಬಯಕೆಗಳ ಸಾರಿವೆ
ಬರಿಯ ಮಾತೊಂದನ್ನೂ ನುಡಿಯನೇತಕೆ

ಅವನ ಕಣ್ಣಿನ ನೋಟ
ಕಾಳಜಿಯ ಸೂಸಿದೆ
ಅವನ ಆ ಮುಗುಳುನಗೆ
ಕನಸಿನಲಿ ಕಾಡಿದೆ

ಅವನೆಂದು ನಿವೇದಿಸಿಯಾನು
ಕೊನೆಯಿರದ ಪ್ರೇಮವನ್ನು
ಮೌನಗಳ ಕೋಟೆಗ ಬಾಗಿಲನ್ನು ಸೀಳುತ್ತ

ಪ್ರಣಯ



ಪ್ರತಿ ದಿನದ ಅಗಲಿಕೆಯಲ್ಲೂ
ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ
ಪ್ರಣಯವೊಂದು ಇದ್ದೇ ಇರದೇ
ಎದೆಯೊಳೊಂದು ಸೆಲೆಯಾಗಿ

ಪ್ರತಿ ಮೃದುಲ ಸ್ಪರ್ಶದಲ್ಲೂ
ಹರಿವ ಕಂಬನಿಯಲ್ಲೂ
ಅರಿಯದೊಂದು ಹೆದರಿಕೆಯಲ್ಲೂ
ಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದೆ

ಅನುದಿನದ ಬಡಿದಾಟದಲೂ
ಅರಳುತ್ತಿರುವ ಹೂವಿನಂತೆ
ಇಮ್ಮಡಿಸುತಿದ್ದೇ ಇರದೇ
ಪ್ರೀತಿ ಎದೆಯ ಗೂಡಿನೊಳು

ಪೌರ್ಣಮಿ

paurnamiಹೇಳಿಬಿಡು ಮತ್ತೊಮ್ಮೆ
ಮನದ ನಿಜದ ಭಾವನೆಯನ್ನು
ಒಳಗಣ ಆ ಪ್ರಣಯವನ್ನು
ಜಗದ ಮುಂದೆ ತೋರಿಬಿಡು

ಪೂರ್ಣಚಂದ್ರನಂತೆ ಬಂದು
ತುಂಬಿಕೊಂಡು ಆಗಸವನ್ನು
ಪೌರ್ಣಮಿಯ ರಾತ್ರಿಯಲ್ಲಿ
ನನ್ನ ಬಂದು ಸೇರಿಬಿಡು

ನೀನಿರದೆ

ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು
ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು

ನೀನಿರದೆ ಜೇನಿಲ್ಲ
ನೀನಿರದೆ ತುಟಿಯಿಲ್ಲ
ನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ ಬಗೆಯೆಂತು

ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ

ನೀನಿರದೆ ಕಾವಿಲ್ಲ
ನೀನಿರದೆ ನೋವಿಲ್ಲ
ನೀನಿರದೆ ಸುಡುಬಿಸಿಯಲಿ ಹದಗಾವನು ಈವ ಬಗೆಯೆಂತು

ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ

ನೀನಿರದೆ ಮಾತಿಲ್ಲ
ನೀನಿರದೆ ಕನಸಿಲ್ಲ
ನೀನಿರದೆ ಮೆಲುಮಾತಿನ ಸವಿಗನಸನು ಕಾಂಬ ಬಗೆಯೆಂತು

ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ

ಚಿತ್ರಪಟ

ನೋಡನೋಡುತ್ತಿರೆ ಮೂಡಿಬಂದಿತು ಕಣ್ಣ ಮುಂದೊಂದು ಪಟಲ
ತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲ

ಕೇಳಿದರು ಗೆಳತಿಯರು ಯಾರವನು ಯಾರವನು
ನಿನ್ನ ಪಟಲವನು ತುಂಬಿದವನು
ಉತ್ತರವ ನಾನರಿಯೆ ನಾನರಿಯೆ ಎನದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ

ಎದೆಯ ಕೆನ್ವಾಸಿನ ಮೇಲೆ ಬರೆದಿದ್ದೆ ಪಟವೊಂದು
ಕಂಡ ಕನಸುಗಳ ಮಾರೊಡಲನಾಂತು
ಎದೆಯೊಳವಿತಿಟ್ಟ ಗುಟ್ಟುಗಳಿ ಗುತ್ತರವ ನೀಯದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ

ಬಲು ದೀರ್ಘವಾಗಿದ್ದ ಕನಸಿನಿಂದೆಚ್ಚರಗೊಂಡೆ
ಸುತ್ತ ಕಂಡುಬಂದುದು ಬರಿಯ ಹೊದಿಕೆಯ ಅರಿವೆ

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...